ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷಗಳು ಕಾಣುತ್ತಿಲ್ಲವೇಕೆ?

Last Updated 28 ಜೂನ್ 2022, 20:00 IST
ಅಕ್ಷರ ಗಾತ್ರ

ಬಿಜೆಪಿ ನಾಯಕರಲ್ಲಿ ಒಂದು ವಿಶೇಷ ಗುಣವಿದೆ. ತಮ್ಮ ವಾರ್ಷಿಕ ಕಾರ್ಯಕ್ರಮದ ಭಾಗವಾಗಿ, ತುರ್ತು
ಪರಿಸ್ಥಿತಿಯಲ್ಲಾದ ಪ್ರಜಾಪ್ರಭುತ್ವದ ದಮನ, ಕರಾಳತೆ ಕುರಿತು ಮಾತನಾಡಿ ಅವರು ಹೆಚ್ಚು ಪ್ರಚಾರ ಪಡೆಯುತ್ತಾರೆ. ಇದರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ವರ್ಚಸ್ಸಿಗೆ ಮಸಿ ಬಳಿಯುವುದರಲ್ಲಿ ಯಶಸ್ವಿಯಾಗುತ್ತಾರೆ.

ದುರಂತವೆಂದರೆ, ಕಾಂಗ್ರೆಸ್ಸಿನ ನಾಯಕರು ಬಿಜೆಪಿಯ ದಾಳಿಗೆ ದಾಳವಾಗಿ ಬಲಿಯಾಗುತ್ತಿರುವುದು. ಇಂದಿರಾ ಅವರನ್ನು ಅಮೆರಿಕದ ಮಾಜಿ ವಿದೇಶಾಂಗ ಸಚಿವ ಹೆನ್ರಿ ಕಿಸ್ಸಿಂಗರ್ ಅವರು ‘ವಿಶ್ವದ ಅತಿ ಬಲಿಷ್ಠ ಮಹಿಳೆ’ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿರುವುದು ಕಾಂಗ್ರೆಸ್ಸಿಗೆ ಹುಮ್ಮಸ್ಸು ತರುವುದಿಲ್ಲವೇ? ಇಂದಿರಾ ಅವರಿಂದ ಪಾಕಿಸ್ತಾನದ ಇಬ್ಭಾಗ, ದೇಶವು ಅಣ್ವಸ್ತ್ರರಾಷ್ಟ್ರ ಆಗಿರುವುದು, ಆಹಾರ ಮತ್ತು ರಕ್ಷಣೆಯಲ್ಲಿ ಸ್ವಾವಲಂಬನೆ ಸಾಧಿಸಿರುವುದು, ಪಂಜಾಬಿನಲ್ಲಿ ಖಲಿಸ್ಥಾನದ ಉಗ್ರ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ನಿಗ್ರಹ ಮಾಡಿರುವುದು ಉತ್ತೇಜಿಸುವುದಿಲ್ಲವೇ? ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಂದು ವಿಶ್ವ ಪರ್ಯಟನೆಯಲ್ಲೂ ತಮ್ಮ ಹೆಗ್ಗಳಿಕೆಯನ್ನು ವಿಜೃಂಭಿಸುತ್ತಾ, ಇಂದಿರಾ ಅವರ ತುರ್ತುಪರಿಸ್ಥಿತಿಯ ಕರಾಳ ದುರಂತವನ್ನು ಅನಿವಾಸಿ ಭಾರತೀಯರ ಮುಂದೆ ಹೇಳುತ್ತಿದ್ದರೂ, ಕಾಂಗ್ರೆಸ್ ನಾಯಕರು ಬಿಜೆಪಿಯ ದುರಾಡಳಿತ, ಅಘೋಷಿತ ತುರ್ತುಪರಿಸ್ಥಿತಿಯಿಂದ ಆಗುತ್ತಿರುವ ವಾಕ್ ಸ್ವಾತಂತ್ರ್ಯದ ಹರಣ, ಪತ್ರಕರ್ತರ ಮೇಲೆ ದೇಶದ್ರೋಹದ ಮೊಕದ್ದಮೆ, ಆಯ್ದ ವಿರೋಧಿಗಳ ಮೇಲೆ ಇ.ಡಿ, ಸಿಬಿಐ ಛೂ ಬಿಡುವುದು, ಪ್ರಜಾಪ್ರಭುತ್ವದ ಮೇಲೆ ಆಗುತ್ತಿರುವ ದಾಳಿಯನ್ನು ಖಂಡಿಸಲೂ ನಿತ್ರಾಣವಾಗಿರುವುದು ಪ್ರಮಾದವಲ್ಲವೇ?

ದೇಶದಲ್ಲಿ ದ್ವೇಷವನ್ನು ಬೆಳೆಸಿ ಸೌಹಾರ್ದವನ್ನು ಕಲುಷಿತಗೊಳಿಸಿ, ದೇಶವನ್ನು ಒಡೆಯುವ ಪ್ರವೃತ್ತಿಯ ಅಂತ್ಯಕ್ಕೆ ಹೋರಾಟ ಮಾಡಬಾರದೇ? ದೋಷಪೂರಿತ ಆರ್ಥಿಕ ನೀತಿಯಿಂದ ಖಾಸಗಿ ಉದ್ಯಮಗಳು ನಾಶವಾಗಿ, ನಿರುದ್ಯೋಗ ಗಗನಕ್ಕೇರಿ, ಹಣದುಬ್ಬರದಿಂದ ತತ್ತರಿಸುತ್ತಿರುವ ಜನರಿಗಾಗಿ ಹೋರಾಟ ಮಾಡುವವರಾರು? ಮಧ್ಯಪ್ರಾಚ್ಯ ದೇಶಗಳು, ಪಾಶ್ಚಿಮಾತ್ಯ ದೇಶಗಳು ಭಾರತದಲ್ಲಿನ ದುರ್ಘಟನೆಗಳ ವಿರುದ್ಧ ಸಿಡಿದೆದ್ದಿರುವುದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ಪ್ರತಿಪಕ್ಷಗಳು ಕಾಣುತ್ತಿಲ್ಲವೇಕೆ?

-ಕೆ.ಎನ್.ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT