ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 14–11–1968

Last Updated 13 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಪ್ರಧಾನಿ ಭಾಷಣಕ್ಕೆ ಅಡ್ಡಿ: ಲೋಕಸಭೆಯಲ್ಲಿ ಭಾರಿ ಕೋಲಾಹಲ

ನವದೆಹಲಿ, ನ. 13– ಕೇಂದ್ರ ನೌಕರರ ವಜಾ ಆಜ್ಞೆಯನ್ನು ತತ್‌ಕ್ಷಣ ವಾಪಸು ಪಡೆಯಬೇಕೆಂದು ಎಡಪಕ್ಷಗಳ ಉದ್ರಿಕ್ತ ಸದಸ್ಯರು ಒತ್ತಾಯಪಡಿಸಿದಾಗ ಇಂದು ಲೋಕಸಭೆಯಲ್ಲಿ ಕೋಲಾಹಲ, ಗೊಂದಲ, ಹುಚ್ಚು ಆವೇಶದ ಸಂತೆಯಾಯಿತು.

ಉಪಾಹಾರಕ್ಕೆ ಮುನ್ನ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಮಾತನಾಡಲು ಸಾಧ್ಯವೇ ಆಗದಂಥ ಪರಿಸ್ಥಿತಿ ಉದ್ಭವವಾಯಿತು.

ಇಂದಿರಾ ಸರ್ಕಾರಕ್ಕೆ ಆಯಸ್ಸು ಗಟ್ಟಿ

ನವದೆಹಲಿ, ನ. 13– ಜನಸಂಘದ ಅವಿಶ್ವಾಸ ನಿರ್ಣಯ ಇಂದು ತಿರಸ್ಕೃತಗೊಂಡು ಶ್ರೀಮತಿ ಇಂದಿರಾ ಗಾಂಧಿ ಸರ್ಕಾರದಲ್ಲಿ ಲೋಕಸಭೆ ತನ್ನ ವಿಶ್ವಾಸವನ್ನು ಮತ್ತೊಮ್ಮೆ ದೃಢಪಡಿಸಿತು.

ಸಾರ್ವತ್ರಿಕ ಚುನಾವಣೆಯ ನಂತರ ಶ್ರೀಮತಿ ಗಾಂಧಿ ಅವಿಶ್ವಾಸ ನಿರ್ಣಯವನ್ನು ಎದುರಿಸಿ, ಜಯಿಸುತ್ತಿರುವುದು ನಾಲ್ಕನೆಯ ಬಾರಿ. ಅವರು ಪ್ರಧಾನಮಂತ್ರಿಯಾದ ನಂತರ ಇದು ಆರನೆಯ ಬಾರಿ.

ಮಧುಗಿರಿಯಿಂದ ಲೋಕಸಭೆಗೆ ಪ್ರಚಂಡ ಬಹುಮತದಿಂದ ಸುಧಾರೆಡ್ಡಿ ಅವರ ಆಯ್ಕೆ: ಉಳಿದೆಲ್ಲರ ಠೇವಣಿ ನಷ್ಟ

ತುಮಕೂರು, ನ. 13– ಮಧುಗಿರಿ ಕ್ಷೇತ್ರದಿಂದ ಲೋಕಸಭೆಗೆ ನಡೆದ ಮರುಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿ ಶ್ರೀಮತಿ ಸುಧಾ ವೆಂಕಟಶಿವರೆಡ್ಡಿ ಅವರು ಒಂದು ಲಕ್ಷಕ್ಕೂ ಹೆಚ್ಚಿನ ಪ್ರಚಂಡ ಬಹುಮತದಿಂದ ಆಯ್ಕೆ ಹೊಂದಿದ್ದಾರೆ.

ಅವರ ಪ್ರತಿಸ್ಪರ್ಧಿಗಳು ನಾಲ್ವರಿಗೂ ಠೇವಣಿ ನಷ್ಟವಾಗಿದೆ. ಈ ಕ್ಷೇತ್ರಕ್ಕೆ ಸೇರಿದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಶ್ರೀಮತಿ ರೆಡ್ಡಿ ಅವರಿಗೆ ಭಾರಿ ಬಹುಮತ ದೊರೆತಿದೆ.

ಬಹುಮುಖ ಪ್ರತಿಭೆ

ಮಧುಗಿರಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಶ್ರೀಮತಿ ಸುಧಾ ವಿ. ರೆಡ್ಡಿ ಅವರು ಬಹುಮುಖ ವ್ಯಕ್ತಿತ್ವ ಸುಪ್ರಸಿದ್ಧ.

ಸಮಾಜ ಸೇವೆಯಲ್ಲಿ ಅವರಿಗೆ ಅಪಾರ ಆಸಕ್ತಿ. ಮಡಿದ ಹಾಗೂ ಅಂಗವಿಹೀನ ಯೋಧರ ಕುಟುಂಬಗಳ, ಮಾನಸಿಕ ವಿಕಲತೆಗೆ ತುತ್ತಾದ ಮಕ್ಕಳು ಮತ್ತು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ನಗರವಾಸಿ ಮಹಿಳೆಯರು ಇವರ ಪುನರ್ವಸತಿಗಾಗಿ ಅವರು ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.

42 ವರ್ಷ ವಯಸ್ಸಿನ ಶ್ರೀಮತಿ ರೆಡ್ಡಿ ಅವರು ನುರಿತ ಗಾಯಕಿ ಮತ್ತು ಕಲಾಪರಿಣತೆ. ಅವರು ಅನೇಕ ಚಿತ್ರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿರುವವರಲ್ಲದೆ ಗ್ರಾಮಾಂತರ ಪ್ರದೇಶವೊಂದರಲ್ಲಿ ಕಲಾವಿದರ ಕಾಲೋನಿ ಸ್ಥಾಪನೆಗಾಗಿ ಆಸಕ್ತಿ ವಹಿಸಿದ್ದಾರೆ.

ಭುಟ್ಟೊ ಬಂಧನ: ಪಾಕ್‌ ನಗರಗಳಲ್ಲಿ ಪ್ರಕ್ಷುಬ್ಧ ವಾತಾವರಣ

ಕರಾಚಿ, ನ. 13– ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಜುಲ್‌ಫಿಕರ್ ಆಲಿ ಭುಟ್ಟೊ ಮತ್ತು ಇತರ 14 ಮಂದಿಯನ್ನು ಇಂದು ಲಾಹೋರ್‌ನಲ್ಲಿ ಬಂಧಿಸಲಾಯಿತು. ರಾಷ್ಟ್ರದ ಭದ್ರತೆಗೆ ಬೆದರಿಕೆಯುಂಟು ಮಾಡುತ್ತಿದ್ದರೆಂಬುದೇ ಅವರ ಮೇಲಿನ ಆರೋಪ.

ಅನೇಕ ನಗರಗಳಲ್ಲಿ ತುರ್ತುಪರಿಸ್ಥಿತಿಯ ಆಜ್ಞೆಯನ್ನು ಜಾರಿಗೆ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT