ಕಾಂಟ್ರಾಕ್ಟ್ ಬಸ್‌ಗೆ ಇತಿಶ್ರೀ: ಸಾರಿಗೆ ಸಂಸ್ಥೆಯಿಂದಲೇ ನಿರ್ವಹಣೆಗೆ ನಿರ್ಧಾರ
ಬೆಂಗಳೂರು, ಸೆ. 9 – ಇನ್ನು ಮುಂದೆ ಖಾಸಗಿ ಕಾಂಟ್ರಾಕ್ಟ್ ಬಸ್ಸುಗಳಿಗೆ ಅವಕಾಶ ನೀಡದೆ ರಸ್ತೆ ಸಾರಿಗೆ ಸಂಸ್ಥೆಯೇ ಅದನ್ನು ನಡೆಸಬೇಕೆಂದು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಕೆ.ಎಚ್. ರಂಗನಾಥ್ ಅವರು ಇಂದು ವಿಧಾನ ಪರಿಷತ್‌ನಲ್ಲಿ ಹೇಳಿದರು.
ಮೋಟಾರು ವಾಹನ ತೆರಿಗೆ (ತಿದ್ದುಪಡಿ) ವಿಧೇಯಕದ ಮೇಲಿನ ಚರ್ಚೆಯ ಕಾಲದಲ್ಲಿ ಸದಸ್ಯರಿಂದ ತೀವ್ರ ಟೀಕೆಗೆ ತುತ್ತಾದ ಕಾಂಟ್ರಾಕ್ಟ್ ಬಸ್ಸುಗಳ ವಿಚಾರ ಪ್ರಸ್ತಾಪಿಸಿದ ಸಚಿವರು ‘ಈಗಾಗಲೇ ಶಾಸನದ ಪ್ರಕಾರ ಪ್ರಾರಂಭಿಕ ಪ್ರಕಟಣೆ ನೀಡಿ ಸಾರ್ವಜನಿಕರಿಂದ ಆಕ್ಷೇಪ ಮತ್ತು ಸಲಹೆ ಕೇಳಲಾಗಿದೆ. ಅವು ಬಂದ ಮೇಲೆ ಮುಖ್ಯಮಂತ್ರಿ ವಿಚಾರಣೆ ಮಾಡಿದ ನಂತರ ಅಂತಿಮ ಪ್ರಕಟಣೆ ಹೊರಬೀಳುತ್ತದೆ’ ಎಂದರು.
***
ಆಪಾದನೆ ಮೊದಲ ನೋಟಕ್ಕೆ ಸರಿ ಎಂದು ನಿರ್ಧರಿಸುವ ಅಧಿಕಾರ ಮುಖ್ಯಮಂತ್ರಿಗಿಲ್ಲ
ಬೆಂಗಳೂರು, ಸೆ. 9 – ಆಪಾದನೆಗಳನ್ನು ತಮ್ಮ ವಿರುದ್ಧವೇ ಮಾಡಲಾಗುತ್ತಿರುವುದರಿಂದ ಮೊದಲ ನೋಟಕ್ಕೆ ಸರಿ ಎಂದು ಕಂಡುಬರುವುವೆ ಎಂಬುದನ್ನು ನಿರ್ಧರಿಸುವ ‘ನೈತಿಕ ಅಧಿಕಾರ’ ಮುಖ್ಯಮಂತ್ರಿ ಅವರಿಗಿಲ್ಲವೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಎಚ್.ಡಿ.ದೇವೇಗೌಡರು ಇಂದು ಇಲ್ಲಿ ತಿಳಿಸಿದರು.