ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಪರ ಕಾಳಜಿ ಇಂದಿನ ಜರೂರು

Last Updated 6 ಜುಲೈ 2021, 19:31 IST
ಅಕ್ಷರ ಗಾತ್ರ

ಕೊರೊನಾ ತಂದೊಡ್ಡಿರುವ ಸಂಕಷ್ಟದ ಜೊತೆಗೆ, ಲಸಿಕೆ ಕೊರತೆ, ದುಬಾರಿ ಇಂಧನ, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದಂತಹ ನಾನಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಶ್ರೀಸಾಮಾನ್ಯರು ಹತಾಶರಾಗಿ ಪರಿತಪಿಸುತ್ತಿದ್ದಾರೆ. ಇಂತಹ ದಾರುಣ ಪರಿಸ್ಥಿತಿಯಲ್ಲಿ ಸರ್ಕಾರದ ಪಾತ್ರ ಮಹತ್ತರವಾದುದು. ಜನತೆಗೆ ‘ನಾವು ನಿಮ್ಮ ಜೊತೆಗಿದ್ದೇವೆ’ ಎಂಬ ನಂಬಿಕೆ ಮೂಡಿಸಿ ಭರವಸೆಯನ್ನು ತುಂಬಬೇಕು. ಇದರಲ್ಲಿ ಆಳುವ ಪಕ್ಷ, ವಿರೋಧ ಪಕ್ಷ ಎಂಬ ಪ್ರಶ್ನೆ ಬರಕೂಡದು. ಶಾಸಕರ ನಿಜಬಣ್ಣ ಮತ್ತು ಸಾಮಾಜಿಕ ಬದ್ಧತೆಯನ್ನು ಪರೀಕ್ಷಿಸುವ ಪರ್ವಕಾಲವಿದು. ಈ ದಾರುಣ ಸನ್ನಿವೇಶದಲ್ಲಿ ನಮ್ಮ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ದುರ್ದೈವವೆಂದರೆ ಅವರು ನಡೆದುಕೊಳ್ಳುತ್ತಿರುವ ರೀತಿ ಶೋಚನೀಯವಾಗಿದೆ ಹಾಗೂ ನಿರಾಶಾದಾಯಕವಾಗಿದೆ. ಆಡಳಿತ ಪಕ್ಷದಲ್ಲಿ ಎರಡು ಬಣ. ಮುಖ್ಯಮಂತ್ರಿಯನ್ನು ಬದಲಿಸಬೇಕು ಎಂದು ಒಂದು ಗುಂಪು ನಿಲುವು ತಳೆದರೆ, ಅವರೇ ಮುಂದುವರಿಯಬೇಕು ಎಂದು ಇನ್ನೊಂದು ಗುಂಪು ಬೆಂಬಲಿಸಿದೆ. ಅಪಸ್ವರಗಳು ನಿಂತಿಲ್ಲ. ಶಾಸಕರ ಚಿತ್ತ ಅಧಿಕಾರದ ಗದ್ದುಗೆಯತ್ತ ಧಾವಿಸುತ್ತಿದೆಯೇ ಹೊರತು ಜನಮುಖಿಯಾಗಿ ಹೊರಳದಿರುವುದು ದುರಂತ.

ಇನ್ನು ವಿರೋಧಪಕ್ಷದ ವರ್ತನೆಯಾದರೂ ಸಮಾಜಮುಖಿಯಾಗಿ ಹೆಜ್ಜೆ ಹಾಕುತ್ತಿದೆಯೇ ಎಂದರೆ ಅಲ್ಲಿಯೂ ಅಧಿಕಾರದ ಪೈಪೋಟಿ ನಡೆದಿದೆ. ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಜನರ ಸಮಸ್ಯೆಗಿಂತಲೂ ದೊಡ್ಡದಾಗಿ ‘ಮುಖ್ಯಮಂತ್ರಿ’ ಯಾರಾಗಬೇಕೆಂಬ ಸಮಸ್ಯೆ ಅವರನ್ನು ಕಾಡುತ್ತಿದೆ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುವ ಈ ವಿಚಿತ್ರ ವರ್ತನೆ ಗೌರವ ತರುವಂತಹುದಲ್ಲ. ಶಿಸ್ತಿನಿಂದ ವರ್ತಿಸೋಣ ಎಂದು ಆಲೋಚಿಸದೆ ‘ನಾನೂ ಮುಖ್ಯಮಂತ್ರಿ ಪದವಿ ಆಕಾಂಕ್ಷಿ’ ಎಂದು ಹೇಳುತ್ತಾರೆ. ನಮ್ಮ ಶಾಸಕರು ಯಾಕೆ ಇಂಥ ಅಧೋಗತಿಗೆ ಇಳಿದರು ಎಂದು ದುಗುಡವಾಗುತ್ತದೆ.

ಪಕ್ಷಗಳು ಬೇರೆಯೇ ಹೊರತು ಶಾಸಕರೆಲ್ಲ ಒಂದೇ ಬಗೆಯವರು. ಆಡಳಿತ ಪಕ್ಷಕ್ಕೆ ಅಧಿಕಾರ ಉಳಿಸಿಕೊಳ್ಳುವ ಚಿಂತೆ. ವಿರೋಧ ಪಕ್ಷದವರಿಗೆ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯುವ ಕನಸು. ಇವರಿಬ್ಬರ ನಡುವೆ ಪ್ರಜೆಗಳು ಅನಾಥರು. ಇದು ನಾಚಿಕೆಗೇಡಲ್ಲದೆ ಮತ್ತೇನು? ಇದು ಜನರ ಸಂಕಷ್ಟಕ್ಕೆ ಮಿಡಿಯಬೇಕಾದ ಕಾಲ. ಜನರ ನೋವಿಗೆ ಮಿಡಿದು, ಅವರ ವಿಶ್ವಾಸಕ್ಕೆ ಪಾತ್ರರಾಗಿ ಮುಂದಿನ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಬರಲು ಭೂಮಿಕೆ ನಿರ್ಮಿಸಿಕೊಳ್ಳಲು ಅವಕಾಶ ಸೃಷ್ಟಿಸಿಕೊಳ್ಳಬೇಕಾದ ಸಂದರ್ಭ. ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರ್ವಕಾಲವಿದು. ದಿಟವಾದ ಜೀವಪರ ಕಾಳಜಿ ಇಂದಿನ ಜರೂರು.

–ಪ್ರೊ. ಕಮಲಾ ಹಂಪನಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT