ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 19–12–1995

Last Updated 18 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚು ಸಾಲ
ಬೆಂಗಳೂರು, ಡಿ. 18–
ಹಣದುಬ್ಬರವನ್ನು ತಗ್ಗಿಸಿ ಬೆಲೆಗಳನ್ನು ಹತೋಟಿಯಲ್ಲಿಡಲು ಉತ್ಪಾದನಾ ಉದ್ದೇಶಕ್ಕೆ ಹೆಚ್ಚು ಸಾಲ ನೀಡುವುದು ಬ್ಯಾಂಕಿಂಗ್‌ ರಂಗದ ಉದ್ದೇಶವಾಗಿದ್ದು, ಪ್ರಸಕ್ತ ಹಣಕಾಸು ವರ್ಷದ ಮಾರ್ಚ್‌ 17ರಿಂದ ನವೆಂಬರ್‌ 24ರ ಅವಧಿಯಲ್ಲಿ ಆಹಾರೇತರ ಉತ್ಪಾದನಾ ಕ್ಷೇತ್ರಗಳಿಗೆ ಸಾಲ ನೀಡಿಕೆ ಮೊತ್ತ 1994–95ರ ಇದೇ ಅವಧಿಗಿಂತ 26,825 ಕೋಟಿ ರೂಪಾಯಿಗಳಷ್ಟು ಜಾಸ್ತಿಯಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಗೌರ್ನರ್‌ ಡಾ. ಸಿ.ರಂಗರಾಜನ್‌ ಅವರು ಇಂದು ಇಲ್ಲಿ ಹೇಳಿದರು.

ವಿಶಾಲ ಮೈಸೂರು ಉದ್ಯಮ ಸಂಘ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡುತ್ತಾ, ದೇಶದೊಳಗೆ ಬೆಲೆಯು ಹತೋಟಿಯಲ್ಲಿದ್ದರೆ ಮಾತ್ರವೇ ಡಾಲರಿಗೆದುರು ರೂಪಾಯಿ ಮೌಲ್ಯವನ್ನೂ ಉತ್ತಮ ಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಸಾಧ್ಯ ಎಂದರು.

ಟೆಲಿಕಾಂ ಹಗರಣ: ಸಂಸತ್‌ ಎದುರು ಧರಣಿ– ರಾಷ್ಟ್ರಪತಿಗೆ ಬಿಜೆಪಿ ಮೊರೆ
ನವದೆಹಲಿ, ಡಿ. 18 (ಪಿಟಿಐ)–
ಟೆಲಿಕಾಂ ವಿವಾದದಿಂದಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಒಂಬತ್ತನೇ ದಿನವೂ ಯಾವುದೇ ಕಲಾಪ ನಡೆಯದೆ ಹೊಸ ದಾಖಲೆ ಸೃಷ್ಟಿಯಾಯಿತು. ಸರ್ಕಾರದ ನಿಲುವನ್ನು ಪ್ರತಿಭಟಿಸಿ ಬಿಜೆಪಿಯೇತರ ಪ್ರತಿಪಕ್ಷಗಳು ಸಂಸತ್‌ ಭವನದ ಮುಖ್ಯ ದ್ವಾರದಲ್ಲಿ ಧರಣಿ ನಡೆಸಿದವು.

ಟೆಲಿಕಾಂ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಪರಿಶೀಲಿಸಲು ಸಂಸದೀಯ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸಲಹೆ ಮಾಡಲು ರಾಷ್ಟ್ರಪತಿ ಡಾ. ಶಂಕರ ದಯಾಳ್‌ ಶರ್ಮಾ ಅವರನ್ನು ಬಿಜೆಪಿ ಆಗ್ರಹಪಡಿಸಿತು. ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ನಿಯೋಗ ಇಂದು ರಾಷ್ಟ್ರಪತಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT