ಶುಕ್ರವಾರ, ಸೆಪ್ಟೆಂಬರ್ 17, 2021
31 °C

25 ವರ್ಷಗಳ ಹಿಂದೆ: ಮಂಗಳವಾರ, ಸೆಪ್ಟೆಂಬರ್‌ 3, 1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯ ಶಿಕ್ಷಣ ಪ್ರವೇಶ: ಸರ್ಕಾರದ ಅರ್ಜಿ ವಜಾ
ಬೆಂಗಳೂರು, ಸೆ.2–
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣದ ಪ್ರವೇಶ ಪ್ರಕ್ರಿಯೆಯನ್ನು ಎರಡು ವಾರ ಮುಂದಕ್ಕೆ ಹಾಕಿದ್ದ ಹೈಕೋರ್ಟಿನ ಮಧ್ಯಂತರ ಆಜ್ಞೆಯ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಾಮ್‌ ಪ್ರಕಾಶ್‌ ಸೇಥಿ ಮತ್ತು ಎಸ್‌. ರಾಜೇಂದ್ರಬಾಬು ಅವರಿದ್ದ ವಿಭಾಗೀಯ ಪೀಠ ಇಂದು ತಳ್ಳಿಹಾಕಿತು.

ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಪುರಸ್ಕರಿಸಿದ್ದ ಹೈಕೋರ್ಟ್‌ ಈ ಪ್ರಕ್ರಿಯೆಯನ್ನು ಎರಡು ವಾರದ ಮಟ್ಟಿಗೆ ಮುಂದೂಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿತ್ತು.

ಈ ಪ್ರವೇಶ ಪ್ರಕ್ರಿಯೆಯನ್ನು ಆಗಸ್ಟ್‌ 30 ರಂದು ಆರಂಭಿಸಬೇಕಾಗಿದ್ದು, ಆ.29ರ ಈ ಆಜ್ಞೆಯಿಂದ ವಿದ್ಯಾರ್ಥಿಗಳಿಗೆ ಅಸಹನೀಯ ತೊಂದರೆ ಆಗುತ್ತದೆ ಎಂಬ ವಾದವನ್ನು ರಿಟ್‌ನಲ್ಲಿ ಮಂಡಿಸಲಾಗಿತ್ತು.

ರೈಲ್ವೆ ವಲಯಕ್ಕೆ ಹುಬ್ಬಳ್ಳಿಯೇ ಪ್ರಶಸ್ತ: ನಿಜಲಿಂಗಪ್ಪ
ಬೆಂಗಳೂರು, ಸೆ.2–
ರಾಜ್ಯಕ್ಕೆ ಹೊಸದಾಗಿ ಮಂಜೂರಾಗಿರುವ ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿಯನ್ನು ಹುಬ್ಬಳ್ಳಿಯಲ್ಲೇ ಸ್ಥಾಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್‌.ನಿಜಲಿಂಗಪ್ಪ ಇಂದು ಇಲ್ಲಿ ಆಗ್ರಹಪಡಿಸಿದರು.

‘ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿಯನ್ನು ಹುಬ್ಬಳ್ಳಿಯಲ್ಲಿಯೇ ಸ್ಥಾಪಿಸಬೇಕು ಎಂಬುದು ಎಲ್ಲ ಜನತೆಯ ಮತ್ತು ಜನಪ್ರತಿನಿಧಿಗಳ ಒತ್ತಾಯವಾಗಿದೆ. ನಾನೂ ಮೊದಲಿನಿಂದಲೂ ಇದನ್ನೇ ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಕೇಂದ್ರ ಸರ್ಕಾರ ಜನಾಭಿಪ್ರಾಯಕ್ಕೆ ಸ್ಪಂದಿಸಬೇಕು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

ಕಾವೇರಿ ಮಧ್ಯಂತರ ತೀರ್ಪಿನ ಚೌಕಟ್ಟಿನಲ್ಲಿ ಚರ್ಚೆ: ಕರುಣಾನಿಧಿ
ತಿರುಚಿನಾಪಳ್ಳಿ, ಸೆ.2 (ಯುಎನ್‌ಐ, ಪಿಟಿಐ)–
ಕಾವೇರಿ ಜಲವಿವಾದದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರೊಂದಿಗೆ ನಡೆಯುತ್ತಿರುವ ಸಂಧಾನ ಮಾತುಕತೆಗಳು ನ್ಯಾಯ ಮಂಡಳಿಯ ಮಧ್ಯಂತರ ತೀರ್ಪಿನ ಚೌಕಟ್ಟಿನಲ್ಲೇ ನಡೆಯುವುದು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಇಂದು ಇಲ್ಲಿ ಪುನರುಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು