ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾರ್‌ ಯೋಜನೆಯಲ್ಲಿ ಲೂಟಿ– ಎಚ್‌ಡಿಕೆ ಆರೋಪ

ಕುಮಾರಪರ್ವ: ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರೊಂದಿಗೆ ಜೆಡಿಎಸ್‌ಗೆ ಸೇರ್ಪಡೆ
Last Updated 4 ಮಾರ್ಚ್ 2018, 11:17 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸೋಲಾರ್‌ ಎನರ್ಜಿ ಯೋಜನೆಯಲ್ಲಿ ನೂರಾರು ಕೋಟಿ ಹಣವನ್ನು ಲೂಟಿ ಹೊಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ನಡೆದ ಕುಮಾರ ಪರ್ವ ಮತ್ತು ಕೆಪಿಸಿಸಿ ಮಾಜಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಮತ್ತು ಅವರ ಬೆಂಬಲಿಗರ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ನಡೆಯುತ್ತಿರುವುದು ಜಾಹೀರಾತು ಸರ್ಕಾರ. ಮಾಧ್ಯಮಗಳಲ್ಲಿ ನಿಮಿಷ ನಿಮಿಷಕ್ಕೂ ಜಾಹೀರಾತು ಕೊಡುವುದರಲ್ಲೇ ಕಾಲ ನೂಕುತ್ತಿದೆ. ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಮಳೆ ಬಿದ್ದರೂ ಬೆಳೆಗೆ ನೀರು ಕೊಡದೇ ರೈತರ ಬದುಕನ್ನು ಸರ್ಕಾರ ನಾಶ ಮಾಡಿತು. ಎಸ್‌ಸಿ/ಎಸ್‌ಟಿ ಜನರಿಗೆ ₹ 80 ಸಾವಿರ ಕೋಟಿ ಹಣವನ್ನು ಖರ್ಚು ಮಾಡಿದ್ದಾಗಿ ಹೇಳುತ್ತಾರೆ. ಆದರೆ ದಲಿತರಿಗೆ ಇನ್ನೂ ಸೂರು ಸಿಕ್ಕಿಲ್ಲ. 13 ಲಕ್ಷ ಜನರಿಗೆ ಮನೆ ಕೊಟ್ಟಿದ್ದೇವೆ ಎಮದು ಸರ್ಕಾರ ಸುಳ್ಳು ಹೇಳುತ್ತಿದೆ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗರ್ವ ಮತ್ತು ಉದ್ಧಟತನವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಇಂತಹ ದರ್ಪದ ವರ್ತನೆ ಹೆಚ್ಚು ದಿನ ನಡೆಯುವುದಿಲ್ಲ’ ಎಂದರು.

ಹಳೇ ಸ್ನೇಹಿತ: ‘ನನ್ನ ಹಳೇ ಸ್ನೇಹಿತರಾದ ಶಾಸಕ ರಮೇಶ ಬಂಡಿಸಿದ್ದೇಗೌಡ ಯಾವ ಕಾರಣದಿಂದ ಪಕ್ಷಕ್ಕೆ ದ್ರೋಹ ಬಗೆದರು ಎಂಬುದು ಗೊತ್ತಿಲ್ಲ. ಹಣ ಮುಖ್ಯ ಅಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಪ್ರೀತಿ, ನಂಬಿಕೆ, ವಿಶ್ವಾಸಗಳೇ ಮುಖ್ಯ, ರವೀಂದ್ರ ಶ್ರೀಕಂಠಯ್ಯ ಬೃಹತ್‌ ಸಮಾವೆಶ ಆಯೋಜಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಅವರ ಜತೆ ನಾನಿರುತ್ತೇನೆ. ನಂಬಿದವರಿಗೆ ನಾನು ಎಂದೂ ಮೋಸ ಮಾಡಿಲ್ಲ. ಆದರೆ ನಾವು ಬೆಳೆಸಿದವರೇ ನಮ್ಮ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ’ ಎಂದು ಜೆಡಿಎಸ್‌ ಬಂಡಾಯ ಶಾಸಕರಿಗೆ ತಿರುಗೇಟು ಅವರು ನೀಡಿದರು.

ಎಚ್‌.ಡಿ.ದೇವೇಗೌಡ, ‘ಬಿಎಸ್‌ಪಿ ಜತೆ ಮೈತ್ರಿಯಿಂದ ಜೆಡಿಎಸ್‌ ಬಲ ಹೆಚ್ಚಿದೆ. ಸಮಾನ ಮನಸ್ಕರು ಒಗ್ಗೂಡಿದ್ದೇವೆ. ಕುಮಾರಸ್ವಾಮಿ ರಾಷ್ಟ್ರೀಯ ಪಕ್ಷಗಳ ಹಂಗಿಲ್ಲದೆ ಮುಖ್ಯಮಂತ್ರಿಯಾಗಬೇಕು. ಪ್ರಾದೇಶಿಕ ಪಕ್ಷಗಳ ಅಗತ್ಯವನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದರು. ಲಕ್ಷ್ಮಿ ಅಶ್ವಿನ್‌ಗೌಡ, ಮಧು ಬಂಗಾರಪ್ಪ ಮಾತನಾಡಿದರು. ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಮತ್ತು ಆನೆ ತುಳಿತದಿಂದ ಮೃತರಾದ ಅರಣ್ಯ ಅಧಿಕಾರಿ ಮಣಿಕಂಠನ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಎಸ್‌.ಎಂ. ಕೃಷ್ಣರ ಗುಣಗಾನ: ರವೀಂದ್ರ ಶ್ರೀಕಂಠಯ್ಯ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ಜೆಡಿಎಸ್‌ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ‘ಕಾಂಗ್ರೆಸ್‌ ಪಕ್ಷದಲ್ಲಿ ಎರಡು ಬಾರಿ ನನಗೆ ಟಿಕೆಟ್‌ ತಪ್ಪಿತು. ಹಿಂದೆ ಇದ್ದ ಸ್ವಚ್ಛ ಕಾಂಗ್ರೆಸ್‌ ಈಗಿಲ್ಲ. ಎಸ್‌.ಎಂ. ಕೃಷ್ಣ ಅವರಂತಹ ಸಜ್ಜನರು ಪಕ್ಷ ತ್ಯಜಿಸುವ ಪರಿಸ್ಥಿತಿ ಬಂದಿರುವುದು ದುರಂತ. ಎಸ್‌.ಎಂ. ಕೃಷ್ಣ ಅವರ ನೆರಳಿನಲ್ಲಿದ್ದ ನಾನು ಈಗ ದೇವೇಗೌಡರ ನೆರಳಿಗೆ ಬಂದಿದ್ದೇನೆ. ಕುಮಾರಸ್ವಾಮಿ ಅವರ ದೂರದೃಷ್ಟಿಯನ್ನು ಮೆಚ್ಚಿ ಜೆಡಿಎಸ್‌ ಸೇರಿದ್ದೇನೆ. ಈ ಬಾರಿ ಅವರು ಮುಖ್ಯಮಂತ್ರಿ ಆಗದಿದ್ದರೆ ಇನ್ನು 20 ವರ್ಷಗಳ ಕಾಲ ರೈತ ಕುಟುಂಬದ ವ್ಯಕ್ತಿ ಮುಖ್ಯಮಂತ್ರಿ ಆಗಲಾರರು’ ಎಂದರು.

‘ನಮ್ಮ ಕುಟುಂಬ ಈ ಕ್ಷೇತ್ರದಲ್ಲಿ ಶಾಲೆ, ಆಸ್ಪತ್ರೆ ಕಟ್ಟಿಸಿ ಜನಪರ ರಾಜಕಾರಣ ಮಾಡಿದೆ. ಕ್ಷೇತ್ರದ ಈಗಿನ ಶಾಸಕರಂತೆ ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡಿಲ್ಲ’ ಎಂದು ಕಿಡಿ ಕಾರಿದರು.

ಟ್ರಾಫಿಕ್‌ ಜಾಮ್‌: ಕುಮಾರ ಪರ್ವ ಕಾರ್ಯಕ್ರಮಕ್ಕೆ ಹೆಚ್ಚು ಜನರು ಬಂದಿದ್ದರಿಂದ ಪಟ್ಟಣದಲ್ಲಿ ಶನಿವಾರ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತ, ಗಂಜಾಂ ವೃತ್ತ, ಕೋಟೆ ದ್ವಾರ, ಬೈಪಾಸ್‌ ರಸ್ತೆಯಲ್ಲಿ, ಬೆಳಿಗ್ಗೆ 11ರಿಂದ ಮಧ್ಯಾಹ್ನ 2.15 ವರೆಗೆ ಮೇಲಿಂದ ಮೇಲೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಲೇ ಇತ್ತು. ಜನರು ಮತ್ತು ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು.

ಪುಷ್ಪ ವೃಷ್ಟಿ: ಕುಮಾರಸ್ವಾಮಿ ಅವರನ್ನು ಕುವೆಂಪು ವೃತ್ತದಿಂದ ಶ್ರೀರಂಗನಾಥಸ್ವಾಮಿ ದೇವಾಲಯದ ವೇದಿಕೆ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮುಖ್ಯ ಬೀದಿಯಲ್ಲಿ ಸಾಗಿದ ಮರವಣಿಗೆಯಲ್ಲಿ ಉದ್ದಕ್ಕೂ ಕ್ರೇನ್‌ಗಳ ಮೂಲಕ ಪುಷ್ಪವೃಷ್ಟಿ ನಡೆಯಿತು.

ಎಲ್ಲೆಲ್ಲೂ ಜನ: ಪಟ್ಟಣದ ಬೀದಿ ಬೀದಿಗಳಲ್ಲಿ ಜನ ದಟ್ಟಣೆ ಕಂಡು ಬಂತು. ಮುಖ್ಯ ಬೀದಿ ಮಾತ್ರವಲ್ಲದೆ, ಪೂರ್ಣಯ್ಯ ಬೀದಿ, ಅಂಚೆ ತಿಪ್ಪಯ್ಯ ಬೀದಿ, ರಾಮಮಂದಿರದ ಬೀದಿಗಳು ಜನರಿಂದ ತುಂಬಿ ಹೋಗಿದ್ದವು. ಎಲ್ಲಲ್ಲೂ ಜೆಡಿಎಸ್‌ ಬಾವುಟಗಳು ಹಾರಾಡುತ್ತಿದ್ದವು. ಸಂಜೆ ಕಾರ್ಯಕ್ರಮ ಮುಗಿದು ಜನರು ಪಟ್ಟಣದಿಂದ ಹೊರ ಬರುವಾಗ ಕೋಟೆ ದ್ವಾರದಲ್ಲಿ ಸಮಸ್ಯೆ ಸೃಷ್ಟಿಯಾಯಿತು. ಪಟ್ಟಣದಲ್ಲಿ ಸಂತೆಯೂ ಇದ್ದದ್ದರಿಂದ ಸಮಸ್ಯೆ ಬಿಗಡಾಯಿಸಿತ್ತು.

‘ಇನ್ನೂರ್‌ ರೂಪಾಯ್‌ ಕೊಟ್ಟು ಬಸ್‌ಗೆ ಹತ್ತಿ ಅಂದ್ರು. ಹಂಗಾಗಿ ನಾನು ನನ್‌ ಸೊಸೆ ಇಲ್ಲಿಗೆ ಬಂದೀವಿ ಎಂದು ಬೆಳಗೊಳದ ರತ್ಮಮ್ಮ ಹೇಳಿದರು.
**
ಎಲ್ಲೆಲ್ಲೂ ಜನ

ಪಟ್ಟಣದ ಬೀದಿ ಬೀದಿಗಳಲ್ಲಿ ಜನ ದಟ್ಟಣೆ ಕಂಡು ಬಂತು. ಮುಖ್ಯ ಬೀದಿ ಮಾತ್ರವಲ್ಲದೆ, ಪೂರ್ಣಯ್ಯ ಬೀದಿ, ಅಂಚೆ ತಿಪ್ಪಯ್ಯ ಬೀದಿ, ರಾಮಮಂದಿರದ ಬೀದಿಗಳು ಜನರಿಂದ ತುಂಬಿ ಹೋಗಿದ್ದವು. ಎಲ್ಲಲ್ಲೂ ಜೆಡಿಎಸ್‌ ಬಾವುಟಗಳು ಹಾರಾಡುತ್ತಿದ್ದವು. ಸಂಜೆ ಕಾರ್ಯಕ್ರಮ ಮುಗಿದು ಜನರು ಪಟ್ಟಣದಿಂದ ಹೊರ ಬರುವಾಗ ಕೋಟೆ ದ್ವಾರದಲ್ಲಿ ಸಮಸ್ಯೆ ಸೃಷ್ಟಿಯಾಯಿತು. ಪಟ್ಟಣದಲ್ಲಿ ಸಂತೆಯೂ ಇದ್ದದ್ದರಿಂದ ಸಮಸ್ಯೆ ಬಿಗಡಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT