ಭಾನುವಾರ, ಆಗಸ್ಟ್ 25, 2019
21 °C

ಸಿದ್ಧಾರ್ಥ... ಇದು ನ್ಯಾಯವೇ?

Published:
Updated:

ದೇವೇಗೌಡರು ರಾಜಕೀಯ ಜೀವನದಲ್ಲಿ ಹಲವಾರು ಬಾರಿ ಸೋತಿದ್ದಾರೆ. ಆದರೆ, ಸೋಲನ್ನು ಮೆಟ್ಟಿಲಾಗಿ ಮಾಡಿಕೊಂಡು ಈ ಇಳಿವಯಸ್ಸಿನಲ್ಲೂ ಜನರ ಸೇವೆ ಮಾಡಬೇಕೆಂಬ ತುಡಿತದಿಂದ ಉತ್ಸಾಹಿಯಾಗಿ ಬದುಕಿಲ್ಲವೇ?

ಸಿದ್ದರಾಮಯ್ಯ ಅವರು ಐದು ವರ್ಷ ಉತ್ತಮ ಆಡಳಿತ ನೀಡಿ, ಸೋಲನ್ನು ಅನುಭವಿಸಿ, ಪುತ್ರನನ್ನು ಕಳೆದುಕೊಂಡರೂ ಜನರ ಸೇವೆ ಮಾಡಲು ಉತ್ಸಾಹಿಯಾಗಿ ಬದುಕಿಲ್ಲವೇ? ಎಚ್.ಡಿ.ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ಮುಖ್ಯಮಂತ್ರಿಯಾಗಿದ್ದಾಗ ಶಾಸಕರ ಕಿರುಕುಳ ಸಹಿಸಿಕೊಂಡೂ ಜನಸೇವೆಗೆ ಉತ್ಸಾಹಿಯಾಗಿಲ್ಲವೇ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜೀವನದ ಏಳುಬೀಳನ್ನು ಲೆಕ್ಕಿಸದೆ ಛಲದಿಂದ ಮೇಲೆದ್ದು ಮುಖ್ಯಮಂತ್ರಿಯಾಗಿಲ್ಲವೇ? ಡಿ.ಕೆ.ಶಿವಕುಮಾರ್‌ ಅವರ ಮೇಲೆಯೂ ಐ.ಟಿ ದಾಳಿ ಆಗಿತ್ತು. ಆದರೂ ಬದುಕಿನಲ್ಲಿ ಉತ್ಸಾಹ ಉಳಿಸಿಕೊಂಡಿಲ್ಲವೇ?

ಜೀವನದಲ್ಲಿ ಸೋಲು–ಗೆಲುವು ಪ್ರತಿಯೊಬ್ಬರಿಗೂ ಸಹಜ. ಈ ಸತ್ಯ ನಿಮಗೇಕೆ ಅರ್ಥವಾಗಲಿಲ್ಲ ಸಿದ್ಧಾರ್ಥ? ನಿಮ್ಮ ಕೈ ಹಿಡಿದ ಪತ್ನಿಯನ್ನು ನಡುನೀರಿನಲ್ಲಿ ಏಕೆ ಕೈಬಿಟ್ಟಿರಿ? ನಿಮ್ಮ ಮಕ್ಕಳನ್ನು, ನಿಮ್ಮ ಶ್ರಮದಿಂದಲೇ ಬದುಕು ಕಟ್ಟಿಕೊಂಡ ಸಾವಿರಾರು ಕುಟುಂಬಗಳನ್ನು ತಬ್ಬಲಿಗಳನ್ನಾಗಿ ಏಕೆ ಮಾಡಿದಿರಿ? ಹಿರಿಯ ಮುತ್ಸದ್ದಿ ಎಸ್‌.ಎಂ. ಕೃಷ್ಣ ಅವರ ಕಣ್ಣಲ್ಲಿ ಏಕೆ ನೋವಿನ ಕಂಬನಿ ಹರಿಸಿದಿರಿ? ನಿಮಗಿದ್ದ ಸಾಮರ್ಥ್ಯ ನೋಡಿದರೆ, ಎಲ್ಲಾ ಆಸ್ತಿ ಹೋದರೂ ಮತ್ತೆ ಮೇಲೆದ್ದು ಬಂದು, ಈ ದೇಶಕ್ಕೆ ಹಾಗೂ ಯುವಜನರಿಗೆ ಮಾದರಿಯಾಗಬಹುದಿತ್ತು ಅಲ್ಲವೇ? ನೀವು ಮಾಡಿದ್ದು ನ್ಯಾಯವೇ?
-ಸುಮನ ಹೊಂಬಾಳ್, ಮೈಸೂರು

Post Comments (+)