ಗುರುವಾರ , ನವೆಂಬರ್ 21, 2019
27 °C

ವಾಚಕರವಾಣಿ| ಕಾಗೆ ಬಗ್ಗೆ ದ್ವಂದ್ವ ನಿಲುವೇಕೆ?

Published:
Updated:

ಮದ್ದೂರು ತಾಲ್ಲೂಕಿನ ಚಾಮನಹಳ್ಳಿಯ ಶನಿದೇವರ ದೇವಾಲಯಕ್ಕೆ ಕಾಗೆಯೊಂದು ಪ್ರವೇಶಿಸಿ ಭಕ್ತರ ಅಚ್ಚರಿಗೆ ಕಾರಣವಾಗಿದೆ (ಪ್ರ.ವಾ., ಅ.20). ಕಾಗೆ ಹಲವರಿಗೆ ಅಪಶಕುನ. ಮಂತ್ರಿಗಳ ಕಾರಿನ ಮೇಲೆ ಕೂತರೂ ಪದವಿ ಕಳೆದುಕೊಳ್ಳುತ್ತಾರೆಂದು ಅಂದದ್ದು ಆಯಿತು. ಇನ್ನು ಅದು ಅಪ್ಪಿತಪ್ಪಿ ಮನೆ ಹೊಕ್ಕರೆ ಕೇಡೆಂದು ಭಾವಿಸಿ ಮನೆ ಶುದ್ಧೀಕರಿಸುವುದು ಈಗಲೂ ನಡೆದಿದೆ. ‘ಕಾಗೆ ಕೂರೋಕೂ ಟೊಂಗೆ ಮುರಿಯೋಕೂ’ ಎನ್ನುವ ಮಾತು ಆಗಾಗ ಮಾತಿನ ಸಂದರ್ಭದಲ್ಲಿ ಬರುತ್ತದೆ.

ಕಾಗೆಯನ್ನು ಇನ್ನಿಲ್ಲದಂತೆ ಆಡಿಕೊಳ್ಳುವ, ನಿಕೃಷ್ಟವಾಗಿ ಕಾಣುವ ನಾವು, ಅದರ ಪರೋಪಕಾರ, ದಾಸೋಹ ಭಾವದ ಹಿನ್ನೆಲೆಯನ್ನು ಮರೆತಿದ್ದೇವೆ. ಕೋಗಿಲೆಯ ಮೊಟ್ಟೆಗಳನ್ನು ಕಾಗೆಯು ತನ್ನವೆಂದು ಪರಿಭಾವಿಸಿ ಮರಿ ಮಾಡುವ ಹೊಣೆ ಹೊರುವುದು ಯಾರಿಗೆ ಗೊತ್ತಿಲ್ಲ?

ಮನುಷ್ಯನ ಅತಿಯಾಸೆಗೆ ಅರಣ್ಯ ಸಂಪತ್ತು ನಾಶವಾಗಿ, ವನ್ಯಜೀವಿಗಳು ಆಹಾರ, ನೀರನ್ನು ಅರಸಿಕೊಂಡು ನಾಡಿನತ್ತ ಮುಖ ಮಾಡುತ್ತಿವೆ. ಕೆಲ ವರ್ಷಗಳ ಹಿಂದೆ ಮನೆಗಳಲ್ಲಿ ಗುಬ್ಬಿ ಹಾಗೂ ಇತರ ಪಕ್ಷಿಗಳು ಗೂಡು ಕಟ್ಟುತ್ತಿದ್ದುದನ್ನು ನೋಡಿದ್ದೇವೆ. ಹಾಗೆಯೇ ಚಾಮನಹಳ್ಳಿಯಲ್ಲಿಯೂ ಕಾಗೆ ತನ್ನ ಆಹಾರ ಹುಡುಕಿಕೊಂಡು ದೇವಾಲಯ ಹೊಕ್ಕಿರಬಹುದು.

ಶನಿವಾರವು ಶನಿದೇವರ ವಾರ ಬೇರೆ ಮತ್ತು ಕಾಗೆಯು ಶನಿಯ ವಾಹನವೂ ಆಗಿರುವುದರಿಂದ ಭಕ್ತಿ ಜಾಸ್ತಿಯಾಗಿದೆ. ಆದರೆ ಹೀಗೆ ಒಂದೆಡೆ ಭಕ್ತಿ ಮತ್ತೊಂದು ಕಡೆ ತಾತ್ಸಾರ. ಕಾಗೆಯನ್ನು ಕೆಲ ಸಂದರ್ಭಗಳಲ್ಲಿ ಮಾತ್ರ ದೈವತ್ವಕ್ಕೇರಿಸದೆ, ಅದರ ಎರಡು ಶ್ರೇಷ್ಠ ಗುಣಗಳನ್ನು ನಾವು ಅನುಸರಿಸುವುದು ಸೂಕ್ತ.

– ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ಪ್ರತಿಕ್ರಿಯಿಸಿ (+)