ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಅಭಿವೃದ್ಧಿ ಮಾದರಿ ಉದಾಹರಣೆ ಆದೀತೆ?

ಅಕ್ಷರ ಗಾತ್ರ

‘ಚೀನಾದಲ್ಲಿ ಗರೀಬಿ ಹಟಾವೊ’ ಎಂಬ ಸುಧೀಂದ್ರ ಕುಲಕರ್ಣಿ ಅವರ ಲೇಖನ (ಪ್ರ.ವಾ., ಮಾರ್ಚ್‌ 25) ಚೀನಾ ಮತ್ತು ಆ ದೇಶದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಕುರಿತ ಕೆಲವು ಪೂರ್ವಗ್ರಹಗಳನ್ನು ದೂರ ಮಾಡುತ್ತದೆ. ಬಡತನದ ಹಿನ್ನೆಲೆಯಿಂದ ಬಂದ ಷಿ, ಚೀನಾದಲ್ಲಿ ಆತೀ ಕಡಿಮೆ ಅವಧಿಯಲ್ಲಿ ಬಡತನ ನಿರ್ಮೂಲನೆ ಮಾಡಿ ಯಶ ಕಂಡದ್ದು ಅನುಕರಣೀಯ.

ನಮ್ಮಲ್ಲೂ ಅನೇಕ ಬಡತನ ನಿರ್ಮೂಲನೆ ಕಾರ್ಯಕ್ರಮಗಳು ಅನೇಕ ದಶಕಗಳಿಂದ ಜಾರಿಯಲ್ಲಿವೆ. ಆದರೆ ಪ್ರಬಲ ರಾಜಕೀಯ ಇಚ್ಛಾಶಕ್ತಿಯುಳ್ಳ ನಾಯಕತ್ವದ ಕೊರತೆ, ಅದಕ್ಷ ಆಡಳಿತ ಯಂತ್ರ, ಭ್ರಷ್ಟಾಚಾರದ ತಾಂಡವ ನೃತ್ಯ, ಇವುಗಳಿಂದಾಗಿ ನಮ್ಮಲ್ಲಿ ಯಾವುದೇ ಬಡತನ ನಿರ್ಮೂಲನೆ ಕಾರ್ಯಕ್ರಮವು ಸಮರ್ಪಕವಾಗಿ ಅನುಷ್ಠಾನಗೊಂಡದ್ದಿಲ್ಲ. ಪ್ರತಿಯೊಂದರಲ್ಲೂ ಹಗರಣಗಳ ಸರಮಾಲೆ. ಇದಕ್ಕೆ ಯಾರೂ ಹೊಣೆಗಾರರಾಗುತ್ತಿಲ್ಲ ಕೂಡ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತ, ಪರಸ್ಪರ ದೂಷಿಸಿಕೊಳ್ಳುತ್ತ, ದೇಶದ ಜನರ ದಿಕ್ಕು ತಪ್ಪಿಸುತ್ತಿವೆ.

ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದೇ ಇರುವುದು ಚೀನಾ ದೇಶದ ದೊಡ್ಡ ಕೊರತೆ ಆಗಿರಬಹುದು. ಆದರೆ ನಮ್ಮ ದೇಶದ ಪ್ರಜಾಪ್ರಭುತ್ವದ ದೇಗುಲಗಳೆನಿಸಿದ ಶಾಸನಸಭೆಗಳು ನಡೆಯುತ್ತಿರುವ ರೀತಿ, ನೀತಿಗಳನ್ನು, ದಿನನಿತ್ಯ ಎಂಬಂತೆ ಅನಾವರಣಗೊಳ್ಳುತ್ತಿರುವ ನಮ್ಮ ಜನಪ್ರತಿನಿಧಿಗಳ ಅವಾಂತರಗಳನ್ನು, ಶಿಥಿಲಗೊಳ್ಳುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಮನಿಸಿದರೆ, ಪ್ರಜಾಪ್ರಭುತ್ವವೇ ನಮ್ಮ ದೌರ್ಬಲ್ಯವೇನೋ ಎಂದೆನಿಸುತ್ತದೆ. ನಮ್ಮ ಪ್ರಜಾಪ್ರಭುತ್ವವು ರಾಜಕಾರಣಿಗಳಿಂದ, ರಾಜಕಾರಣಿಗಳಿಗಾಗಿ, ರಾಜಕೀಯಕ್ಕಾಗಿ ಇರುವ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ನಾವು ಇದಕ್ಕಾಗಿ ದೊಡ್ಡ ಬೆಲೆಯನ್ನು ತೆರುತ್ತಿದ್ದೇವೆ. ಜನರ ದೂರು ದುಮ್ಮಾನಗಳನ್ನು ಕೇಳುವವರಿಲ್ಲದಂತಾಗಿದೆ. ಯಾರಿಂದಲೂ ಪಾಠ ಕಲಿಯಬೇಕಿಲ್ಲ ಎಂಬ ಧೋರಣೆ, ಧಿಮಾಕಿನಲ್ಲಿರುವ ನಮ್ಮ ರಾಜಕಾರಣಿಗಳಿಗೆ ಚೀನಾದ ಅಭಿವೃದ್ಧಿ ಮಾದರಿ ಎಂದಾದರೂ ಉದಾಹರಣೆ ಆದೀತೆ? ಇವರು ಬೇರೆಯೇ ಮತ್ತು ಇವರ ಆದ್ಯತೆಗಳು ಬೇರೆಯೇ.

- ವೆಂಕಟೇಶ ಮಾಚಕನೂರ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT