ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ:31–10–1972

Last Updated 30 ಅಕ್ಟೋಬರ್ 2022, 20:00 IST
ಅಕ್ಷರ ಗಾತ್ರ

ಪತ್ರಿಕೆಗಳ ಪುಟ ಮಿತಿ: ಕೇಂದ್ರ ಸರ್ಕಾರದ ಆಜ್ಞೆ– ಸುಪ್ರೀಂ ಕೋರ್ಟ್‌ನಿಂದ ರದ್ದು

ನವದೆಹಲಿ, ಅಕ್ಟೋಬರ್‌ 30– ವೃತ್ತ ಪತ್ರಿಕೆಗಳ ಪುಟಸಂಖ್ಯೆಯ ಮೇಲೆ ಮಿತಿ ಹೇರುವ ಕೇಂದ್ರ ಸರ್ಕಾರದ 1972–73ನೇ ಸಾಲಿನ ನ್ಯೂಸ್‌ ಪ್ರಿಂಟ್‌ ಹತೋಟಿ ಆಜ್ಞೆಯನ್ನು ಸುಪ್ರೀಂ ಕೋರ್ಟ್‌ ಇಂದು ರದ್ದುಪಡಿಸಿತು.

ವೃತ್ತಪತ್ರಿಕೆಗಳ ಪುಟ ಸಂಖ್ಯೆಯನ್ನು ಹತ್ತು ಪುಟಗಳಿಗೆ ಮಿತಿಗೊಳಿಸುವ ಮುದ್ರಣ ಕಾಗದ ನಿಯಂತ್ರಣಾಜ್ಞೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ, ಇಂಥ ಮಿತಿ ಹೇರುವುದರಿಂದ ಸಂವಿಧಾನದಲ್ಲಿ ಭರವಸೆ ನೀಡಲಾಗಿರುವ ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುವುದೆಂದು ಬಹುಮತದ ತೀರ್ಪಿನಲ್ಲಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ನ ಬಹುಮತದ ಈ ತೀರ್ಪನ್ನು ಶ್ರೇಷ್ಠ ನ್ಯಾಯಮೂರ್ತಿ ಎಸ್‌.ಎಂ. ಸಿಕ್ರಿ ಮತ್ತು ನ್ಯಾಯಮೂರ್ತಿಗಳಾದ ಜಗನ್ಮೋಹನ ರೆಡ್ಡಿ, ಎ.ಎನ್‌. ರಾಯ್‌ ಅವರಿದ್ದ ಪೀಠ ಇಂದು ನೀಡಿತು.

ಅಭಿವೃದ್ಧಿ ತೆರಿಗೆ ಕಾನೂನು ಮಾರ್ಪಾಡಿಗೆ ಸರ್ಕಾರದ ತೀವ್ರ ಆಲೋಚನೆ: ಅರಸು

ಹೊಸಪೇಟೆ, ಅಕ್ಟೋಬರ್‌ 30– ‘ದೇಶದಲ್ಲಿ ಅನೇಕ ಬೃಹತ್‌ ಯೋಜನೆಗಳು ನಿರ್ಮಾಣವಾಗಿ ಅನೇಕ ವರ್ಷಗಳು ಕಳೆದಿದ್ದರೂ ಸರ್ಕಾರಕ್ಕೆ ಸರಿಯಾದ ಪ್ರತಿಫಲ ದೊರೆಯುತ್ತಿಲ್ಲ. ಆದರೆ ರೈತರ ಆದಾಯವು ಅನೇಕ ಪಟ್ಟು ಹೆಚ್ಚಿದೆ. ಜಮೀನಿನ ಬೆಲೆ ಒಂದೇ ಸಮನಾಗಿ ಏರುತ್ತಿದೆ’ ಎಂದು ಮುಖ್ಯಮಂತ್ರಿ ದೇವರಾಜ ಅರಸು
ತಿಳಿಸಿದರು.

ಈ ಲೋಪವನ್ನು ಹೋಗಲಾಡಿಸಿ, ಹೊಸ ಯೋಜನೆಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುವಂತೆ ಆದಾಯವನ್ನು ಪಡೆಯಲು ಅಭಿವೃದ್ಧಿ ತೆರಿಗೆ ಕಾನೂನನ್ನು ಮಾರ್ಪಾಡು ಮಾಡುವ ಬಗ್ಗೆ ರಾಜ್ಯ ಸರ್ಕಾರ ತೀವ್ರವಾಗಿ ಆಲೋಚಿಸುತ್ತಿದೆಯೆಂದು ಅವರು ಪ್ರಕಟಿಸಿದರು.

ಮುಖ್ಯಮಂತ್ರಿಗಳು ನಿನ್ನೆ ಹೊಸಪೇಟೆಯಲ್ಲಿ 76.5 ಲಕ್ಷ ರೂ. ವೆಚ್ಚದ ಒಳಚರಂಡಿ ಯೋಜನೆಯ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಸರ್ಕಾರವು ರಾಜ್ಯದಲ್ಲಿ ದೊರೆಯುವ ಎಲ್ಲ ಸಂಪನ್ಮೂಲಗಳನ್ನು ಉಪಯೋಗಿಸಿ
ಕೊಳ್ಳುವ ಇಚ್ಛೆಯನ್ನು ಹೊಂದಿದ್ದು, ಅವುಗಳ ಉಪಯೋಗವನ್ನು ಹೊಂದುವವರ ಸಹಕಾರ ಈ ದಿಸೆಯಲ್ಲಿ ಅಗತ್ಯವೆಂದು ಮುಖ್ಯಮಂತ್ರಿಗಳು ಹೇಳಿ, ಸರ್ಕಾರದ ಹಣ ಹೂಡಿಕೆಗೆ ತಕ್ಕ ಪ್ರತಿಫಲ ದೊರೆಯದಿದ್ದರೆ ಹೊಸ ಯೋಜನೆಗಳಿಗೆ ಹಣವನ್ನೊದಗಿಸಲು ಕಷ್ಟವಾಗುವುದೆಂದು ತಿಳಿಸಿದರು.

ದಾರಿದ್ರ್ಯ ನಿವಾರಣೆ: ಆರ್ಥಿಕ ಸ್ವಾವಲಂಬನೆ ಸಾಧನೆಗೆ ಆದ್ಯತೆ

ನವದೆಹಲಿ, ಅಕ್ಟೋಬರ್‌ 30– ಬಡತನ ನಿವಾರಣೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸುವುದೇ ಮೂಲಗುರಿಯಾಗಿ ಇರುವ ಐದನೇ ಯೋಜನೆ ಧೋರಣೆ ಕುರಿತ ದಾಖಲೆ ಪತ್ರವನ್ನು ಯೋಜನಾ ಆಯೋಗ ಇಂದು ಅಂತಿಮವಾಗಿ ಸಿದ್ಧಗೊಳಿಸಿತು.

ಸಮಗ್ರವಾಗಿ ಶೇ 5.5ರಷ್ಟು ಅಭಿವೃದ್ಧಿ ಸಾಧಿಸುವ ಗುರಿಯನ್ನು ಈ ಯೋಜನೆಯಲ್ಲಿ ರೂಪಿಸಲಾಗಿದೆ. 1974–79ನೆಯ ಈ ಯೋಜನೆ ಅವಧಿಯಲ್ಲಿ 1971–72ರ ಬೆಲೆಯಂತೆ 51,165 ಕೋಟಿ ರೂ. ವೆಚ್ಚದ ದಾಖಲೆ ಪತ್ರವನ್ನು ಪ್ರಧಾನಿ ಇಂದಿರಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಸೇರಿದ ಆಯೋಗದ ಸಭೆಯು ಅಂಗೀಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT