ಶುಕ್ರವಾರ, ಆಗಸ್ಟ್ 23, 2019
21 °C

ಸಂವಾದ ಎಲ್ಲಿಂದ ಶುರುವಾಗಬೇಕು?

Published:
Updated:

‘ಮತಾಂಧತೆಯ ವಿರೋಧದಲ್ಲೂ ಮತಾಂಧತೆ’ ಎಂಬ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿ ಅವರ ಲೇಖನವು (ಪ್ರ.ವಾ., ಆ.9) ಸಂವಾದಕ್ಕೆ ಸಂಬಂಧಿಸಿದ ವಿಷಯವನ್ನು ಎತ್ತಿ ಹೇಳಿದೆ. ದೇಶದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಎಡ-ಬಲಗಳ ನಡುವೆ ಗಂಭೀರ ಸಂವಾದವೇ ನಡೆದಿಲ್ಲವೆಂದೂ, ಅದೀಗ ನಡೆಯಬೇಕಿರುವ ತುರ್ತಿದೆ ಎಂದೂ ಹೇಳಿರುವುದು ಅತ್ಯಂತ ವಾಸ್ತವಿಕವಾದುದು. ಆದರೆ ಎಲ್ಲಿಂದ, ಹೇಗೆ ಸಂವಾದ ಶುರುವಾಗಬೇಕು ಎಂಬ ಪ್ರಶ್ನೆ ಹುಟ್ಟುತ್ತದೆ. ಅದು ‘ಸ್ನೇಹ’ದಿಂದ ಶುರುವಾಗಬೇಕು.

ನವೋದಯ ಕಾಲದಲ್ಲಿ ಪ್ರತಿಯೊಬ್ಬ ಮೇರುಸಾಹಿತಿಯೂ ತಮ್ಮ ಸಮಕಾಲೀನರೊಡನೆ ವೈಯಕ್ತಿಕ ಮಟ್ಟದಲ್ಲಿ ಸ್ನೇಹ, ಪತ್ರ ವ್ಯವಹಾರ ಇತ್ಯಾದಿಗಳನ್ನು ಹೊಂದಿರುತ್ತಿದ್ದರು. ಈ ಸ್ನೇಹವೇ- ಅದೆಷ್ಟೇ ಮತಭೇದವಿದ್ದರೂ- ಕನ್ನಡದ ಅಂದಿನ ಬೌದ್ಧಿಕ ಲೋಕವನ್ನು ತಿಳಿಯಾಗಿ ಇರಿಸಿರುತ್ತಿದ್ದದ್ದು. ಈ ಅಂಶವೇ ಡಿವಿಜಿ ಮತ್ತು ಮೂರ್ತಿರಾಯರಂಥ ‘ಆದರ್ಶ ಜಗಳಗಂಟ’ರನ್ನು ಸೃಷ್ಟಿಸಿದ್ದು!

ಸ್ನೇಹದ ಶಕ್ತಿಯೇ ಅಂತಹುದು. ಆದರೆ ಇಂದು ಅದೆಷ್ಟೋ ಮೇರು ವಿದ್ವಾಂಸರು, ಸಾಹಿತಿಗಳು ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವುದೇ ಇಲ್ಲ! ಹಿಂದೆಲ್ಲ ಸ್ನೇಹ ಮೊಳಕೆಯೊಡೆಯುತ್ತಿದ್ದದ್ದೇ ಈ ಸಮ್ಮೇಳನದಲ್ಲಿ. ಇಂದಿನ ಪರಿಸ್ಥಿತಿಯಲ್ಲಿ ಇಂಥ ಅನೇಕ ಸಮ್ಮೇಳನಗಳು ಜರುಗುತ್ತವಾದರೂ ಅವು ಸ್ನೇಹ ಮೂಡುವ ವೇದಿಕೆ
ಗಳಾಗುತ್ತಿಲ್ಲ. ಸ್ನೇಹ ಮೂಡಿದರೂ ಅದು ಪಂಥವನ್ನು ಮೀರುತ್ತಿಲ್ಲ! ಈ ರೀತಿಯ ಪಂಥಾತೀತ ಸ್ನೇಹದಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹಳಷ್ಟು ಲಾಭವಿದೆ ಎಂದರಿತು ಮುಂದುವರಿಯುತ್ತಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಭಾವನೆಗಳಿಗೆ ಬೆಲೆ ಕೊಡುವುದು ಮಾನವೀಯತೆಯ ಪ್ರಮುಖ ಆಯಾಮ. ಭಾವನೆಗೆ ಬೆಲೆ ಕೊಡದ ಬೌದ್ಧಿಕತೆಯು ಮತಾಂಧವಾಗದೇ ವಿಧಿಯಿಲ್ಲ.

ಶಶಾಂಕ, ಉಜಿರೆ

Post Comments (+)