25 ವರ್ಷಗಳ ಹಿಂದೆ ಪ್ರಜಾವಾಣಿ: ಶುಕ್ರವಾರ, 12–1–1996

ಕಾಶ್ಮೀರ ಚುನಾವಣೆ ಪ್ರಶ್ನೆ ಇತ್ಯರ್ಥಕ್ಕೆ 2 ವಾರ ಗಡುವು
ನವದೆಹಲಿ, ಜ. 11 (ಪಿಟಿಐ, ಯುಎನ್‌ಐ)– ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಸಂಬಂಧದಲ್ಲಿ ಪರಸ್ಪರ ಚರ್ಚೆ ನಡೆಸಿ, ಆ ವಿಷಯದಲ್ಲಿ ಕೈಗೊಳ್ಳುವ ನಿರ್ಧಾರವನ್ನು ಎರಡು ವಾರಗಳಲ್ಲಿ ತನಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸೂಚಿಸಿತು.
ಚುನಾವಣೆ ಸಮಯ ನಿರ್ಧರಿಸುವ ಅಧಿಕಾರ ಯಾರಿಗಿದೆ ಎಂಬ ಬಗ್ಗೆ ತಾನು ನ್ಯಾಯಾಂಗ ತೀರ್ಪು ನೀಡಿದರೆ ಅದರಿಂದ ಚುನಾವಣಾ ಆಯೋಗದ ಅಧಿಕಾರ ಮೊಟಕುಗೊಳ್ಳಬಹುದು ಎಂದು ಸಹ ಕೋರ್ಟ್ ಎಚ್ಚರಿಕೆ ನೀಡಿತು.
ಕಾಶ್ಮೀರ ಚುನಾವಣೆ ಮುಂದೂಡಿದ ಆಯೋಗದ ಕ್ರಮ ಪ್ರಶ್ನಿಸಿ ಪ್ಯಾಂಥರ್ಸ್ ಪಕ್ಷದ ಪ್ರೊ. ಭೀಮಸಿಂಗ್ ರಿಟ್ ಅರ್ಜಿ ಸಲ್ಲಿಸಿದ್ದರು.
ಪೊಲೀಸ್ ಠಾಣೆಗಳಲ್ಲಿ ಆಟೊ ಚಾಲಕರು, ಮಾಲೀಕರ ವಿವರ
ಬೆಂಗಳೂರು, ಜ. 11– ಆಟೊ ಚಾಲಕರು ಎಸಗುತ್ತಿರುವ ದುಷ್ಕೃತ್ಯಗಳನ್ನು ಹತ್ತಿಕ್ಕುವ ಉದ್ದೇಶದಿಂದ ಆಟೊ ಮಾಲೀಕರು ಹಾಗೂ ಚಾಲಕರ ಇತಿಹಾಸವುಳ್ಳ ದಾಖಲೆಯನ್ನು ಪೊಲೀಸ್ ಠಾಣೆಗಳಲ್ಲಿ ತೆರೆಯಲು ನಗರದ ಪೊಲೀಸರು ನಿರ್ಧರಿಸಿದ್ದಾರೆ.
ಆಟೊ ಚಾಲಕರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿರುವ ಬ್ರಿಟಿಷ್ ಪ್ರಜೆ ಜೇಮ್ಸ್ ವಿಲಿಯಂ ಸ್ಟುವರ್ಟ್ ಕೊಲೆ ಹಾಗೂ ಆತನ ಗೆಳತಿಯ ಮೇಲಿನ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕಮಿಷನರ್ ಈ ನಿರ್ಧಾರ ಕೈಗೊಂಡಿದ್ದಾರೆ. ‘ಆಟೊ ಚಾಲಕರ ಮೇಲೆ ಪೊಲೀಸರಿಗೆ ನಿಯಂತ್ರಣವೇ ಇಲ್ಲ’ ಎಂಬುದನ್ನು ಪೊಲೀಸ್ ಕಮಿಷನರ್ ಟಿ.ಶ್ರೀನಿವಾಸುಲು ಒಪ್ಪಿಕೊಂಡರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.