ಬದ್ಧತೆ ಮೆರೆಯೋಣ

7

ಬದ್ಧತೆ ಮೆರೆಯೋಣ

Published:
Updated:

ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶವು ಕರ್ನಾಟಕಕ್ಕೆ ನಿಸರ್ಗದ ಬಳುವಳಿ. ಇದನ್ನು ರಕ್ಷಿಸುವ ಹೊಣೆ ಜನಪ್ರತಿನಿಧಿಗಳದ್ದು. ಬಂಡೀಪುರ ಸಾಮಾನ್ಯ ಅರಣ್ಯ ಪ್ರದೇಶವಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‍ಟಿಸಿಎ) 2014ರ ಅಂಕಿಅಂಶಗಳ ಪ್ರಕಾರ ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ 570ಕ್ಕೂ ಹೆಚ್ಚು ಹುಲಿಗಳು ನೆಲೆಸಿವೆ. ಇದು, ಪ್ರಪಂಚದಲ್ಲೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ವಾಸ ಮಾಡುತ್ತಿರುವ ಪ್ರದೇಶ.

ಆದರೆ ಕೆಲವು ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದಾಗಿ ಈ ಹುಲಿ ರಕ್ಷಿತಾರಣ್ಯಕ್ಕೆ ಧಕ್ಕೆಯಾಗುತ್ತಿರುವುದು ಆತಂಕದ ಸಂಗತಿ. ರಾಜಕೀಯ ಲಾಭ– ನಷ್ಟಗಳ ಲೆಕ್ಕಾಚಾರವನ್ನು ಮೀರಿ ಈ ವಿಷಯದ ಬಗ್ಗೆ ಎಲ್ಲ ಜನಪ್ರತಿನಿಧಿಗಳೂ ಚಿಂತನೆ ಮಾಡಬೇಕಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಂಡೀಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ವಾಹನ ಸಂಚಾರ ನಿಷೇಧವನ್ನು ಮುಂದುವರಿಸಿರುವುದು ಸ್ವಾಗತಾರ್ಹ. ಈ ವಿಚಾರದಲ್ಲಿ ಸರ್ಕಾರ ಯಾರ ಒತ್ತಡಕ್ಕೂ ಮಣಿಯಬಾರದು ಮತ್ತು ಈ ತೀರ್ಮಾನದಿಂದ ಹಿಂದೆ ಸರಿಯಬಾರದು.

ಬಂಡೀಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದರೆ ಮತ್ತು ರಾತ್ರಿ ವೇಳೆ ವಾಹನ ಸಂಚಾರ ನಿಷೇಧವನ್ನು ವಾಪಸ್ ಪಡೆದರೆ ನಮ್ಮ ಅಮೂಲ್ಯ ಅರಣ್ಯ ಮತ್ತು ವನ್ಯಜೀವಿಗಳಿಗೆ ಗಂಡಾಂತರ ಉಂಟಾಗಲಿದೆ. ಬಂಡೀಪುರದ ಹೃದಯ ಭಾಗದ ಮೂಲಕವೇ ನೀಲಾಂಬರ್- ನಂಜನಗೂಡು ರೈಲ್ವೆ ಮಾರ್ಗಕ್ಕೆ ಅನುಮತಿ ನೀಡುವಂತೆಯೂ ಒತ್ತಡಗಳು ಬರುತ್ತಿವೆ. ಇದೂ ಅಪಾಯಕಾರಿ ಯೋಜನೆ.

ಇದರ ಜೊತೆಗೇ, ಕೊಡಗಿನ ಮೂಲಕ ನಿರ್ಮಿಸಲು ಉದ್ದೇಶಿಸಿರುವ ಮೈಸೂರು- ತಲಶ್ಶೇರಿ ರೈಲು ಮಾರ್ಗವು ರಾಜ್ಯದ ಪ್ರಮುಖ ಆನೆ ಕಾರಿಡಾರ್ ಮೂಲಕ ಹಾದು ಹೋಗಲಿದ್ದು, ಇದರಿಂದ ಆನೆಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ಯೋಜನೆಯು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂಬುದು ರೈಲ್ವೆ ಇಲಾಖೆಯು ಹಲವು ಬಾರಿ ನಡೆಸಿದ ಸಮೀಕ್ಷೆಗಳಿಂದ ಸ್ಪಷ್ಟವಾಗಿದೆ. ಆದರೂ ಕೆಲವು ಸ್ಥಾಪಿತ ಹಿತಾಸಕ್ತಿಗಳು ಯೋಜನೆಯ ಅನುಷ್ಠಾನಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ.

ಮೈಸೂರು- ತಲಶ್ಶೇರಿ ರೈಲು ಯೋಜನೆಯನ್ನು ಕೈಬಿಡಲು ಇದೇ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಆದರೆ ಈಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಯೋಜನೆಯ ಅನುಷ್ಠಾನದ ಬಗ್ಗೆ ಮತ್ತೆ ಹೇಳಿಕೆ ನೀಡಲಾಗಿದೆ. ನಮ್ಮ ನೈಸರ್ಗಿಕ ಸಂಪತ್ತನ್ನು ಉಳಿಸುವ ಸಲುವಾಗಿ ಈ ಯೋಜನೆಯನ್ನು ಎಲ್ಲರೂ ವಿರೋಧಿಸಬೇಕಾಗಿದೆ.

ವಿವಿಧ ಯೋಜನೆಗಳಿಂದ ಪಶ್ಚಿಮ ಘಟ್ಟಗಳಿಗೆ ಈಗಾಗಲೇ ಹಾನಿಯಾಗಿದೆ. ಈ ಘಟ್ಟಗಳು ಹಲವು ನದಿಗಳ ಉಗಮ ಸ್ಥಾನಗಳಾಗಿದ್ದು, ಈ ನೀರಿನ ಮೂಲಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನಮ್ಮ ಜನರು ಸರ್ಕಾರಕ್ಕೆ ನೀಡಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ನಮ್ಮ ನೀರಿನ ಮೂಲಗಳನ್ನು ಉಳಿಸಿಕೊಳ್ಳುವುದು ಅಗತ್ಯ. ಅರಣ್ಯ ಮತ್ತು ವನ್ಯಜೀವಿಗಳು ನಮ್ಮ ವಿರುದ್ಧ ದನಿ ಎತ್ತಲಾರವು. ನಮಗೆ ಮತಗಳನ್ನೂ ಹಾಕಲಾರವು. ಆದ್ದರಿಂದ ಈ ಶ್ರೀಮಂತ ಪರಿಸರ ಸಂಪತ್ತನ್ನು ಉಳಿಸಲು ನಾವೆಲ್ಲರೂ ರಾಜಕಾರಣವನ್ನು ಮೀರಿ ಬದ್ಧರಾಗಬೇಕಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !