ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಿನ್‌, ಯಡಿಯೂರಪ್ಪ ನಡುವೆ ಮತ್ತೆ ತಿಕ್ಕಾಟ

ಪಕ್ಷದ ಕಚೇರಿಯಲ್ಲಿ ಬಿಎಸ್‌ವೈ ನೇಮಿಸಿದ್ದ ಸಿಬ್ಬಂದಿ ವಜಾ
Last Updated 13 ಅಕ್ಟೋಬರ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಬಿಜೆಪಿ ಕಚೇರಿಗೆ ಬಿ.ಎಸ್‌.ಯಡಿಯೂರಪ್ಪ ನೇಮಕ ಮಾಡಿದ್ದ ಏಳು ಸಿಬ್ಬಂದಿಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತೆಗೆದುಹಾಕಿದ್ದಾರೆ. ಹೀಗಾಗಿ ಈ ಇಬ್ಬರ ನಡುವೆ ಮತ್ತೊಂದು ಸುತ್ತಿನ ತಿಕ್ಕಾಟ ಶುರುವಾಗಿದೆ.

ದಸರಾ ಹಬ್ಬ ಮುಗಿದ ಬಳಿಕ ಈ ಬೆಳವಣಿಗೆ ನಡೆದಿದ್ದು, ನಳಿನ್‌ ಕುಮಾರ್‌ ಬೇರೆಯವರನ್ನು ನೇಮಕ ಮಾಡಿದ್ದಾರೆ. ಪಕ್ಷದ ಪ್ರಚಾರ ಸಮಿತಿ ಸಹಿತ ಇನ್ನೂ ಕೆಲವು ವಿಭಾಗಗಳಲ್ಲೂ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಕಚೇರಿಯ ಮೂಲಗಳು ತಿಳಿಸಿವೆ.

ವಜಾಗೊಂಡ ಸಿಬ್ಬಂದಿಯೊಬ್ಬರು ವಿಡಿಯೊ ಮಾಡಿ ಬಿಡುಗಡೆ ಮಾಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ‘14 ವರ್ಷಗಳಿಂದ ಕೆಲಸಕ್ಕಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ನನ್ನನ್ನುಲಿಂಗಾಯತ ಎಂಬ ಕಾರಣಕ್ಕಾಗಿಯೇ ತೆಗೆದು ಹಾಕಿದ್ದಾರೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚುವುದು ನಿಶ್ಚಿತ’ ಎಂದು ಅವರು ಹೇಳಿದ್ದು ವಿಡಿಯೊದಲ್ಲಿದೆ.

‘ಲಿಂಗಾಯತ ಎಂಬ ಕಾರಣಕ್ಕೆ ಈ ಸಿಬ್ಬಂದಿಯನ್ನು ತೆಗೆದುಹಾಕಿಲ್ಲ; ಯಡಿಯೂರಪ್ಪ ನೇಮಕ ಮಾಡಿದವರು ಎನ್ನುವುದಕ್ಕಾಗಿ ಅವರ ವಿರುದ್ಧ ದ್ವೇಷ ಸಾಧಿಸಲಾಗಿದೆ. ಬಹುಶಃ ಇದಕ್ಕಾಗಿ ಯಡಿಯೂರಪ್ಪ ಅವರು ನಳಿನ್‌ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ’ ಎಂದು ಪಕ್ಷದ ಮೂಲಗಳು ಹೇಳಿವೆ.

‘ಪಕ್ಷದ ಕಚೇರಿಯಿಂದ ತೆಗೆದು ಹಾಕಿದವರಲ್ಲಿ ಒಬ್ಬರು ಟೈಪಿಸ್ಟ್‌, ಇಬ್ಬರು ಛಾಯಾಗ್ರಾಹಕರು, ಒಬ್ಬರು ಅಡುಗೆ
ಯವರೂ ಸೇರಿದ್ದಾರೆ. ಟೈಪಿಸ್ಟ್‌ ಲಿಂಗಾಯತರು. ನಳಿನ್‌ ಅವರಿಂದ ಇದನ್ನು ಮಾಡಿಸುವವರು ಯಾರು ಎಂಬುದೂ ಎಲ್ಲರಿಗೂ ಗೊತ್ತಿದೆ’ ಎಂದು ಮೂಲಗಳು ಹೇಳಿವೆ.

ಕಳೆದ ವಾರವಷ್ಟೇ ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿಯ ಮನೆಗೆ ಭೇಟಿ ನೀಡಿದ್ದ ನಳಿನ್‌ ಕುಮಾರ್‌ ಕಟೀಲ್‌ ಅವರು ಅರ್ಧ ಗಂಟೆ ಮಾತುಕತೆ ನಡೆಸಿ ತಮ್ಮ ನಡುವೆಯಾವುದೇ ಗೊಂದಲವಿಲ್ಲ ಎಂದಿದ್ದರು. ಆದರೆ, ತಮ್ಮ ಇಚ್ಛೆಗೆ ವಿರುದ್ಧವಾಗಿ ಪದಾಧಿಕಾರಿಗಳ ನೇಮಕ, ಬೆಂಗಳೂರು ಮೇಯರ್‌ ಆಯ್ಕೆಯಂತಹ ವಿಚಾರಗಳಲ್ಲಿಕಟೀಲ್‌ ಕ್ರಮವನ್ನು ಯಡಿಯೂರಪ್ಪ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT