ವನ್ಯಸಂಪತ್ತಿಗೆ ಧಕ್ಕೆ ಬರದಿರಲಿ

7

ವನ್ಯಸಂಪತ್ತಿಗೆ ಧಕ್ಕೆ ಬರದಿರಲಿ

Published:
Updated:

ಗುಂಡ್ಲುಪೇಟೆ ತಾಲ್ಲೂಕು ಪರಿಸರದಲ್ಲಿ ಬರುವ ಹೆಸರಾಂತ ಹುಲಿ ಸಂರಕ್ಷಣಾ ವನ್ಯಧಾಮ ಹಾಗೂ ನಮ್ಮ ಹೆಮ್ಮೆಯ ಬಂಡೀಪುರದಲ್ಲಿ ನೆರೆಯ ರಾಜ್ಯ ಕೇರಳಕ್ಕೆ ರಾತ್ರಿಹೊತ್ತು ವಾಹನ ಸಂಚಾರಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದೆಂಬ ‘ಪ್ರಜಾವಾಣಿ’ಯ ಸಂಪಾದಕೀಯವನ್ನು (ಆ.7) ನಾನು ಸಂಪೂರ್ಣವಾಗಿ ಒಪ್ಪುತ್ತೇನೆ ಮತ್ತು ಬೆಂಬಲಿಸುತ್ತೇನೆ.

ಕೇರಳ ಸರ್ಕಾರ ಮತ್ತು ಅಲ್ಲಿಯ ಕೆಲವು ಸ್ವಹಿತಾಸಕ್ತಿ ಶಕ್ತಿಗಳು ಕರ್ನಾಟಕವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ನಡೆಸಿರುವ ಹುನ್ನಾರ ಇದು. ಈ ಅವಕಾಶವಾದಿಗಳಿಗೆ ನಮ್ಮ ಸರ್ಕಾರ ಬಲಿಬಿದ್ದು ನಮ್ಮ ಪ್ರಾಕೃತಿಕ ಸಂಪತ್ತನ್ನು ಯಾವ ಕಾರಣಕ್ಕೂ ನಾಶವಾಗಲು ಬಿಡಬಾರದು. ಕೇಂದ್ರದ ಈಗಿನ ಸರ್ಕಾರ ತನ್ನ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳುವುದಕ್ಕಾಗಿ ಮತ್ತು ಕೇರಳ ಮತದಾರರನ್ನು ಓಲೈಸುವುದಕ್ಕಾಗಿ ನಮ್ಮ ಸರ್ಕಾರಕ್ಕೆ ದುರುದ್ದೇಶದಿಂದ ಪತ್ರ ಬರೆದಿದೆ ಎಂಬ ಗುಮಾನಿ ಬರುತ್ತದೆ. ಕೇರಳದ ಮಂದಿ ಕರ್ನಾಟಕಕ್ಕೆ ಬಂದುಹೋಗಲು ಅನ್ಯ ಮಾರ್ಗಗಳಿರುವಾಗ ಈ ಪ್ರಕೃತಿ ವಿನಾಶದ ಮಾರ್ಗವೇ ಬೇಕೆಂದು ಪದೇ ಪದೇ ದುಂಬಾಲು ಬೀಳುತ್ತಿರುವುದು- ಖಂಡಿತವಾಗಿಯೂ ಅವರ ದುರಾಸೆಯ ಪ್ರತೀಕ.

ವನ್ಯಸಂಪತ್ತು ಮತ್ತು ಪ್ರಾಣಿಸಂಪತ್ತನ್ನು ನಾಶ ಮಾಡುವ ದುರಾಲೋಚನೆಯ ಮನಸ್ಥಿತಿಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಬಂಡೀಪುರದ ಸಮಗ್ರತೆಯನ್ನು ನಮ್ಮ ಸರ್ಕಾರ ಉಳಿಸಬೇಕು. ಇಲ್ಲಿನ ಎಲ್ಲ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳೂ ಸೇರಿದಂತೆ ಸಮಸ್ತ ಜನರೂ ಒಂದಾಗಿ ಈ ಅನಿಷ್ಟ ಯೋಜನೆಯನ್ನು ವಿರೋಧಿಸಬೇಕು. ಅದೇ ರೀತಿ ಕರ್ನಾಟಕದ ನೆಲಸಂಪತ್ತು, ಜಲಸಂಪತ್ತು, ಭಾಷಾಸಂಪತ್ತು , ಸಾಂಸ್ಕೃತಿಕ ಸಂಪತ್ತನ್ನು ಉಳಿಸುವ ಮಾತು ಕೊಟ್ಟಿರುವ ನಮ್ಮ ರಾಜ್ಯ ಸರ್ಕಾರ ಈ ಬಗ್ಗೆ ಕರಾರುವಾಕ್ಕಾದ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಅದಕ್ಕೆ ಬದ್ಧವಾಗಿರಬೇಕು. ಕನ್ನಡ ನಾಡಿನ ವನ್ಯಸಂಪತ್ತಿಗೆ ಯಾವ ಬಗೆಯ ಧಕ್ಕೆ ಎಂದೂ ಬಾರದಿರಲಿ ಎಂದು ನಾವು ಮನಃಪೂರ್ವಕವಾಗಿ ಹಾರೈಸೋಣ, ಆಶಿಸೋಣ ಹಾಗೂ ಒತ್ತಾಯಿಸೋಣ.

ಹೊರೆಯಾಲ ದೊರೆಸ್ವಾಮಿ, ಮೈಸೂರು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !