ದಸರಾ– ಹೊಣೆ

7

ದಸರಾ– ಹೊಣೆ

Published:
Updated:

ನಾಡಹಬ್ಬ ‘ದಸರಾ’ ಬಗ್ಗೆ ಆಡಳಿತ ನಡೆಸುವವರಿಗೆ ಸ್ಪಷ್ಟವಾದ ಅರಿವಿಲ್ಲದೆ ಇರುವುದರಿಂದ ಆ ಹೆಸರಿನಲ್ಲಿ ಈಗ ಅನೇಕ ಅಸಂಬದ್ಧ ಚಟುವಟಿಕೆಗಳು ನಡೆಯುವಂತಾಗಿದೆ.

‘ದಸರಾ’ (19ನೆಯ ಶತಮಾನದ ಉತ್ತರಾರ್ಧದಲ್ಲಿ ಚಾಲ್ತಿಗೆ ಬಂದ ಪದ) ಅಥವಾ ‘ಮಹಾನವಮಿ’ ಅಥವಾ ‘ನವರಾತ್ರಿ’ ಹಬ್ಬದ ಆಚರಣೆ ಮೈಸೂರಿನಲ್ಲಿ 1805ರಲ್ಲಿ ಪ್ರಾರಂಭವಾಗಿ, 1969ರವರೆಗೂ ಬಹುಪಾಲು ಒಂದೇ ಬಗೆಯಲ್ಲಿ ನಡೆಯುತ್ತ ಬಂದಿತ್ತು ಎಂಬುದು ಇತಿಹಾಸ ಬಲ್ಲವರಿಗೆಲ್ಲ ತಿಳಿದಿರುವ ಸಂಗತಿ.

1969ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮಾಜಿ ರಾಜರ ರಾಜಧನವನ್ನು ನಿಲ್ಲಿಸಿದರು. ಕಾರಣ, 1970ರಲ್ಲಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಜಯಚಾಮರಾಜೇಂದ್ರ ಒಡೆಯರ್ ನಿರಾಕರಿಸಿದರು. ಆ ವರ್ಷ ದಸರಾ ನಡೆಯಲಿಲ್ಲ. ಆಗ ಮೈಸೂರಿನ ಕೆಲವು ಗಣ್ಯರು ಸೇರಿ ‘ಪ್ರೈವೇಟ್ ದಸರ ಮೆರವಣಿಗೆ’ಯನ್ನು ನಗರದ ಕ್ರಾಫರ್ಡ್ ಹಾಲ್ ಮುಂಭಾಗದ ಮೈದಾನದಿಂದ ನಡೆಸಿದರು. ಆನಂತರ, 1971ರಿಂದ ದಸರಾ ‘ನಾಡಹಬ್ಬ’ ಎಂದು ಸರ್ಕಾರದಿಂದಲೇ ನಾಮಾಂಕಿತಗೊಂಡು ಪುನಃ ಚಾಲ್ತಿಗೆ ಬಂತು. ಅದೇ ಇಂದು ಆಚರಣೆಯಲ್ಲಿರುವ ಹಬ್ಬ.

ಅಲ್ಲಿಂದೀಚೆಗೆ ದಸರಾ ಆಚರಣೆಯಲ್ಲಿ ಅನೇಕ ಮಾರ್ಪಾಡುಗಳಾಗಿವೆ. ‘ದಸರಾ’ ಎಂಬ ಪದವನ್ನು ಹಿಗ್ಗಿಸಿ, ಅದರೊಳಗೆ ಹಲವಾರು ಕಾರ್ಯಕ್ರಮಗಳನ್ನು ಸೇರಿಸಲಾಗಿದೆ. ಕ್ರಮೇಣ, ದಸರಾವನ್ನು ಪ್ರವಾಸೋದ್ಯಮದ ಒಂದು ಭಾಗವಾಗಿ ಮಾಡಿ, ಲಾಭಕೋರತನವನ್ನು ಅದರಲ್ಲಿ ಅಳವಡಿಸಲಾಯಿತು. ಇಲ್ಲಿ ಅವಿವೇಕದ, ಸ್ವಾರ್ಥದ ದರ್ಬಾರು ನಡೆಯುತ್ತಿದೆ. ದಸರಾ  ಹಬ್ಬವೆಂದರೆ ನಮ್ಮ ನಾಡು ಸಾಗಿಬಂದ ದಾರಿಯನ್ನು ಗುರುತಿಸಿಕೊಳ್ಳುವ ಒಂದು ಸಂದರ್ಭ ಮಾತ್ರ ಎಂಬ ಅರಿವು ನಮಗಿರಬೇಕಾದ್ದು ಅಗತ್ಯ. ಮೇಲಾಗಿ, 1610ರಿಂದ ನಡೆದುಕೊಂಡು ಬರುತ್ತಿರುವ ಮಹಾನವಮಿಹಬ್ಬ ಮತ್ತು ಹತ್ತನೆಯ ದಿನ ನಡೆಯುವ ವಿಜಯದಶಮಿ ಮೆರವಣಿಗೆ (ದಸರಾ) ರಾಜ ಪ್ರತೀಕವೇ ಹೊರತು ಬೇರೇನೂ ಅಲ್ಲ. ಈ ವಿವೇಚನೆಯೂ ನಮಗಿರಬೇಕು.

ಜೊತೆಗೆ, ಈಗ ‘ನಾಡಹಬ್ಬ ದಸರಾ’ವನ್ನು ಆಚರಿಸುತ್ತಿರುವುದು ರಾಜ್ಯ ಸರ್ಕಾರ. ಯಾವುದೇ ಒಂದು ಸರ್ಕಾರ ಹಬ್ಬವನ್ನು ಆಚರಿಸುತ್ತ ಕುಳಿತುಕೊಳ್ಳುವುದು  ಸರಿಯಲ್ಲ. ಹಬ್ಬ ಆಚರಿಸುವವರಿಗೆ ಒಂದಿಷ್ಟು ನೆರವಿಗೆ ಬರಬಹುದಷ್ಟೆ. ಸರ್ಕಾರವು ದಸರಾ ನಡೆಸಲು ಯಾವುದಾದರೊಂದು ಸಂಸ್ಥೆಯನ್ನು ಗೊತ್ತುಪಡಿಸಿಕೊಳ್ಳುವುದು ಸರಿಯಾದ ಕ್ರಮ. ಆ ದಿಸೆಯಲ್ಲಿ ಈಗ ಅಸ್ತಿತ್ವದಲ್ಲಿರುವ ‘ಮೈಸೂರು ಅರಮನೆ ಮಂಡಳಿ’ಗೆ ದಸರಾ ನಡೆಸುವ ಜವಾಬ್ದಾರಿಯನ್ನು ನೀಡುವುದು ಸೂಕ್ತ.

ಹಾಗೆಯೇ ದಸರಾ ಸಂದರ್ಭದಲ್ಲಿ ನಡೆಯುವ ವಸ್ತುಪ್ರದರ್ಶನವನ್ನು ಆಯೋಜಿಸುವ ಹೊಣೆಯನ್ನು ಸಹ ‘ಅರಮನೆ ಮಂಡಳಿ’ಗೆ ವಹಿಸಬಹುದು. ಮತ್ತೆ ಅದಕ್ಕೊಂದು ಪ್ರಾಧಿಕಾರ ಖಂಡಿತ ಅನವಶ್ಯಕ.

ಹೊರೆಯಾಲ ದೊರೆಸ್ವಾಮಿ, ಮೈಸೂರು

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !