ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಸೋಮವಾರ, 15–1–1996

Last Updated 14 ಜನವರಿ 2021, 19:31 IST
ಅಕ್ಷರ ಗಾತ್ರ

ತಮಿಳುನಾಡಿಗೆ ಮತ್ತೆ ನೀರು ಬಿಡಲು ರಾಜ್ಯಕ್ಕೆ ಸೂಚನೆ ಇಲ್ಲ: ದೇವೇಗೌಡ

ಬೆಂಗಳೂರು, ಜ. 14– ‘ತಮಿಳುನಾಡಿಗೆ ಐದು ಟಿಎಂಸಿ ಅಡಿ ನೀರನ್ನು ಬಿಡಬೇಕು ಎಂದು ಕೇಂದ್ರದಿಂದ ರಾಜ್ಯಕ್ಕೆ ಸೂಚನೆ ಬಂದಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಆ ರೀತಿಯ ಸೂಚನೆ ಇಲ್ಲಿಯವರೆಗೆ ಬಂದಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

‘ಪ್ರಧಾನಿ ಅವರೊಂದಿಗೆ ಮಾತುಕತೆ ನಡೆಸಿದ ಯಾವುದೇ ಸಂದರ್ಭದಲ್ಲೂ ಐದು ಅಥವಾ ಮೂರು ಟಿಎಂಸಿ ಅಡಿ ನೀರನ್ನು ಬಿಡಲು ಅವರು ಸೂಚಿಸಲಿಲ್ಲ. ಕಾವೇರಿ ಸಮಸ್ಯೆಗೆ ಸಂಬಂಧಿಸಿದಂತೆ ಮೂರು ಬಾರಿ ಅವರನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಅವರಿಗೆ ಪರಿಸ್ಥಿತಿಯ ಬಗ್ಗೆ ಮನವರಿಕೆ ಆಗಿದೆ. ನ್ಯಾಯಮಂಡಳಿಯ ಕಲಾಪಗಳನ್ನು ಮುಂದಕ್ಕೆ ಹಾಕಲೂ ಅವರಿಗೆ ತಿಳಿಸಿದ್ದೇನೆ’ ಎಂದು ಅವರು ಒತ್ತಿ ಹೇಳಿದರು.

ರೈತರಿಗೆ ರಿಯಾಯಿತಿ ಡೀಸೆಲ್‌ ಜನರೇಟರ್‌

ಬೆಂಗಳೂರು, ಜ. 14– ರಾಜ್ಯದಲ್ಲಿ ವಿದ್ಯುಚ್ಛಕ್ತಿ ಕೊರತೆ ಇರುವುದರಿಂದ ರೈತರಿಗೆ ಶೇ 10ರಷ್ಟು ರಿಯಾಯಿತಿ ದರದಲ್ಲಿ ಡೀಸೆಲ್‌ ಜನರೇಟರ್‌ಗಳನ್ನು ಕರ್ನಾಟಕ ಕೃಷಿ ಕೈಗಾರಿಕೆ ನಿಗಮದ ಮೂಲಕ ಸರಬರಾಜು ಮಾಡುವ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದೆ.

ಡೀಸೆಲ್‌ ಜನರೇಟರ್‌ಗಳ ಸರಬರಾಜಿಗಾಗಿ ಸರ್ಕಾರ 10 ಕಂಪನಿಗಳೊಂದಿಗೆ ಒಪ್ಪಂದಕ್ಕೆ ಬಂದಿದ್ದು, ರೈತರು ತಮಗೆ ಬೇಕಾದ ಕಂಪನಿಯ ಜನರೇಟರ್‌ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆ 1997ನೇ ಜೂನ್‌ 30ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಕೃಷಿ ಸಚಿವ ಸಿ.ಬೈರೇಗೌಡ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿ ಹಾಡಹಗಲೇ ಗುಂಡು ಹಾರಿಸಿ ಹಣದ ಚೀಲ ಅಪಹರಣ

ಬೆಂಗಳೂರು, ಜ. 14– ಮಾರುತಿ ಕಾರಿನಲ್ಲಿ ಬಂದ ಅಪರಿಚಿತರಿಬ್ಬರು ಬ್ಯಾಂಕಿನಿಂದ ಹಣ ತೆಗೆದುಕೊಂಡು ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿ ಹಣದ ಚೀಲ ಕಸಿದುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನ ಅಲಸೂರಿನಲ್ಲಿ ಇಂದು ಹಾಡಹಗಲೇ ನಡೆದಿದೆ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ಅಲಸೂರಿನ ಗುಪ್ತಾ ಬಡಾವಣೆಯ ನಿವಾಸಿ ಪಳನಿವೇಲು (45) ಎಂಬುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಡ ತೋಳು ಹಾಗೂ ಹೊಟ್ಟೆಯಿಂದ ಎರಡು ಗುಂಡುಗಳನ್ನು ಹೊರ ತೆಗೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT