ಭಾನುವಾರ, ಸೆಪ್ಟೆಂಬರ್ 26, 2021
21 °C

50 ವರ್ಷಗಳ ಹಿಂದೆ: ಗುರುವಾರ 1.7.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮೀನು ಹೋದರೆ ಬದಲು ಭೂಮಿ
ಬೆಂಗಳೂರು, ಜೂನ್ 30–
ಹೇಮಾವತಿ ಜಲಾಶಯ ನಿರ್ಮಾಣ ಕಾರಣ ಜಮೀನು ಕಳೆದುಕೊಳ್ಳುವವರಿಗೆ ಬದಲು ಜಮೀನು ಒದಗಿಸುವ ಸಂಬಂಧದ ನಿಯಮಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ.

4 ಎಕರೆಗಿಂತ ಕಡಿಮೆ ಕುಷ್ಕಿ ಜಮೀನು ಮುಳುಗಡೆಯಾಗುವ ರೈತರಿಗೆ 4 ಎಕರೆ ಕುಷ್ಕಿ ಜಮೀನನ್ನು ಬೇರೆ ಕಡೆ ಒದಗಿಸಲಾಗುವುದು.

ನಾಲ್ಕು ಎಕರೆಗಿಂತ ಹೆಚ್ಚು ಪ್ರದೇಶ ಮುಳುಗಡೆಯಾದ ಸಂದರ್ಭಗಳಲ್ಲಿ, ಮುಳುಗಡೆಯಾದ ಪ್ರದೇಶದ ಅರ್ಧದಷ್ಟು ಜಮೀನನ್ನು ಕನಿಷ್ಠ 4 ಎಕರೆ ಹಾಗೂ ಪರಮಾವಧಿ 10 ಎಕರೆಗಳ ಮಿತಿಗೊಳಪಟ್ಟು ಒದಗಿಸಲಾಗುವುದು.

ಮೂವರೂ ‘ಸೋಯುಜ್’ ಗಗನಗಾಮಿಗಳ ಮರಣ
ಮಾಸ್ಕೋ, ಜೂನ್ 30–
ಅಂತರಿಕ್ಷದಲ್ಲಿ 24 ದಿನಗಳಷ್ಟು ದೀರ್ಘಕಾಲ ಬೀಡುಬಿಟ್ಟು ಹೊಸ ವಿಕ್ರಮ ಸಾಧಿಸಿದ ರಷ್ಯಾದ ಅಂತರಿಕ್ಷ ನೌಕೆ ಸೋಯುಜ್‌–11ರ ಮೂವರು ಗಗನ ಯಾತ್ರಿಗಳು ಇಂದು ತಮ್ಮ ನೌಕೆಯಲ್ಲೇ ಮೃತರಾದರು.

ಕಾರ್ಯಕ್ರಮದಂತೆ ಕರಾರುವಾಕ್ಕಾಗಿ ಭೂಮಿಗೆ ವಾಪಸು ಇಳಿದು ಬಂದಂತೆ ಕಂಡುಬಂದ ಸೋಯುಜ್ ನೌಕೆ ಭೂಸ್ಪರ್ಶ ಮಾಡಿದ ತಕ್ಷಣದಲ್ಲೇ, ಹೆಲಿಕಾಪ್ಟರಿನಲ್ಲಿ ಬಂದು ಅದನ್ನು ಸಂಧಿಸಿದ ಸಹಾಯಕರು ನೌಕೆಯ ಬಾಗಿಲನ್ನು ತೆಗೆದಾಗ, ಅದರಲ್ಲಿದ್ದ ಮೂವರು ಗಗನಯಾತ್ರಿಗಳೂ ಸತ್ತು ಹೋಗಿದ್ದುದು ಕಂಡುಬಂತು.

ಸುದೀರ್ಘ ಯಾನ ಕೈಗೊಂಡಿದ್ದ ಜಾರ್ಜಿ ಡೊಬ್ರೋವೋಲ್‌ಸಿ, ವ್ಲಾಡಿಸ್ಲಾವ್ ವೋಲ್ನೋವ್ ಮತ್ತು ವಿಕ್ಟರ್ ಪ್ಯಾಟ್ಸೆಯೇವ್ ಈ ಮೂವರು, ಅಂತರಿಕ್ಷ ದಲ್ಲಿ ಮಾನವ ಎಂದೂ ನಡೆಸದಿದ್ದಂಥ ಅತ್ಯಂತ ವಿವರಪೂರ್ಣ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದ್ದರು.

ಶಾಖ ರಕ್ಷಣಾ ಕವಚದ ವಿಫಲತೆ ಸಾವಿಗೆ ಕಾರಣ ಅಮೆರಿಕ ತಜ್ಞರ ಊಹೆ
ಹ್ಯೂಸ್ಟನ್,  ಜೂನ್ 30–
ಗಗನನೌಕೆ ‘ಸೋಯುಜ್‌–11’ ಭೂಮಿಯ ವಾತಾವರಣವನ್ನು ಮತ್ತೆ ಪ್ರವೇಶಿಸುವುದರಲ್ಲಿದ್ದಾಗ ಶಾಖ ರಕ್ಷಣಾ ಕವಚದ ವ್ಯವಸ್ಥೆ ವಿಫಲವಾದುದೇ ರಷ್ಯಾ ಗಗನಯಾತ್ರಿಗಳ ಸಾವಿಗೆ ಕಾರಣವಾಗಿರಬಹುದೆಂದು ಅಂತರಿಕ್ಷಯಾನ ಕುರಿತ ಇಲ್ಲಿಯ ತಜ್ಞರು ಊಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು