ನಮ್ಮ ನೆಲಕ್ಕೆ ಸಲ್ಲದ ನಡವಳಿಕೆ

7

ನಮ್ಮ ನೆಲಕ್ಕೆ ಸಲ್ಲದ ನಡವಳಿಕೆ

Published:
Updated:

ಧಾರವಾಡದ ‘ಸಾಹಿತ್ಯ ಸಂಭ್ರಮ’ದ ಬಗ್ಗೆ ನಿಲುವುಗಳು, ಭಿನ್ನಾಭಿಪ್ರಾಯಗಳು ಏನೇ ಇರಲಿ, ಏನೇನೂ ನಡೆಯದ ಕಾಲದಲ್ಲಿ ಸಾಹಿತ್ಯ ಮಂಥನಕ್ಕೆ ಒಂದು ನಿರ್ದಿಷ್ಟ ವೇದಿಕೆಯೊಂದಿದೆ ಎನ್ನುವುದು ಖುಷಿಯ ಸಂಗತಿ. ಮೊನ್ನೆ ಆದ ದಾಳಿಯ ವಿಡಿಯೊ ನೋಡಿದರೆ ಗಾಬರಿ ಆಗುವಂತಿದೆ. ಎಂಬತ್ತರ ವಯಸ್ಸಿನ, ನಮ್ಮ ನಡುವಿನ ಗೌರವಾರ್ಹ ಸಂಶೋಧಕರಾದ ಕೃಷ್ಣಮೂರ್ತಿ ಹನೂರು ಮಾತನಾಡುತ್ತಿದ್ದಾಗ ವೇದಿಕೆ ಏರಿ ಬರುವ ವ್ಯಕ್ತಿಗಳು, ಮೈಕ್ ಎತ್ತಿ ನೆಲಕ್ಕೆ ಅಪ್ಪಳಿಸುತ್ತಾರೆ. ಕುರ್ಚಿಗಳನ್ನು ನೆಲಕ್ಕೆ ಎಸೆಯುತ್ತಾರೆ.

ವೇದಿಕೆ ಮೇಲೆ ಇದ್ದ ಇನ್ನಿಬ್ಬರು ಕೂಡ ಸಾಕಷ್ಟು ಹಿರಿಯರು. ಈ ಪುಂಡಾಟಿಕೆ ನೋಡಿದ ಯಾರಿಗಾದರೂ ಆರೋಗ್ಯ ವ್ಯತ್ಯಾಸ ಆಗಿದ್ದರೆ, ಸೇನೆಯನ್ನು ಪುಂಡಾಟಿಕೆಯ ಮೂಲಕ ಸಮರ್ಥಿಸಲು ಬಂದಿದ್ದ ‘ಶಿಷ್ಟ’ರಿಗೆ ನಿಭಾಯಿಸಲು ಆಗುತ್ತಿತ್ತೇ? ಆ ಹೊಣೆ ಯಾರು ಹೊರಬೇಕಿತ್ತು?

ಇಂತಹ ಮನಃಸ್ಥಿತಿಗಳಿಗೆ ತಮ್ಮ ನಡವಳಿಕೆಯಿಂದ ತಾವೇ ಸೇನೆಗೆ, ಊರಿಗೆ, ತಮ್ಮ ಸಂಸ್ಕೃತಿಗೆ ಅವಮಾನ ಮಾಡುತ್ತಿದ್ದೇವೆ ಎನ್ನುವುದು ಅರ್ಥವಾಗದೇ ಹೋದರೆ ಏನೆಲ್ಲಾ ಹೆಗ್ಗಳಿಕೆ ಇದ್ದರೂ ದಂಡವೇ. ಶಿವ ವಿಶ್ವನಾಥನ್ ಎಲ್ಲಾ ಸೈನಿಕರೂ ಅತ್ಯಾಚಾರಿಗಳು ಎಂದಿಲ್ಲ. ದಾಖಲಾಗಿರುವ ಕೆಲವು ಘಟನೆಗಳನ್ನು ಉಲ್ಲೇಖಿಸಿ ಹೇಳಿದ್ದರು. ಒಂದು ಪಕ್ಷ ಬೀಸು ಹೇಳಿಕೆ ಆಗಿದ್ದರೆ ದಾಖಲೆ ಸಮೇತ ಯಾರಾದರೂ ವಿರೋಧಿಸಿ ಮಾತನಾಡಬಹುದು.

‘ನಾನಿದ್ದ ಕಾಲದಲ್ಲಿ ಹಾಗೆ ಆಗಿರಲಿಲ್ಲ’ ಎನ್ನುವ ಕಾರಣಕ್ಕೆ ಇಡೀ ಸೇನೆಯ ಬಗ್ಗೆ ವ್ಯಾಖ್ಯಾನವನ್ನೇ ನೀಡಿಬಿಡುವುದು ಆತ್ಮಾವಲೋಕನ ನಿರಾಕರಿಸುವ ಅಸಮಂಜಸ ನಡವಳಿಕೆ. ತಪ್ಪುಗಳು ಘಟಿಸಿದ್ದರೆ ಅವನ್ನು ಪುನರ್‌ ಅವಲೋಕಿಸುವ, ಅವುಗಳನ್ನು ಮೀರಿ ಉದ್ಧಾರ ಆಗುವ ಅವಕಾಶ ಎಲ್ಲಾ ಸಮಯದಲ್ಲೂ ಇದೆ. ಆ ಮೂಲ ತಿರುಳನ್ನೇ ಕುರ್ಚಿ ವೀರರು ಇಂದು ಸೋಲಿಸಿದ್ದಾರೆ. ಇದು ಕನ್ನಡ, ಧಾರವಾಡ, ಸಾಹಿತ್ಯ ಹಾಗೂ ಈ ಕೆಲಸ ಮಾಡಿದವರ ವ್ಯಕ್ತಿತ್ವದ ಘನತೆ ಕಳೆಯುವಂಥ ನಡವಳಿಕೆ. ಈ ನೆಲಕ್ಕೆ ಹೊಂದುವಂತಹ ಪ್ರತಿಭಟನೆಯ ಮಾದರಿ ಅಲ್ಲವೇ ಅಲ್ಲ.

ಪ್ರೀತಿ ನಾಗರಾಜ, ಮೈಸೂರು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !