ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಬಸ್ ತಡೆ, ಮೆರವಣಿಗೆ

ಸ್ವಯಂ ಪ್ರೇರಿತ ಬೀದರ್‌ ಜಿಲ್ಲಾ ಬಂದ್‌ಗೆ ನೀರಸ ಪ್ರತಿಕ್ರಿಯೆ
Last Updated 29 ಮೇ 2018, 11:13 IST
ಅಕ್ಷರ ಗಾತ್ರ

ಬೀದರ್: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಸೋಮವಾರ ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೀದರ್, ಬಸವಕಲ್ಯಾಣ ನಗರ, ಭಾಲ್ಕಿ, ಹುಲಸೂರು, ಕಮಲನಗರ ಹಾಗೂ ಚಿಟಗುಪ್ಪ ಪಟ್ಟಣಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಇತ್ತು. ಬಸ್ ಸಂಚಾರವೂ ಸಾಮಾನ್ಯವಾಗಿತ್ತು. ಔರಾದ್ ಹಾಗೂ ಹುಮನಾಬಾದ್ ಪಟ್ಟಣದ ಪ್ರಮುಖ ಮಾರುಕಟ್ಟೆಯಲ್ಲಿ ಕೆಲ ಸಮಯ ಅಂಗಡಿ ಮುಂಗಟ್ಟುಗಳು ಮಾತ್ರ ಮುಚ್ಚಿದ್ದವು.

ಬಿಜೆಪಿ ಕಾರ್ಯಕರ್ತರು ಬೀದರ್‌ನ ಕೇಂದ್ರ ಬಸ್ ನಿಲ್ದಾಣದ ಮುಖ್ಯ ದ್ವಾರದಲ್ಲಿ ಕೆಲ ಕಾಲ ಬಸ್ ತಡೆದು ಪ್ರತಿಭಟನೆ ನಡೆಸಿದರೆ, ಕಮಲನಗರದಲ್ಲಿ ರಸ್ತೆ ತಡೆ ಮಾಡಿದರು. ಭಾಲ್ಕಿಯಲ್ಲಿ ಧರಣಿ, ಬಸವಕಲ್ಯಾಣ, ಔರಾದ್ ಹಾಗೂ ಹುಮನಾಬಾದ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬೆಳಿಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಅಲ್ಲಿಂದ ಮಡಿವಾಳ ಮಾಚಿದೇವ ವೃತ್ತದವರೆಗೆ ಪಾದಯಾತ್ರೆ ನಡೆಸಿ ಸ್ವಯಂ ಪ್ರೇರಿತ ಬಂದ್‌ಗೆ ಸಹಕರಿಸಲು ಅಂಗಡಿ ಮುಂಗಟ್ಟುಗಳ ಮಾಲೀಕರಲ್ಲಿ ಮನವಿ ಮಾಡಿದರು. ನಂತರ ಪುನಃ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಸೇರಿದರು.

ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಮಾಶೆಟ್ಟಿ, ಮುಖಂಡರಾದ ಜಗನ್ನಾಥ ಪಾಟೀಲ, ರಾಜು ಚಿದ್ರಿ, ಬಸವರಾಜ ಮಲ್ಕಪ್ಪ, ರಾಜು ವಡ್ಡಿ, ಕರ್ನಾಟಕ ರಾಜ್ಯ ರೈತ ಸಂಘದ ದಯಾನಂದ ಸ್ವಾಮಿ, ವೈಜಿನಾಥ ನೌಬಾದೆ, ಅಮೃತಪ್ಪ ಕೊಳಾರ ಮುಂದಾಳತ್ವದಲ್ಲಿ ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಧರಣಿ ಕುಳಿತು ಬಸ್ ಸಂಚಾರಕ್ಕೆ ತಡೆ ಒಡ್ಡಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಸ್ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ ಕಾರಣ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ವ್ಯಾನ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಬಸ್ ನಿಲ್ದಾಣ ಮುಂಭಾಗದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಾ. ಶೈಲೇಂದ್ರ ಬೆಲ್ದಾಳೆ, ‘ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಚುನಾವಣೆಗೆ ಮುಂಚೆ ಭರವಸೆ ನೀಡಿದ್ದರು. ಇದೀಗ ಕುಂಟು ನೆಪ ಹೇಳುವ ಮೂಲಕ ರೈತರಿಗೆ ದ್ರೋಹ ಬಗೆದಿದ್ದಾರೆ’ ಎಂದು ಆರೋಪಿಸಿದರು.

‘2006 ರಲ್ಲಿ ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡದೆ ವಚನ ಭ್ರಷ್ಟರಾಗಿದ್ದರು. ಈಗಲೂ ಅದೇ ದಾರಿಯಲ್ಲಿ ಸಾಗಿದ್ದಾರೆ’ ಎಂದು ಟೀಕಿಸಿದರು.

ಪೊಲೀಸ್ ಬಂದೋಬಸ್ತ್: ಸ್ವಯಂ ಪ್ರೇರಿತ ಬಂದ್ ಕರೆ ಪ್ರಯುಕ್ತ ನಗರದ ಕೇಂದ್ರ ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎರಡೂ ಕಡೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ವ್ಯಾನ್‌ಗಳನ್ನು ನಿಲ್ಲಿಸಲಾಗಿತ್ತು.

**
ರಾಜ್ಯ ಸರ್ಕಾರ ಕೂಡಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲವೇ ಕುರ್ಚಿ ಖಾಲಿ ಮಾಡಬೇಕು
ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT