ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಬಾನುಲಿಗೆ ಸಿಗಲಿ ಉತ್ತೇಜನ

Last Updated 3 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಎರಡು ದಶಕಗಳಿಂದೀಚೆಗೆ ಖಾಸಗಿ ವ್ಯವಸ್ಥೆಯಲ್ಲಿ ಸಮುದಾಯ ಬಾನುಲಿಗಳನ್ನು ಆರಂಭಿಸಿ ನಡೆಸಿಕೊಂಡು ಹೋಗುವುದಕ್ಕೆ ಹೆಚ್ಚಿನ ಗಮನ ನೀಡುತ್ತಿದೆ. ಈ ಬಾನುಲಿಗಳು ಬಂದಂತೆ ಮತ್ತು ಖಾಸಗಿ ಟಿ.ವಿ. ಚಾನೆಲ್‌ಗಳು ಹೆಚ್ಚು ಹೆಚ್ಚು ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಹೊಸದಾಗಿ ತನ್ನ ಡಿ.ಡಿ ಟಿ.ವಿ. ಚಾನೆಲ್ಲುಗಳನ್ನು ಮತ್ತು ಆಕಾಶವಾಣಿ ಕೇಂದ್ರಗಳನ್ನು ತೆರೆಯುತ್ತಿಲ್ಲ. ಪ್ರಸಾರ ಮಾಧ್ಯಮದ ಈ ಉಸಾಬರಿಯನ್ನೆಲ್ಲ ಖಾಸಗಿಯವರಿಗೆ ನೀಡಿ ಕೈತೊಳೆದುಕೊಳ್ಳುವ ನೀತಿಯನ್ನು ಅನುಸರಿಸುತ್ತಾ ಬಂದಿದೆ.

ಕರ್ನಾಟಕದಲ್ಲಿರುವ 22 ಸೇರಿದಂತೆ ದೇಶದಲ್ಲಿ ಈಗ 316 ಸಮುದಾಯ ಬಾನುಲಿಗಳಿವೆ. ಇವುಗಳ ಪ್ರಸಾರ ವ್ಯಾಪ್ತಿ ಕಡಿಮೆ ಆದರೂ, ಆಯಾ ಪ್ರದೇಶದ ಸಮುದಾಯದಲ್ಲಿ ಹಲವು ವಿಷಯಗಳಲ್ಲಿ ಅರಿವು ಉಂಟು ಮಾಡುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿವೆ. ಶಿಕ್ಷಣ, ಕೃಷಿ, ಆರೋಗ್ಯ, ಮಹಿಳೆ, ಮಕ್ಕಳು ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚು ಗಮನ ನೀಡುತ್ತಿವೆ. ಜೊತೆಗೆ ಸರ್ಕಾರದ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಆದರೆ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳೇ ಈ ಸಮೂಹ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ. ಈ ಸಮುದಾಯ ಬಾನುಲಿಗಳನ್ನು ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ನಡೆಸುತ್ತಿವೆ.

ಉತ್ಸಾಹದಿಂದ ಆರಂಭವಾದ ಈ ಬಾನುಲಿಗಳು ಈಗ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಇವುಗಳನ್ನು ಸಬಲೀಕರಣಗೊಳಿಸಲು ಸರ್ಕಾರ ಮುಂದಾಗಬೇಕು. ಅಂದರೆ ಆಕಾಶವಾಣಿಗೆ ನೀಡುವಂತೆಯೇ ಜಾಹೀರಾತು ಮತ್ತು ಪ್ರತೀ ಇಲಾಖೆಯಿಂದ ಪ್ರಾಯೋಜಿತ ಕಾರ್ಯಕ್ರಮಗಳನ್ನು ನೀಡಿ ಇವುಗಳನ್ನು ಬೆಳೆಸಿ ಉಳಿಸಬೇಕಿದೆ. ರಾಜ್ಯ ಸರ್ಕಾರ ತನ್ನ ಬಜೆಟ್ ತಯಾರಿಕೆಯ ಸಿದ್ಧತೆ ಮಾಡುತ್ತಿರುವ ಈ ದಿನಗಳಲ್ಲಿ, ರಾಜ್ಯದಲ್ಲಿರುವ ಸಮುದಾಯ ಬಾನುಲಿಗಳನ್ನು ಮತ್ತಷ್ಟು ಬಲಿಷ್ಠಗೊಳಿಸಿ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವ ರೀತಿಯಲ್ಲಿ ಅವುಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಬೇಕು.

ಎಸ್.ಗಣೇಶನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT