ನಾನು ಒಂದೂವರೆ ವರ್ಷದವನಿದ್ದಾಗ ಅಪ್ಪ ನನ್ನನ್ನು ಸೋದರತ್ತೆಯ ಬಳಿ ಕೊಲ್ಲಾಪುರಕ್ಕೆ ಬಿಟ್ಟು ಹೋದರು. ಹಳ್ಳಿಯಲ್ಲಿದ್ದರೆ ಓದು ಸರಿಯಾಗುವುದಿಲ್ಲ ಎಂದು ಜೀಜಿ-ಬಾಪೂ ತೀರ್ಮಾನಿಸಿದ್ದರು. ನಡೆಯಲು, ತೊದಲು ಮಾತು ಕಲಿತಿದ್ದ ತಮ್ಮ ಮೊದಲ ಮಗನನ್ನು ಅಕ್ಕನ ಬಳಿ ಓದಲು ಬಿಟ್ಟರು. ಯಾಕೆಂದರೆ ಅದೇ ಅಕ್ಕ ನನ್ನ ಅಪ್ಪನನ್ನು ಓದಿಸಿ ಬುದ್ಧಿವಂತನನ್ನಾಗಿ ಮಾಡಿದ್ದಳು.

ಅಪ್ಪ ನನಗೆ ಮೈಸಾಹೇಬರ ಬಾಲಮಂದಿರದಲ್ಲಿ ಪ್ರವೇಶ ಕೊಡಿಸಿದರು. ಅತ್ತೆಯ ಕಟ್ಟುನಿಟ್ಟಿನ ನಿಗಾದಲ್ಲಿ ನನ್ನ ಶ್ಯಾಣ್ಯನಾಗುವ ಪಯಣ ಆರಂಭವಾಯಿತು.

ಪ್ರತಿ ಭಾನುವಾರ ಬಾಪೂ ತಪ್ಪದೇ ಕೊಲ್ಲಾಪುರಕ್ಕೆ ಬರುತ್ತಿದ್ದರು. ಶಿವಾಜಿ ಚೌಕದ ಇಂಪೀರಿಯಲ್ನಲ್ಲಿ ರೋಸ್-ವೆನಿಲ್ಲಾ ಐಸ್ಕ್ರೀಂ ತಿನ್ನಿಸಿ ಮತ್ತೆ ಅತ್ತೆಯ ಬಳಿ ಬಿಡುವುದು ಅವರ ವ್ರತದಂತೆಯೇ ಆಗಿತ್ತು. ಆಗ ನನ್ನ ಪಾಲಿಗೆ ಅಪ್ಪ ಅಂದರೆ ಭಾನುವಾರ ಬರುವ, ಐಸ್ಕ್ರೀಂ ಕೊಡಿಸುವ, ನನಗಾಗಿ ಮಟನ್ ತರುವ ಮನುಷ್ಯ.

ನಾನು ಮೂರನೇ ತರಗತಿಯಲ್ಲಿದ್ದಾಗ ಅತ್ತೆ ಪನ್ಹಾಳಕ್ಕೆ ಹೋದರು. ಆಗ ಬಾಪೂ ಹಳ್ಳಿ ಬಿಟ್ಟು, ಜೀಜಿಯನ್ನು ಕರೆದುಕೊಂಡು ನನ್ನ ಶಿಕ್ಷಣಕ್ಕಾಗಿ ಕೊಲ್ಲಾಪುರಕ್ಕೆ ಬಂದರು. ಕೂಡು ಕುಟುಂಬ ಬಿಟ್ಟು, ಶುಕ್ರವಾರ ಪೇಟೆಯಲ್ಲಿ ಹೊಸ ಬದುಕು ಆರಂಭಿಸಿದರು.

ಅಪ್ಪ ಮುಂಗೋಪಿ, ಶಿಸ್ತಿನ, ದೃಢ ನಿರ್ಧಾರದ ಮನುಷ್ಯ. ಹಳ್ಳಿಯಲ್ಲಿ ಎಲ್ಲರೂ ಅವರಿಗೆ ಹೆದರುತ್ತಿದ್ದರು. ನಾನೂ ಹಾಗೆಯೇ. ಪರಿಣಾಮವಾಗಿ ನಮ್ಮ ಮಾತುಕತೆ ಪ್ರಗತಿ ಪುಸ್ತಕದ ಸಹಿಗಷ್ಟೇ ಸೀಮಿತವಾಯಿತು.

ಅಪ್ಪ ಕೆಲಸದಲ್ಲಿ ಬ್ಯುಸಿ. ನನ್ನ ಓದಿನ ಜವಾಬ್ದಾರಿ ಜೀಜಿಯ ಮೇಲಿತ್ತು. ನಾನು ದಿನಾ ಐದು ಪಾಠಗಳ ಪ್ರಶ್ನೋತ್ತರ ಬರೆದು ಮುಗಿಸುವವರೆಗೂ ಊಟ ಕೊಡಬಾರದು ಎಂಬ ಅಪ್ಪನ ಆದೇಶವನ್ನು ಅವಳು ವರ್ಷಾನುವರ್ಷ ತಪ್ಪದೇ ಪಾಲಿಸಿದಳು.

ಶಾಲೆಯಲ್ಲಿ ಮೊದಲ ಸ್ಥಾನ ನನಗೆ ಕಾಯಂ ಆಗಿತ್ತು. ಒಮ್ಮೆ ಹಿಂದಿ ಮಾಸ್ಟ್ರು ಮನೆಗೆ ಬಂದು, ‘ಹೇಮಂತ ಟಿಳಕ ವಿದ್ಯಾಪೀಠದ ಪರೀಕ್ಷೆಗೆ ಕೂರುವುದಿಲ್ಲ ಎನ್ನುತ್ತಾನೆ. ಬಾಪೂ ಬೇಡ ಎಂದಿದ್ದಾರಂತೆ’ ಎಂದರು. ಸುಳ್ಳು ಹೇಳಿದ್ದಕ್ಕೆ ಅಪ್ಪ ಮೈತುಂಬ ಬಾಸುಂಡೆ ಬರುವಂತೆ ಹೊಡೆದರು. ಕೋಪದಲ್ಲೇ ಪರೀಕ್ಷೆಗೆ ಕೂತು ಮೊದಲಿಗನಾಗಿದ್ದೆ. ಪ್ರಮಾಣಪತ್ರ ತೋರಿಸಲು ಹೋದಾಗ ಹತ್ತಿರ ಕರೆದು ಇಷ್ಟೇ ಹೇಳಿದರು: ‘ಭಯ್ಯಾ, ಮಾರ್ಕ್ಸ್ ಮುಖ್ಯವಲ್ಲ ಕಣೋ… ಸುಳ್ಳು ಹೇಳಬೇಡ’.ಆ ದಿನ ಅವರು ನನಗೆ ಎರಡು ಪಾಠ ಹೇಳಿ ಕೊಟ್ಟರು–ಸುಳ್ಳು ಹೇಳಬಾರದು. ಮೊದಲ ನಿಯಮವನ್ನು ಎಂದಿಗೂ ಮುರಿಯಬಾರದು.

ಆ ಘಟನೆಯ ನಂತರ ಅಪ್ಪ ನನ್ನ ಪ್ರಗತಿ ಪುಸ್ತಕ ಕೇಳಲಿಲ್ಲ. ‘ಹೇಮಂತ ಊಟ ಮಾಡಿದನಾ?’ ಇದೇ ಒಂದೇ ಪ್ರಶ್ನೆಯನ್ನು ಜೀವನಪೂರ್ತಿ ಕೇಳುತ್ತಿದ್ದರು. ಡಿಗ್ರಿ ಆದ ಮೇಲೆ ದಿಕ್ಕೇ ಕಾಣಲಿಲ್ಲ. ನಾನು ಕೊಲ್ಲಾಪುರದಲ್ಲಿ ಕೇಬಲ್ ನಡೆಸಲು ಶುರುಮಾಡಿದ್ದೆ. ಒಂದು ದಿನ ಅಪ್ಪ ಹೇಳಿದರು: ‘ಭಯ್ಯಾ, ನೀನು ಕಲೆಕ್ಟರ್ ಆಗುವ ಹುಡುಗ. ಏನಾದರೂ ಮಾಡು… ಜಗತ್ತು ನನ್ನನ್ನು ಹೇಮಂತನ ಅಪ್ಪ ಎಂದು ಗುರುತಿಸಲಿ’. ಆ ಮಾತು ನನ್ನ ಬದುಕನ್ನೇ ಬದಲಿಸಿತು. ಬ್ಯಾಗ್ ಎತ್ತಿಕೊಂಡು ಮುಂಬೈಗೆ ಹೋದೆ.

ಯುಪಿಎಸ್ಸಿಯಲ್ಲಿ ಭಾರತಕ್ಕೆ 52ನೇ ರ್ಯಾಂಕ್ ಬಂದಿದೆ ಎಂಬ ಸುದ್ದಿ ಕೇಳಿ ಅಪ್ಪ ಥಟ್ಟನೆ ಕೆಳಗೆ ಕುಳಿತೇ ಬಿಟ್ಟರು. ‘ಸಾಕಾ?’ ಎಂದು ಕೇಳಿದೆ. ನನ್ನ ಕೈ ಹಿಡಿದು ಅವರು ಬಿಕ್ಕಿ ಬಿಕ್ಕಿ ಅತ್ತರು. ‘ಸಾಕು ಮಗನೇ… ನನ್ನ ಬದುಕು ಸಾರ್ಥಕ ಆಯಿತು’. ಅಷ್ಟೆ ಹೇಳಿ, ಎಂದಿನಂತೆ ಡಬ್ಬ ತೆಗೆದುಕೊಂಡು ಮಟನ್ ತರಲು ಹೊರಟರು.

ನನ್ನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ತಮ್ಮದೇ ಭಾಷೆ ಅಪ್ಪನಿಗಿತ್ತು. ನಾನು ಮನೆಗೆ ಹೋದರೆ ‘ಹೇಗಿದ್ದೀಯಾ?’ ಎಂದು ಕೇಳುವುದಕ್ಕೂ ಮುನ್ನ ಮಟನ್ ತರಲು ಹೊರಡುತ್ತಿದ್ದರು.

ನಿಮ್ಮ ಜೊತೆ ಹರಟೆ ಹೊಡೆಯುವುದು, ಹೆದರುತ್ತಾ ಹೆದರುತ್ತಾ ಆದರೂ ಒಂದು ‘ಚಿಯರ್ಸ್’ ಮಾಡುವುದು ಉಳಿದೇ ಹೋಯಿತು ಬಾಪೂ…

ಅಂಜಲಿ ಡಾಕ್ಟರ್ ಆಗಿರುವುದು, ಅವಳು ಶಾಸಕಿಯಾಗಿರುವುದು ಅವರಿಗೆ ಅಪಾರ ಹೆಮ್ಮೆಯ ವಿಷಯವಾಗಿತ್ತು. ನನ್ನ ಮಗ ಮಲ್ಹಾರ್ ಅಮೆರಿಕದಲ್ಲಿ ಅರ್ಥಶಾಸ್ತ್ರ ಓದಲು ಹೋಗಿದ್ದಾನೆ ಎಂದು ಊರುತುಂಬ ಎದೆಉಬ್ಬಿಸಿ ಹೇಳುತ್ತಿದ್ದರು. ರಖಮಾ ಎರಡು ತಿಂಗಳ ಮಗುವಾಗಿದ್ದಾಗ ಅವಳ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಆಪರೇಷನ್ ಥಿಯೇಟರ್ ಬಾಗಿಲ ಬಳಿ, ಅವಳು ಹೊರಬರುವವರೆಗೂ ದೇವರಲ್ಲಿ ಬೇಡಿಕೊಳ್ಳುತ್ತಾ ಒಬ್ಬರೇ ಕುಳಿತಿದ್ದ ಅಪ್ಪನ ಮುಖ ಇಂದಿಗೂ ನನ್ನ ಕಣ್ಣ ಮುಂದೆ ಹಾಗೆಯೇ ನಿಂತಿದೆ.

ಅಪ್ಪನ ಪ್ರೀತಿ, ಕಳಕಳಿ, ಅವರು ಪಟ್ಟ ಕಷ್ಟಗಳು ಒಂದು ಅದೃಶ್ಯ ಕಲ್ಪವೃಕ್ಷದ ನೆರಳಿನಂತಿತ್ತು. ಆ ನೆರಳಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದ ನಮಗೆ, ನಮಗೋಸ್ಕರ ಅದು ಸಹಿಸಿಕೊಂಡ ಬಿಸಿಲು-ಮಳೆಯ ಅರಿವೇ ಇರಲಿಲ್ಲ. ಸಮಯ ಬಂದಾಗ ಅದೇ ಮರದ ಒಣ ಎಲೆಗಳು ಅಗಿಷ್ಟಿಕೆಯಲ್ಲಿ ಕಾವು ಕೊಟ್ಟವು. ಆದರೆ ಹಣ್ಣೆಲೆಯಾಗಿ ಉದುರಿದ ಆ ಎಲೆಗಳ ಕಾಳಜಿ ಮಾಡಲಿಲ್ಲವಲ್ಲ ಎಂಬ ಕೊರಗು ಇನ್ನೂ ಉಳಿದಿದೆ.

ಮಳೆಗಾಲದಲ್ಲಿ ಹಾತಕಣಂಗಲೆಯ ಸ್ಟೇಷನ್ನಿಂದ ಮನೆಗೆ ಬರುತ್ತಿದ್ದಾಗ, ನನ್ನ ಕಾಲಿಗೆ ಕೆಸರು ಮುಳ್ಳು ತಗುಲಬಾರದು ಎಂದು ನನ್ನನ್ನು ಹೆಗಲ ಮೇಲೆ ಹೊತ್ತು ತಾವೇ ಕೆಸರು ಮುಳ್ಳು ತುಳಿದ ಅಪ್ಪನಿಗೆ ಒಂದು ದಿನ ನಾನು ಹೆಗಲು ಕೊಡಬೇಕಾಗುತ್ತದೆ ಎಂಬ ಯೋಚನೆ ನನಗೆ ಬಂದಿರಲಿಲ್ಲ.

ಅಪ್ಪ ನಿವೃತ್ತರಾದರು. ನಾನು ಐಪಿಎಸ್ ಆದೆ. ನನ್ನ ರಿಟೈರ್ಮೆಂಟ್ಗೆ ಅವರನ್ನು ಕರೆದುಕೊಂಡು ಹೋಗುವ ಕನಸು ಅರ್ಧದಲ್ಲೇ ಉಳಿಯಿತು.

ಅಸ್ಥಿ ವಿಸರ್ಜನೆಯ ವೇಳೆ ಬೂದಿಯಲ್ಲಿ ಅವರ ಅಸ್ಥಿಗಳನ್ನು ಹುಡುಕುತ್ತಿದ್ದಾಗ ಒಂದು ಭಯಾನಕ ಶೂನ್ಯತೆ ನನ್ನನ್ನು ಆವರಿಸಿತು. ಜೀವನಪೂರ್ತಿ ನನಗಾಗಿ ಕಣಕಣವಾಗಿ ಕರಗಿದ ಆ ಜೀವದ ಅವಶೇಷಗಳಲ್ಲಿ ನಾನು ಬಾಪೂವನ್ನು ಹುಡುಕುತ್ತಲೇ ಇದ್ದೆ.

ಬಾಪೂ, ಐವತ್ತಾರು ವರ್ಷದ ನಾನು ನಿನ್ನೆವರೆಗೂ ನನ್ನನ್ನು ಯುವಕನೆಂದುಕೊಂಡಿದ್ದೆ. ಅದು ನಿಮ್ಮ ಇರುವಿಕೆಯಿಂದ ಎಂದು ಈಗ ಅರ್ಥವಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1857245849

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.