ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ರೀ, ಬರೀ ಸೌ, ದೋ ಸೌ...

ನಗರದಲ್ಲಿ ಚಾಂದ್ ರಾತ್ ಸಂಭ್ರಮ: ಖರೀದಿ ಭರಾಟೆ
Last Updated 16 ಜೂನ್ 2018, 8:36 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಲ್ದಿ ಜಲ್ದಿ ಆವೋ... ಬರ್ರೀ ಬರ್ರೀ.. ಬರೀ ಸೌ, ದೋ ಸೌ... ಮಾಲ್ ಖಾಲಿ ಆದ್ರ ಮತ್ತ ಸಿಗುದಿಲ್ಲ.. ಭಾರೀ ಮಾಲ್, ಸಸ್ತ್ ಮಾಲ್.. ಬರ್ರೀ ಬರ್ರೀ...’ಇವು ನಗರದ ಸೂಪರ್ ಮಾರ್ಕೆಟ್‌ನಲ್ಲಿ ‘ಚಾಂದ್ ರಾತ್‌’ ದಿನವಾದ ಶುಕ್ರವಾರ ಕಂಡು ಬಂದ ದೃಶ್ಯ.

ಈದ್– ಫಿಲ್– ಫಿತ್ರ್ ಹಬ್ಬದ ಮುನ್ನಾ ದಿನವಾದ ‘ಚಾಂದ್ ರಾತ್’ ಮುಸ್ಲಿಮರು ಸೇರಿದಂತೆ ಎಲ್ಲರಿಗೂ ಸಂಭ್ರಮ ತರುವ ದಿನ. ಕಡಿಮೆ ಬೆಲೆಯಲ್ಲಿ ಹಲವಾರು ವಸ್ತುಗಳು ಈ ದಿನ ಸಿಗುವುದೇ ಇದಕ್ಕೆ ಕಾರಣ.

ವಾರದಿಂದ ಸೂಪರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರಾಗಿಯೇ ಇದೆ. ಆದಾಗ್ಯೂ ಸಾಂಪ್ರದಾಯಿಕವಾಗಿ ‘ಚಾಂದ್ ರಾತ್’ ದಿನವೇ ಖರೀದಿಗೆ ಸೂಕ್ತ ದಿನ, ಈ ದಿನ ಖರೀದಿಸುವ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತವೆ ಎಂಬ ಕಾರಣಕ್ಕೆ ಜನರ ಖುಷಿ ಇಮ್ಮಡಿಯಾಗಿತ್ತು.

ಬಟ್ಟೆ, ಚಪ್ಪಲಿ, ಶೂ, ಚಾದರ್, ಬೆಡ್‌ಶೀಟ್‌, ಆಲಂಕಾರಿಕ ಹೂಗಳು, ವ್ಯಾನಿಟಿ ಬ್ಯಾಗ್, ಮಕ್ಕಳ ಬಟ್ಟೆ ಖರೀದಿಗೆ ಜನರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು. ವ್ಯಾಪಾರಿಗಳು ಕೂಡ ತಮ್ಮದೇಯಾದ ಶೈಲಿಯಲ್ಲಿ ‘ಬರ್ರೀ ಬರ್ರೀ..’ ‘ಆವೋ.. ಆವೋ..’ ಎಂದು ಕೂಗುತ್ತ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿರುವುದು ಕಂಡು ಬಂತು.

ಪ್ರತಿ ನಿತ್ಯ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರು, ತಮ್ಮ ಅಂಗಡಿ ಮುಂಭಾಗದಲ್ಲಿ ಹರಾಜಿನ ಮೂಲಕ ಮಾರಾಟ ಮಾಡಿದರು. ಹಿಂದೂಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.

ವಾಹನ ಪ್ರವೇಶ ನಿಷೇಧ: ಸೂಪರ್ ಮಾರ್ಕೆಟ್‌ನಲ್ಲಿರುವ ಎಲ್ಲಾ ರಸ್ತೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಬ್ರಹ್ಮಪುರ ಪೊಲೀಸ್ ಠಾಣೆವರೆಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನಗಳ ಪ್ರವೇಶ ನಿಷೇಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT