ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸಂಕಟದ ಖಿನ್ನತೆ...

Last Updated 1 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಚಿತ್ರದುರ್ಗದ ಮುರುಘಾ ಶರಣರ ದ್ವಂದ್ವ ನೀತಿ, ವೈರುಧ್ಯದ ನಿಲುವುಗಳನ್ನು ಎಸ್.ಎಂ.ಜಾಮದಾರ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಫೆ. 1) ಕಟು ವಾಸ್ತವದ ಘಟನೆಗಳನ್ನು ಸೋದಾಹರಣೆಯಾಗಿ ಮಂಡಿಸುವ ಮೂಲಕ ಎತ್ತಿತೋರಿಸಿದ್ದಾರೆ.

‘ರಾಜಕೀಯವು ಶರಣರ ಧರ್ಮವನ್ನು ನುಂಗಿದೆಯೋ ಅಥವಾ ಶರಣರೇ ರಾಜಕೀಯವನ್ನು ನುಂಗಿದ್ದಾರೋ’ ಎಂಬುದು ಸ್ಪಷ್ಟವಾಗಬೇಕಾದ ಅಗತ್ಯವನ್ನು ಮುಂದಿಟ್ಟಿದ್ದಾರೆ. ಸುಸ್ಥಿರ ಸಮಾಜವನ್ನು ಮುನ್ನಡೆಸ ಬೇಕಾದ ಈ ಹೊತ್ತಿನ ಯಾವುದೇ ಶರಣರು, ಮಠಾಧೀಶರು ಸಾಂದರ್ಭಿಕವಾಗಿ ಅಲ್ಲದಿದ್ದರೂ ಸಂದರ್ಭವನ್ನು ಸೃಷ್ಟಿಸುತ್ತ ತಮ್ಮ ಮಠ, ಮಂದಿರಕ್ಕೆ ಬರಬೇಕಾದ ‘ಆದಾಯ ಆಹ್ವಾನ’ದ ವೀಳ್ಯೆಯನ್ನು ‘ರಾಜಪ್ರಭುತ್ವ’ದಿಂದ ಪಡೆಯುತ್ತಿರುವುದನ್ನು ಸಹ ಲೇಖಕರು ದಿಟ್ಟತನದಿಂದ ಬಹಿರಂಗಗೊಳಿಸಿದ್ದಾರೆ. ಇಂಥ ನಡೆ ‘ಶರಣರೇ ರಾಜಕೀಯವನ್ನು ನುಂಗುತ್ತಲಿದ್ದಾರೆ’ ಎಂಬುದನ್ನು ಪ್ರತಿಬಿಂಬಿಸುವುದು ಒಂದಾದರೆ, ಇನ್ನೊಂದು, ಲಿಂಗಾಯತ ಸ್ವತಂತ್ರಧರ್ಮ ಹೋರಾಟದಲ್ಲಿ ಅನೇಕ ಶರಣರು, ಮಠಾಧಿಪತಿಗಳು ಸಹ ಮುಂದಡಿ ಇಡುತ್ತಿದ್ದಾಗಲೇ ಸ್ವಾರ್ಥ
ಸಾಧಕತನದ ರಾಜಕಾರಣದ ಹೆಜ್ಜೆಗಳೂ ಹೋರಾಟದಲ್ಲಿ ಮೂಡಿದ್ದನ್ನು ತೋರಿಸಿದೆ. ಲಿಂಗಾಯತ ಸ್ವತಂತ್ರಧರ್ಮದ ಹೋರಾಟದಲ್ಲಿ ಖಾದಿವಸ್ತ್ರವು ಕಾವಿವಸ್ತ್ರದೊಂದಿಗೆ ಸೇರಿಕೊಂಡಾಗಲೇ ‘ರಾಜಕೀಯವು ಶರಣ ಧರ್ಮವನ್ನು ನುಂಗುವ’ ಮುನ್ಸೂಚನೆಗಳೂ ಕಾಣಿಸಿಕೊಂಡವು.

ಖಾದಿ ಮತ್ತು ಕಾವಿಧಾರಿಗಳು ಹಮ್ಮಿಕೊಂಡ ಈ ಹೋರಾಟದಿಂದಾಗಿ, ಸಮಾಜದ ಪ್ರಜ್ಞಾವಂತರು ‘ಧರ್ಮಸಂಕಟದ ಖಿನ್ನತೆ’ಗೆ ಒಳಗಾದರು. ತತ್ಪರಿಣಾಮವಾಗಿ, ಆ ಹೊತ್ತಿನಲ್ಲಿ ನಡೆಯುತ್ತಿದ್ದ ಪ್ರಜಾಸಂಗ್ರಾಮದಲ್ಲಿ ‘ಧರ್ಮಕಂಟಕ’ರಿಗೆ ‘ಧರ್ಮದೇಟು’ ನೀಡಿದ ವೀರಶೈವ/ಲಿಂಗಾಯತ ಸಮಾಜಬಾಂಧವರು, ರಾಜಕೀಯಪಲ್ಲಟಕ್ಕೆ ಅಷ್ಟೇ ಅಲ್ಲ, ಕೆಲ ದಿನಗಳ ಕಾಲ ರಾಜಕೀಯ ಅಸ್ಥಿರತೆಗೆ ಉತ್ತರದಾಯಿಯಾದರು. ಈ ಘಟನೆಯನ್ನು ಮರೆತಂತಿರುವ ಕೆಲವರು ಅನ್ಯ ಮಠ, ಮಂದಿರಗಳ ಜೊತೆ ಸಂಬಂಧ ಇಟ್ಟುಕೊಳ್ಳಬಾರದೆಂದು ನೀಡುವ ಆದೇಶಗಳು ತುಘಲಕ್‍ನ ರಾಜಪ್ರಭುತ್ವವನ್ನು ನೆನಪಿಸುತ್ತವೆ. ಇಂಥ ನಿಲುವುಗಳಿಂದಲೇ ವೀರಶೈವ/ಲಿಂಗಾಯತ ಧರ್ಮದ ಸ್ವಾಸ್ಥ್ಯವನ್ನು ಕದಡಿದಂತಾಗುತ್ತದೆ ಎಂಬುದನ್ನು ಎಲ್ಲ ಶರಣರು, ಮಠಾಧೀಶರು ಯಾವಾಗ
ಅರಿತುಕೊಳ್ಳುತ್ತಾರೆ?

ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT