ಬುಧವಾರ, ಅಕ್ಟೋಬರ್ 16, 2019
22 °C

ಶುಭವಾಗುತೈತೆ!

Published:
Updated:
Prajavani

‘ಶುಭವಾಗುತೈತೆ, ಶುಭವಾಗುತೈತೆ... ಅಚ್ಛೇ ದಿನ್ ಬರುತೈತೆ...’ ಬುಡಬುಡಿಕೆಯವನ ಧ್ವನಿ ಕೇಳಿ ಖುಷಿಯಾದ ವಿಜಿ, ಹೊರಬಂದು ಅಕ್ಕಿ-ರಾಗಿ ಹಾಕಿ ಕೈ‌ ಮುಗಿದ.

ಅದೇ ಖುಷಿಯಲ್ಲಿ ಟಿ.ವಿ. ಆನ್ ಮಾಡಿದ ವಿಜಿಗೆ ಅಚ್ಚರಿ ಕಾದಿತ್ತು. ಬ್ರೇಕಿಂಗ್ ನ್ಯೂಸ್! ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ಭಾರತೀಯರ ಪಟ್ಟಿ ಬಿಡುಗಡೆ. ಬೆಂಗಳೂರಿನ ವಿಜಿ ಖಾತೆಯಲ್ಲಿ ಬಿಲಿಯನ್ ಡಾಲರ್ ದುಡ್ಡು!

ಹತ್ತಾರು ರಿಪೋರ್ಟರ್‌ಗಳು ಹಾಜರಾದರು‌. ‘ಇಷ್ಟೊಂದ್ ಕಪ್ಪುಹಣ ನಿಮ್ಮ ಹತ್ರ ಹೇಗೆ ಬಂತು? ನಿಮ್ಮ ಹೆಂಡ್ತಿ, ಮಕ್ಕಳ ಹೆಸರಲ್ಲೂ ಖಾತೆ ತೆರೆದಿದ್ದೀರಾ? ಯಾವ ಪ್ರಶ್ನೆಗೂ ಉತ್ತರಿಸುತ್ತಿಲ್ಲವೇಕೆ’ ಪತ್ರಕರ್ತರು ಪ್ರಶ್ನೆಗಳ ಮಳೆಗರೆದರು.

‘ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡದೇ ಇರೋದಕ್ಕೆ ಎಸ್‌ಬಿಐನೋರು ನನ್ನ ಎಸ್‌ಬಿ ಅಕೌಂಟೇ ಬ್ಲಾಕ್ ಮಾಡಿದಾರೆ. ಇನ್ನು ಸ್ವಿಸ್‌ನಲ್ಲಿ ಅಷ್ಟೊಂದ್ ದುಡ್ಡು ಇಡೋಕೆ ಹೇಗೆ ಸಾಧ್ಯರೀ’ ಉಸುರಿದ ವಿಜಿ.

‘ನಿಮಗೆ ಯಾವುದೇ ಶಿಕ್ಷೆ ಕೊಡದೆ, ಅಷ್ಟೂ ದುಡ್ಡು ನಿಮಗೇ ವಾಪಸ್ ಕೊಟ್ಟರೆ ಏನ್ಮಾಡ್ತೀರ?’

‘ನಮ್ಮ ಏರಿಯಾಗೆಲ್ಲ ಬಂಗಾರದ ರೋಡು ಮಾಡಿಸ್ತೀನಿ’ ಸಿಟ್ಟಲ್ಲಿ ಹೇಳ್ದ ವಿಜಿ.

ಬ್ರೇಕಿಂಗ್ ನ್ಯೂಸ್! ಇನ್ನು ಬೆಂಗಳೂರು ರಸ್ತೆಯೆಲ್ಲ ಬಂಗಾರಮಯ!

ಹಣೆ ಬಡ್ಕೊಂಡ್ ಒಳಗೆ ಹೋದ ವಿಜಿ. ಮುದ್ದಣ್ಣನಿಂದ ಫೋನು ಬಂತು. ‘ಹೆಂಗಿತ್ತು ಸಾರ್ ಶಾಕು... ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟಿರೋ ವಿಜಿ ನೀವೇ ಅಂತಾ ಮೀಡಿಯಾದವರಿಗೆ ಹೇಳಿದ್ದು ನಾನೇ’.

‘ಯಾಕ್ ಮುದ್ದಣ್ಣ, ನಾನೇನ್ ಅನ್ಯಾಯ ಮಾಡಿದ್ದೆ ನಿನಗೆ’ ಸಿಟ್ಟಲ್ಲೇ ಕೇಳ್ದ ವಿಜಿ.

‘ಅಸೆಂಬ್ಲಿ ಎಲೆಕ್ಷನ್‌ಗೆ ನಾನು ನಿಲ್ತೀನಿ, ನೀವು ಸಪೋರ್ಟ್ ಮಾಡಿ ಅಂದ್ರೆ ಕೇಳಲಿಲ್ಲ. ‘ನಾನೇ ನಿಲ್ತೀನಿ’ ಅಂದ್ರಿ. ಅದಕ್ಕೆ ನಿಮ್ಮ ಇಮೇಜ್ ಡ್ಯಾಮೇಜ್ ಮಾಡಿದೆ’ ನಕ್ಕ ಮುದ್ದಣ್ಣ.

‘ಮತ್ತೆ ಸ್ವಿಸ್ ಅಕೌಂಟ್ ಯಾರದೋ?’

‘ವಿಜಯ್‌ ಪಲ್ಯ ಅನ್ನೋರು ಶಾರ್ಟ್ ಅಂಡ್‌ ಸ್ವೀಟ್ ಆಗಿ ವಿಜಿ ಅನ್ನೋ ಹೆಸರಲ್ಲಿ ದುಡ್ಡು ಇಟ್ಟಿದ್ದರಂತೆ!’

Post Comments (+)