ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶನಿವಾರ, 19–07–1997

Last Updated 18 ಜುಲೈ 2022, 15:16 IST
ಅಕ್ಷರ ಗಾತ್ರ

ವದೆಹಲಿ, ಜುಲೈ 18 (ಪಿಟಿಐ)– ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗೆ ಸಂಬಂಧಿಸಿದಂತೆ ಐದನೇ ವೇತನ ಆಯೋಗ ನೀಡಿರುವ ಶಿಫಾರಸುಗಳನ್ನು 1996ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟ ಇಂದು ನಿರ್ಧರಿಸಿದೆ.

ಸಂಪುಟದ ತೀರ್ಮಾನದಿಂದ ನೌಕರರು ಕನಿಷ್ಠ 3,200 ರೂಪಾಯಿಗಳಿಂದ ಗರಿಷ್ಠ 30 ಸಾವಿರ ರೂಪಾಯಿವರೆಗೆ ವೇತನ ಪಡೆಯಲಿದ್ದಾರೆ. ಆಯೋಗ ಶಿಫಾರಸು ಮಾಡಿದಂತೆ ವಾರಕ್ಕೆ ಆರು ದಿನ ಕೆಲಸ ಬದಲಿಗೆ ಸದ್ಯ ಚಾಲ್ತಿಯಲ್ಲಿ ಇರುವಂತೆ 5 ದಿನ ಕೆಲಸವನ್ನೇ ಮುಂದುವರಿಸಲು ನಿರ್ಧರಿಸಿದೆ. ಈ ನಡುವೆ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ತಳ್ಳಿಹಾಕಿದೆ.

‘ನನ್ನ ಕೈ ಕಟ್ಟಿದೆ’ ಗುಜ್ರಾಲ್‌ ಅಳಲು

ನವದೆಹಲಿ, ಜುಲೈ 18 (ಯುಎನ್‌ಐ)– ಆರೋಪ ಪಟ್ಟಿ ಸಲ್ಲಿಸಿದ್ದರೂ ರಾಜೀನಾಮೆ ನೀಡದ ರಾಜಕಾರಣಿಗಳ ವಿರುದ್ಧ, ರಾಷ್ಟ್ರಪತಿ ಆಳ್ವಿಕೆ ಜಾರಿಯೂ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಕ್ರಮ ಕೈಗೊಳ್ಳುವ ಅಗಾಧ ಅಧಿಕಾರವಿದ್ದರೂ ಈಗ ತಾವೇನೂ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಪ್ರಧಾನಿ ಐ.ಕೆ.ಗುಜ್ರಾಲ್‌ ಅವರು ಇಂದು ಹೇಳಿದರು.

ಮಹಿಳಾ ಮೀಸಲಾತಿ ಮಸೂದೆ ಹಾಗೂ ಚುನಾವಣಾ ಸುಧಾರಣೆ ಕುರಿತ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲಾಲೂ ಪ್ರಸಾದ್‌ ಯಾದವ್‌ ಅವರ ಹೆಸರನ್ನು ಹೇಳದೆ, ‘ಮೊಕದ್ದಮೆ ಎದುರಿಸುತ್ತಿರುವ ರಾಜಕಾರಣಿಗಳು ಬಹಿರಂಗ ಮನವಿ ಮಾಡಿಕೊಂಡರೂ ಪದತ್ಯಾಗಕ್ಕೆ ಒಪ್ಪದಿರುವ ಈ ಸನ್ನಿವೇಶದಲ್ಲಿ ಏನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.‌

‘ನನ್ನನ್ನು ಆಗಾಗ ದುರ್ಬಲ ಪ್ರಧಾನಿ, ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ಹೀಯ್ಯಾಳಿಸುವುದುಂಟು. ಆದರೆ ಏನು ಮಾಡಲಿ ಕಾನೂನು ನನ್ನ ಕೈ ಕಟ್ಟಿದೆ. ನಿನ್ನೆ ನಡೆದ ಅಂತರ ರಾಜ್ಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿಗಳೆಲ್ಲಾ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವ ಅಧಿಕಾರ ನೀಡುವ 356ನೇ ವಿಧಿಯನ್ನು ಬಳಸಬಾರದೆಂದು ಹೇಳಿದರು. ಈ ಪರಿಸ್ಥಿತಿಯಲ್ಲಿ ಏನು ಮಾಡುವುದು?’ ಎಂದು ತಮ್ಮ ಅಳಲು ತೋಡಿಕೊಂಡರು.

ರಾಜಕಾರಣದಲ್ಲಿ ನೈತಿಕತೆ ಹಾಗೂ ಮೌಲ್ಯಗಳು ಕುಸಿಯುತ್ತಿದ್ದು, ಎಲ್ಲ ಪಕ್ಷಗಳೂ ದ್ವಂದ್ವ ನೀತಿ ಅನುಸರಿಸುತ್ತಿವೆ. ತಮ್ಮ ಕಡೆಗಿದ್ದರೆ ಗೂಂಡಾ ಆದರೂ ಒಳ್ಳೆಯವನು. ತಮ್ಮನ್ನು ವಿರೋಧಿಸುವ ಗೂಂಡಾ ಕೆಟ್ಟವನು ಎನ್ನುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT