ಅಧಿಕಾರಿಗಳ ವರದಿ ‘ಸತ್ಯಕ್ಕೆ ದೂರ’ ತನಿಖೆಗೆ ಆಗ್ರಹ
ಬೆಂಗಳೂರು, ಸೆ. 7 – ಹಾಸನ ಲಾಠಿ ಪ್ರಯೋಗ ಪ್ರಕರಣದಲ್ಲಿ ಅಧಿಕಾರಿಗಳಿಂದ ಸರ್ಕಾರಕ್ಕೆ ಬಂದ ವರದಿಗಳು ಸತ್ಯಕ್ಕೆ ದೂರ ಎಂದು ವಿಧಾನಸಭೆಯಲ್ಲಿ ಇಂದು ಆಪಾದಿಸಿದ ವಿರೋಧ ಪಕ್ಷದ ಸದಸ್ಯರು, ಅಲ್ಲಿನ ಜಿಲ್ಲಾ ಪೊಲೀಸ್ ಅಧಿಕಾರಿಯನ್ನು ತಕ್ಷಣ ಸಸ್ಪೆಂಡ್ ಮಾಡಿ ಇಡೀ ಪ್ರಕರಣದ ಬಗ್ಗೆ ನ್ಯಾಯಾಂಗ ವಿಚಾರಣೆಯನ್ನು ನಡೆಸಬೇಕು ಎಂದು ಆಗ್ರಹಪಡಿಸಿದರು.
ನಿನ್ನೆ ಪರಿಸ್ಥಿತಿಯ ಪ್ರತ್ಯಕ್ಷ ಪರಿಶೀಲನೆ ನಡೆಸಿ ಮರಳಿದ ಐದು ಮಂದಿ ಸದಸ್ಯರು ಒಂದು ಗಂಟೆ ಕಾಲ, ತಾವು ಕಂಡು ಕೇಳಿದಂತೆ, ಅಲ್ಲಿನ ಪರಿಸ್ಥಿತಿಯನ್ನು ಸಭೆಯ ಗಮನಕ್ಕೆ ತಂದರು. ಅದನ್ನು ಅನುಸರಿಸಿ, ‘ಇನ್ನೂ ಹೆಚ್ಚು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ’ ಕಂದಾಯ ಮಂತ್ರಿ ಹುಚ್ಚಮಾಸ್ತಿಗೌಡರು ಆಶ್ವಾಸನೆ ನೀಡಿದರು.
***
ಎಂದೂ ಗುಂಪುಗಾರಿಕೆಯಲ್ಲಿ ತೊಡಗಿಲ್ಲ; ಬೇರೆಯವರು ಮಾಡಿದರೆ ಕಷ್ಟ– ಅರಸು
ಬೆಂಗಳೂರು, ಸೆ. 7– ತಾವು ಎಂದೂ ಗುಂಪುಗಾರಿಕೆಯಲ್ಲಿ ತೊಡಗಿಲ್ಲವೆಂದು ಇಂದು ಇಲ್ಲಿ ತಿಳಿಸಿದ ಮುಖ್ಯಮಂತ್ರಿ ದೇವರಾಜ ಅರಸು ಅವರು, ‘ಬೇರೆಯವರು ಗುಂಪುಗಾರಿಕೆ ಮಾಡಿದರೆ, ಆಗ ಕಷ್ಟವಾಗುತ್ತದೆ’ ಎಂದರು.
ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಮತ್ತಿತರ ಹೈಕಮಾಂಡ್ ಸದಸ್ಯರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿ ಮುಖ್ಯಮಂತ್ರಿಗಳು ಬೆಳಿಗ್ಗೆ ನಗರಕ್ಕೆ ಹಿಂದಿರುಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.