ಗುರುವಾರ , ಸೆಪ್ಟೆಂಬರ್ 19, 2019
24 °C

ಹಕ್ಕಿಲ್ಲದ ಕಡೆ ಹಕ್ಕು ಸ್ಥಾಪಿಸುವವರು

Published:
Updated:

ಅಂತೂ ಸಂಪುಟಕ್ಕೆ 17 ಮಂತ್ರಿಗಳನ್ನು ತೆಗೆದುಕೊಳ್ಳಲು ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಿಸಿದರು, ಆ ಮಂತ್ರಿಗಳು ಯಾರು ಎನ್ನುವುದನ್ನೂ ವರಿಷ್ಠರೇ ನಿರ್ಧರಿಸಿದರು! ಎಂದರೆ, ರಾಜ್ಯದ ಮುಖ್ಯಮಂತ್ರಿ ಕೇವಲ ಯಾರೋ ಆಡಿಸುವ ಸೂತ್ರದ ಗೊಂಬೆ ಎಂದಾಯಿತು. ಬೇರೆ ಪಕ್ಷಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುವುದು, ಆತ ಮುಖ್ಯಮಂತ್ರಿ ಆಗುವುದು ಮತ್ತು ತನ್ನ ಸಹೋದ್ಯೋಗಿ ಮಂತ್ರಿಗಳನ್ನು ಆಯ್ಕೆ ಮಾಡುವುದು- ಇದು ಅನುಸರಿಸಬೇಕಾದ ಕ್ರಮ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಹೈಕಮಾಂಡ್ ಎಂಬ ಶಕ್ತಿಕೇಂದ್ರ ಇರುತ್ತದೆ. ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸುವುದೂ ಶಕ್ತಿಕೇಂದ್ರವೇ. ಹೀಗಿರುವಲ್ಲಿ ರಾಜ್ಯದಲ್ಲಿ ಮಂತ್ರಿಪದವಿಯ ಆಸೆ ಹೊತ್ತ ಅನೇಕರಿಗೆ ಈಗ ನಿರಾಸೆ. ತಮಗೆ ಅನ್ಯಾಯವಾಗಿದೆಯೆಂದು ಬಿಜೆಪಿಯ ಕೆಲವು ಶಾಸಕರು ಅಲವತ್ತುಕೊಂಡಿದ್ದಾರೆ. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇವೆ, ಆದಾಗ್ಯೂ ತಮ್ಮನ್ನು ಮಂತ್ರಿ ಮಾಡದೆ ಅನ್ಯಾಯ ಎಸಗಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇವರ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ.

ಮಂತ್ರಿಗಿರಿ ‘ಹಕ್ಕು’ ಎಂದಾದಾಗ ನ್ಯಾಯ– ಅನ್ಯಾಯದ ಪ್ರಶ್ನೆ. ಶಾಸಕರಿಗೆ ಇದು ತಿಳಿದಿರಬೇಕಲ್ಲ! ಶಾಸಕರಾಗಿ ಉಳಿದೇ ಮಾಡಬೇಕಾದ ಕೆಲಸ, ಹೊರಬೇಕಾದ ಹೊಣೆಗಾರಿಕೆ ಅವೆಷ್ಟೋ ಇವೆ. ಜನ ಇವರನ್ನು ಆಯ್ಕೆ ಮಾಡಿದ್ದು ಶಾಸಕ ಎಂದು, ಮಂತ್ರಿ ಎಂದಲ್ಲ. ಮಂತ್ರಿಗಿರಿಯು ಮುಖ್ಯಮಂತ್ರಿ ಅಥವಾ ಶಕ್ತಿಕೇಂದ್ರದ ಖುಷಿ, ಮರ್ಜಿಗಳಿಗೆ ಒಳಗಾದದ್ದು. ಆದರೂ ಸೋಜಿಗವೆಂದರೆ ಅತೃಪ್ತರು ಮಂತ್ರಿಮಂಡಲವನ್ನುಉಳಿಸಬಹುದು, ಉರುಳಿಸಬಹುದು! ಹಾಗಾಗಿಯೇ ಅತೃಪ್ತರ ಆವುಟ. ಹಕ್ಕಿಲ್ಲದ ಕಡೆ ಇವರು ಹಕ್ಕು ಸ್ಥಾಪನೆಗೆ ತೊಡಗುವುದು ಇದಕ್ಕಾಗಿ.

ಸಾಮಗ ದತ್ತಾತ್ರಿ, ಬೆಂಗಳೂರು

Post Comments (+)