ಪ್ರತಾಪಗಢ, ಸೆ. 16 (ಪಿಟಿಐ)– ‘ವಿವಾದಾತ್ಮಕ ವಿಷಯಗಳ ಬಗ್ಗೆ ವಿರೋಧಾಭಾಸದ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರು ಪ್ರತಿ ಬಾರಿ ತಮ್ಮ ಮುಖವಾಡ ಬದಲಿಸುತ್ತಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಇಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
‘ಅಯೋಧ್ಯೆ, ಸಂವಿಧಾನದ 370ನೇ ವಿಧಿ ರದ್ದು, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ವಿವಾದಾತ್ಮಕ ವಿಷಯಗಳನ್ನು ಕೈಬಿಡುವುದಾಗಿ ಒಬ್ಬ ಮುಖಂಡ ಹೇಳಿದರೆ, ಇನ್ನೊಂದೆಡೆ ‘ಐದು ವರ್ಷಗಳವರೆಗೆ ಈ ವಿಷಯಗಳಿಗೆ ಬಿಡುವು ನೀಡಲಾಗಿದೆ’ ಎಂದು ಇನ್ನೊಬ್ಬರು ಹೇಳುತ್ತಾರೆ’ ಎಂದು ಸೋನಿಯಾ ಟೀಕಿಸಿದರು.
ಅಲಿಗಢ ವರದಿ: ‘ಸೆಪ್ಟೆಂಬರ್‌ನಲ್ಲಿಯೇ ಕಾರ್ಗಿಲ್ ಅತಿಕ್ರಮಣ ನಡೆದಿದೆ ಎಂಬ ಆರೋಪ ಮಾಡುತ್ತಿರುವ ಕಾಂಗ್ರೆಸ್ ತನಗೆ ಈ ಮಾಹಿತಿ ಯಾರಿಂದ ದೊರೆಯಿತು ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಒತ್ತಾಯಿಸಿದರು.
ಕಾರ್ಗಿಲ್ ಬಿಕ್ಕಟ್ಟಿನ ಕುರಿತು ರಾಷ್ಟ್ರದ ಜನರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ನೀಡುತ್ತಿರು ವುದರ ಜೊತೆಗೆ ಸೈನಿಕರ ಆತ್ಮಸ್ಥೈರ್ಯ ಕುಂದಿಸುತ್ತಿದೆ. ಸೆಪ್ಟೆಂಬರ್‌ನಲ್ಲಿ ಅತಿಕ್ರಮಣ ನಡೆದಿದೆ ಎಂಬುದು ಶುದ್ಧಸುಳ್ಳು ಎಂದು ವಾಜಪೇಯಿ ಅವರು ಇಲ್ಲಿಯ ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ಹೇಳಿದರು.