ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಇದು ಪಾರದರ್ಶಕತೆಯಲ್ಲವೇ?

Last Updated 25 ಅಕ್ಟೋಬರ್ 2021, 20:26 IST
ಅಕ್ಷರ ಗಾತ್ರ

ಕೇಂದ್ರೋದ್ಯಮಗಳ ಐಪಿಒ ಕುರಿತ ಅಭಿಪ್ರಾಯಗಳನ್ನು ಸಂವಾದದಲ್ಲಿ (ಪ್ರ.ವಾ., ಅ. 24) ಗಮನಿಸಿದೆ. ಒಂದು ಅಭಿಪ್ರಾಯ ‘ಹೂಡಿಕೆದಾರರ ದೃಷ್ಟಿಯಿಂದ ಒಳ್ಳೆಯದು’ ಎಂದಿದ್ದರೆ, ಮತ್ತೊಂದು ‘ಪಾರದರ್ಶಕತೆ ಬರುತ್ತದೆ’ ಎಂದಿದೆ. ಭಾರತದ ಷೇರುಪೇಟೆಯಲ್ಲಿ ಹೂಡಿಕೆ ಮಾಡಿರುವವರ ಸಂಖ್ಯೆಯು ಒಟ್ಟು ಜನಸಂಖ್ಯೆಯ ಕೇವಲ ಶೇ 4ರಷ್ಟು ಇದೆ. ಅಂದರೆ 136 ಕೋಟಿ ಜನಸಂಖ್ಯೆಯಲ್ಲಿ 5.4 ಕೋಟಿ ಜನರಷ್ಟೇ ಇದ್ದಾರೆ. ಆದಕ್ಕೆ ಪ್ರತಿಯಾಗಿ ಭಾರತೀಯ ಜೀವ ವಿಮಾ ನಿಗಮದಲ್ಲಿ ಇಂದು 40 ಕೋಟಿ ಪಾಲಿಸಿದಾರರಿದ್ದಾರೆ. ಮೊದಲನೆಯ ವಾದವನ್ನು ಒಪ್ಪುವುದಾದರೆ, 40 ಕೋಟಿ ಪಾಲಿಸಿದಾರರ ಹಣ ಹೂಡಿಕೆಯನ್ನು ಅಪಾಯಕ್ಕೊಡ್ಡಿ ಕೇವಲ 5.4 ಕೋಟಿ ‘ಹೂಡಿಕೆದಾರರ ದೃಷ್ಟಿಯಿಂದ ಒಳ್ಳೆಯದು’ ಎಂಬ ಅಭಿಪ್ರಾಯ ಎಷ್ಟು ಸರಿ?

ಇನ್ನು ‘ಪಾರದರ್ಶಕತೆ ಬರುತ್ತದೆ’ ಎಂಬ ವಾದ ಕೂಡ ಅಷ್ಟೇ ಬಾಲಿಶವಾದುದು. ಏಕೆಂದರೆ ಎಲ್ಐಸಿಯು ಅಸ್ತಿತ್ವಕ್ಕೆ ಬಂದಿದ್ದು ನಮ್ಮ ಸಂಸತ್ತಿನಲ್ಲಿ ಅಂಗೀಕರಿಸಿದ ಕಾಯ್ದೆಯ ಅಡಿಯಲ್ಲಿ. ಇದು ಪ್ರತೀ ಮೂರು ತಿಂಗಳಿಗೆ ಸರ್ಕಾರಕ್ಕೆ ತನ್ನ ಲೆಕ್ಕಪತ್ರಗಳನ್ನು ನೀಡುತ್ತಿದೆ. ಪ್ರತಿವರ್ಷ ಬಜೆಟ್ಟಿನಲ್ಲಿ ನಿಗಮದ ಆಯವ್ಯಯವನ್ನು ದೇಶದ ಜನರಿಗೆ ಸರ್ಕಾರವೇ ನೀಡುತ್ತಿದೆ. ಇದು ಪಾರದರ್ಶಕತೆಯಲ್ಲವೇ?

ಇನ್ನು ಪ್ರತಿವರ್ಷ ನಿಗಮವು ಗಳಿಸುವ ಒಟ್ಟಾರೆ ಲಾಭದಲ್ಲಿ ಶೇ 95ರಷ್ಟು ಹಣವನ್ನು ಪಾಲಿಸಿದಾರರಿಗೆ ಮತ್ತು ಶೇ 5ರಷ್ಟು ಹಣವನ್ನು ಸರ್ಕಾರಕ್ಕೆ ವಿತರಣೆ ಮಾಡುತ್ತಿದೆ. ಇದು ನಿಗಮದ ಒಟ್ಟಾರೆ ಕಾರ್ಯಕ್ಷಮತೆ. ಸರ್ಕಾರದ ಹೂಡಿಕೆಗೆ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳ ಡಿವಿಡೆಂಡ್‌ ನೀಡುತ್ತಿದೆ. ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡುತ್ತಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ದಾಸರ ಪದದಂತೆ ಜನರ ಹಣವನ್ನು ಜನಕಲ್ಯಾಣಕ್ಕೆ ಹೂಡಲಾಗುತ್ತಿದೆ. ಇಂತಹ ‘ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿ’ಯನ್ನು ಸಾಯಿಸುವ ನಿಲುವು ಪಾಲಿಸಿದಾರರ ಹಿತಾಸಕ್ತಿಗೆ ವಿರುದ್ಧವಾದುದು.

ಟಿ.ಸುರೇಂದ್ರ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT