ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ ನಗಣ್ಯ; ‘ಯಂತ್ರ’ಗಾರರಿಗೆ ಪ್ರಾಧಾನ್ಯ

Last Updated 17 ಮಾರ್ಚ್ 2019, 20:13 IST
ಅಕ್ಷರ ಗಾತ್ರ

‘ಸಂಗೀತಗಾರರಿಗೆ ಇಲ್ಲ ನೌಕರಿಭಾಗ್ಯ’ (ಪ್ರ.ವಾ., ಮಾರ್ಚ್‌ 16) ವರದಿಗೆ ಸಂಬಂಧಿಸಿದಂತೆ ನನ್ನ ಕೆಲವು ಅನಿಸಿಕೆಗಳು.ಸಂಗೀತ, ನಾಟಕ, ಕ್ರೀಡೆ ಇವು ಸರ್ಕಾರಕ್ಕೆ ಪ್ರಧಾನ ವಿಷಯಗಳಾಗಿಲ್ಲ. ಇದು, ಸರ್ಕಾರದ ಮನಃಸ್ಥಿತಿ ಮಾತ್ರವಲ್ಲ, ತಂದೆ ತಾಯಿ ಹಾಗೂ ನಮ್ಮ ಇಡೀ ವ್ಯವಸ್ಥೆಯ ಎಲ್ಲರಲ್ಲೂ ಇರುವಂತಹ ವಿಚಾರಧಾರೆ!

ಸಂಗೀತ ಒಂದು ಲೆಕ್ಕಾಚಾರದ ಕಲೆ. ಏಳು ಸ್ವರಗಳ ಮಧ್ಯೆ ಒಬ್ಬ ಕಲಾವಿದ ತನ್ನ ಧ್ವನಿಯೊಡನೆ ಸಾಧನೆ ಮಾಡುವ ಕಲೆ. ತನ್ನ ಪುಪ್ಪುಸ ನರನಾಡಿಗಳೊಡನೆ ಸಾಧಿಸುವ, ಆ ಮೂಲಕ ವಿನಮ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಕಲೆ. ನಾಟಕ ಕೂಡ ಮಾನಸಿಕ ಸ್ಥೈರ್ಯ ತುಂಬುವ, ವೇದಿಕೆಗಳಲ್ಲಿ ನಿಲ್ಲಲು, ವ್ಯಕ್ತಿತ್ವ ರೂಪಿಸಿಕೊಳ್ಳಲು ಹುರಿಗೊಳಿಸುವ ಕಲೆ. ಇನ್ನು ಕ್ರೀಡೆಯು ವಿದ್ಯಾರ್ಥಿಗಳನ್ನು ದೈಹಿಕವಾಗಿ ದಣಿಸಿ, ದೃಢವಾದ ವ್ಯಕ್ತಿತ್ವ ರೂಪಿಸುವ ಕಲೆ. ಈ ಎಲ್ಲ ಅಂಶಗಳು ವಿದ್ಯಾರ್ಥಿ ದಿಸೆಯಲ್ಲಿ ಸಿಕ್ಕರೆ ಒಬ್ಬ ವಿದ್ಯಾರ್ಥಿ ಸುಸಂಸ್ಕೃತನಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಆ ಮೂಲಕ ಒಂದು ಸ್ವಸ್ಥ, ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ.

ಈ ವಿಚಾರಗಳನ್ನು ನಗಣ್ಯಗೊಳಿಸುತ್ತಿರುವ ಅಧಿಕಾರಿಗಳಿಗೆ ಈ ಪ್ರಕಾರಗಳು ವಿದ್ಯಾ ಪ್ರಧಾನ ವಿಷಯಗಳಾಗಿ ಉಳಿದಿಲ್ಲ. ಆಳುವ ಜನಪ್ರತಿನಿಧಿಗಳಿಗೆ ಇವನ್ನೆಲ್ಲ ಗುರುತಿಸಲು ಸಮಯವಿಲ್ಲ ಮತ್ತು ಇಂತಹ ವಿಚಾರಗಳಿಗೆ ಧನಸಹಾಯ ಸಿಗುವುದು ಸಾಧ್ಯವೇ ಇಲ್ಲ. ಸಂಸ್ಕೃತಿ ಹೆಸರಿನ ಇಲಾಖೆಗಳು ಕೆಲವು ಹಿತಾಸಕ್ತಿಗಳನ್ನು ಮಾತ್ರ ಸಾಕುವ ಕಚೇರಿಗಳಾಗಿವೆ. ಹಾಗೆಯೇ ಪೋಷಕರಿಗೆ ಮಕ್ಕಳು ಅಂಕ ಗಳಿಸುವ ಯಂತ್ರಗಳಾದರೆ ಸಾಕು. ಇಂದಿನ ಮಕ್ಕಳ ಆರೋಗ್ಯ ಸ್ಥಿತಿ, ಲೋಕಜ್ಞಾನ ನೋಡಿದರೆ ಅಯ್ಯೋ ಅನ್ನಿಸುತ್ತದೆ. ಇದಕ್ಕೆಲ್ಲ ಯಾರು ಹೊಣೆ? ಯಾರಿಗೆ ಧಿಕ್ಕಾರ ಹಾಕೋಣ?

–ಕಾಂತೇಶ ಕದರಮಂಡಲಗಿ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT