ಶುಕ್ರವಾರ, ಅಕ್ಟೋಬರ್ 18, 2019
20 °C

ಆತಿಥ್ಯವಲ್ಲ ಅಪಥ್ಯ: ಕೆಎಸ್‌ಆರ್‌ಟಿಸಿ ಬಸ್‌ನ ಮರೆಯಲಾಗದ ಕೆಟ್ಟ ಅನುಭವ

Published:
Updated:

ದಾವಣಗೆರೆಯಿಂದ ಹಿರಿಯೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇತ್ತೀಚೆಗೆ ಪ್ರಯಾಣಿಸಿದಾಗ ಆದ ಕೆಟ್ಟ ಅನುಭವ ಮರೆಯಲಾಗದ್ದು. ಸಾರಿಗೆ ಸಂಸ್ಥೆ ಟೈಅಪ್ ಮಾಡಿಕೊಂಡಿರುವ ಹಿರಿಯೂರು– ಮೇಟಿಕುರ್ಕೆ ಮಾರ್ಗ ಮಧ್ಯದ ಹೋಟೆಲೊಂದರ ಹತ್ತಿರ ಉಪಾಹಾರಕ್ಕೆ ಬಸ್ ಅನ್ನು ನಿಲ್ಲಿಸಲಾಗಿತ್ತು. ಹೋಟೆಲ್‌ನಲ್ಲಿದ್ದ ಎಲ್ಲ ಸೇವೆಗಳೂ ಪ್ರಯಾಣಿಕರಿಗೆ ಆತಿಥ್ಯ ನೀಡದೆ ಅಪಥ್ಯವಾಗುವಂತೆ ಇದ್ದವು. ದೂಳು, ಕೊಳಕು ಹೊದ್ದುಕೊಂಡಿದ್ದ ಹೋಟೆಲ್‌ನ ಟೇಬಲ್‌, ಕುರ್ಚಿಗಳಲ್ಲಿ ಊಟ ಮಾಡುವುದು ರೋಗವನ್ನೇ ಆಹ್ವಾನಿಸುವಂತಿತ್ತು. ಇನ್ನು ಅಲ್ಲಿನ ಶೌಚಾಲಯವಂತೂ ಅಕ್ಷರಶಃ ಕೊಳಕಿನ ಆಗರವಾಗಿತ್ತು.

ನೀರು, ಫಿನಾಯಿಲ್ ಕಾಣದ ಶೌಚಾಲಯವನ್ನು ವಿಧಿಯಿಲ್ಲದೆ ಮಹಿಳಾ ಪ್ರಯಾಣಿಕರು ಬಳಸಬೇಕಾಯಿತು. ಊಟವೂ ಆರೋಗ್ಯಕರವಾಗಿರಲಿಲ್ಲ. ಹುಳಿಯಾಗಿದ್ದ ಇಡ್ಲಿ, ಉಪ್ಪು–ಹುಳಿ ಇಲ್ಲದ ಚಟ್ನಿಯನ್ನು ತಿನ್ನದೆ ಹೆಚ್ಚಿನವರು ಹಾಗೇ ಬಿಟ್ಟರು. ಕೈತೊಳೆಯಲೆಂದು ವಾಶ್‌ಬೇಸಿನ್‌ಗೆ ಹೋದರೆ ಅಲ್ಲಿಯೂ ಕೊಳಕಿನ ಆತಿಥ್ಯದ ದರ್ಶನವಾಯಿತು. ಕೆಎಸ್‌ಆರ್‌ಟಿಸಿ ರುಚಿ–ಶುಚಿಯಾದ ಹೋಟೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳದೇ ಹೋದಲ್ಲಿ ಪ್ರಯಾಣಿಕರಿಗೆ ರೋಗ ಕಟ್ಟಿಟ್ಟ ಬುತ್ತಿ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪ್ರಯಾಣಿಕರ ಆರೋಗ್ಯ ಕಾಪಾಡಲಿ.

ಅನಸೂಯಮ್ಮ, ಮೌನೇಶ್ ನಾಯ್ಕ, ಕುಸುಮಾ ಆದಿವಾಲ, ಹಿರಿಯೂರು

Post Comments (+)