ಶನಿವಾರ, ಡಿಸೆಂಬರ್ 14, 2019
24 °C

ಶ್ರೀಸಾಮಾನ್ಯರು ಧ್ವನಿ ಎತ್ತಬೇಕಿದೆ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಬಸ್‌ಪಾಸ್‌ ಇದ್ದುದರಿಂದ ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸಿದ ವಿದ್ಯಾರ್ಥಿನಿಯನ್ನು ಕಂಡಕ್ಟರ್‌ ಬಸ್‌ನಿಂದ ಹೊರದಬ್ಬಿದ ವರದಿ ಓದಿ (ಪ್ರ.ವಾ., ನ. 19) ದಿಗ್ಭ್ರಮೆಯಾಯಿತು. ನಾನು ಸಹ ಪ್ರತಿದಿನ ಬಸ್‍ನಲ್ಲಿ ಪ್ರಯಾಣಿಸುವ ಉದ್ಯೋಗಸ್ಥ ಮಹಿಳೆಯಾಗಿದ್ದು, ಇಂಥ ಸಾಕಷ್ಟು ದೌರ್ಜನ್ಯಗಳು ಬಸ್‍ನಲ್ಲಿ ನಡೆಯುವುದನ್ನು ನೋಡಿದ್ದೇನೆ ಮತ್ತು ಅನುಭವಿಸಿಯೂ ಇದ್ದೇನೆ. ವಿದ್ಯಾರ್ಥಿನಿ ಭೂಮಿಕಾಳನ್ನು ಬಸ್‍ನಿಂದ ಕೆಳದಬ್ಬಿದ ಕಂಡಕ್ಟರ್‌ ನಡೆಗೆ ಧಿಕ್ಕಾರವಿರಲಿ.

ಇದನ್ನೂ ಓದಿ: ವಿದ್ಯಾರ್ಥಿನಿಯನ್ನು ಬಸ್‌ನಿಂದ ಹೊರದಬ್ಬಿದ ಕಂಡಕ್ಟರ್‌

ಬಸ್‌ನಲ್ಲಿ ಇತ್ತೀಚೆಗೆ ನಡೆದ ಇಂತಹುದೇ ಒಂದು ಘಟನೆ. ಮಹಿಳೆಯೊಬ್ಬರು ತಮ್ಮ ಪಕ್ಕ ಕುಳಿತ ಪುರುಷ
ಪ್ರಯಾಣಿಕ ನಿದ್ರೆ ಮಾಡುತ್ತಿರುವಂತೆ ನಟಿಸುತ್ತಲೇ ವಿಕೃತವಾಗಿ ಕಿರಿಕಿರಿ ಮಾಡಲು ಶುರು ಮಾಡಿದಾಗ ಪ್ರತಿಭಟಿಸಿದರು. ಆದರೂ ಸಹಪ್ರಯಾಣಿಕರ‍್ಯಾರೂ ಆಕೆಯ ಬೆಂಬಲಕ್ಕೆ ನಿಲ್ಲಲಿಲ್ಲ. ಸಾಕಷ್ಟು ಮಂದಿ ಕಿವಿಗೆ ಇಯರ್‌ಫೋನ್‌ ಹಾಕಿಕೊಂಡು ಮೊಬೈಲ್‍ನಲ್ಲಿ ಮುಳುಗಿದ್ದರಿಂದ ಸುತ್ತಲಿನ ಆಗುಹೋಗು ಗಮನಿಸಲು ಅವರಿಗೆ ಪುರುಸೊತ್ತೂ ಇರಲಿಲ್ಲವೆನ್ನಿ!

ಇದನ್ನೂ ಓದಿ: ಸುರಕ್ಷೆಯ ಹೊಣೆ ನಮ್ಮದು ಎಂದ ಕೆಎಸ್‌ಆರ್‌ಟಿಸಿ ನಿರ್ವಾಹಕರು

ಉಳಿದವರು, ‘ಹೋಗಲಿ ಬಿಡಮ್ಮ’, ‘ಸುಮ್ನಿರಮ್ಮ’ ಎಂದು ಆಕೆಯ ಬಾಯಿಯನ್ನು ಮುಚ್ಚಿಸಿದರೇ ಹೊರತು, ಕಳ್ಳಬೆಕ್ಕಿನಂತಹ ಖೂಳನಿಗೆ ಏನೂ ಹೇಳಲಿಲ್ಲ. ಅವನು ಆಗಲೂ ನಿದ್ರೆಯನ್ನೇ ನಟಿಸುತ್ತಿದ್ದ! ನಾವು ಎಂತಹ ಸಮಾಜದಲ್ಲಿ ಇದ್ದೇವೆ? ನಮ್ಮ ಮಕ್ಕಳಿಗೆ ಎಷ್ಟು ಸುರಕ್ಷಿತವಾದ ಸಮಾಜವನ್ನು ನಿರ್ಮಿಸುತ್ತಿದ್ದೇವೆ? ದೌರ್ಜನ್ಯವನ್ನು ಖಂಡಿಸಬೇಕಾದ ಶ್ರೀಸಾಮಾನ್ಯರ ಧ್ವನಿಗಳು ಎಲ್ಲಿ ಸತ್ತಿವೆ? ವಿದ್ಯಾರ್ಥಿನಿಯನ್ನು ಕಂಡಕ್ಟರ್‌ ಹೊರದಬ್ಬಿದಾಗ ಉಳಿದ ಪ್ರಯಾಣಿಕರಾಗಲೀ ಚಾಲಕನಾಗಲೀ ಅದನ್ನು ವಿರೋಧಿಸಲಿಲ್ಲವೇಕೆ ಎಂದು
ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.

ಮೇ.ನಾ.ತರಂಗಿಣಿ ಜಗದೀಶ್ ತುಮಕೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು