ಬುಧವಾರ, ಜೂನ್ 29, 2022
26 °C

ವಾಚಕರವಾಣಿ | ಗುಣಮಟ್ಟದ ಕಲಿಕೆ ಖಾತರಿಪಡಿಸುವುದು ತುರ್ತು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಠ್ಯಪುಸ್ತಕ ಕುರಿತ ವಿವಾದ ತಾರಕಕ್ಕೇರಿ ಅದು ವಿವಿಧ ಆಯಾಮಗಳನ್ನು ಪಡೆಯುತ್ತಿರುವಾಗ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದ ‘ರಾಷ್ಟ್ರೀಯ ಸಾಧನೆ ಸಮೀಕ್ಷೆ’ಯ ಅಂಶಗಳು ಪ್ರಕಟಗೊಂಡು ಕಳವಳ ಮೂಡಿಸಿವೆ (ಪ್ರ.ವಾ., ಮೇ 27).

ಈ ಸಮೀಕ್ಷಾ ವರದಿಯು ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿದು ನಮ್ಮನ್ನು ಮತ್ತೊಂದು ದಿಸೆಯಲ್ಲಿ ಯೋಚಿಸಲು ಹಚ್ಚುತ್ತದೆ. 2021ನೇ ಸಾಲಿನ 3, 5, 8 ಮತ್ತು 10ನೇ ತರಗತಿಯ ಮಕ್ಕಳ ಭಾಷೆ ಮತ್ತು ಇತರ ವಿಷಯಗಳ ಕಲಿಕೆಯು ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಳಿಕೆ ಕಂಡುಬಂದಿರುವುದಾಗಿ ವರದಿ ಹೇಳುತ್ತದೆ. ನಮ್ಮ ರಾಜ್ಯದಲ್ಲಿ ಈ ಹಿಂದೆ ನಡೆದ ಇದೇ ಬಗೆಯ ಬೇರೆ ಬೇರೆ ಸಮೀಕ್ಷೆಗಳು ಕೂಡ ಇದೇ ರೀತಿಯ ಫಲಿತಾಂಶವನ್ನು ಸೂಚಿಸಿವೆ.

ಹತ್ತನೆಯ ತರಗತಿಯ ಆಧುನಿಕ ಭಾರತೀಯ ಭಾಷೆ ಮತ್ತು ಇತರ ವಿಷಯಗಳ ಕಲಿಕೆ ಮತ್ತು ಗ್ರಹಿಕೆಯ ಮಟ್ಟ ಶೇ 99ರಷ್ಟು ವಿದ್ಯಾರ್ಥಿಗಳಲ್ಲಿ ಸಾಧಾರಣ ಮತ್ತು ಅದಕ್ಕಿಂತ ಕಡಿಮೆ ಎಂದು ಹೇಳಲಾಗಿದೆ. ಅದೇ ರೀತಿ ಇಂಗ್ಲಿಷ್ ಕಲಿಕೆ ಕೂಡ. ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಪಠ್ಯಗಳಲ್ಲಿ ಕೆಲವು ಪಾಠಗಳನ್ನು ಸೇರಿಸುವುದು, ತೆಗೆದು ಹಾಕುವ ವಿವಾದ ಈಗ ಮುನ್ನೆಲೆಯಲ್ಲಿ ಇದೆ. ಆದರೆ ಇರುವ ಪಾಠಗಳನ್ನು ಮಕ್ಕಳಿಗೆ ಹೇಗೆ ಕಲಿಸಲಾಗುತ್ತಿದೆ, ಮಕ್ಕಳು ಹೇಗೆ ಪಾಠಗಳನ್ನು ಕಲಿಯುತ್ತಿದ್ದಾರೆ ಅಥವಾ ಗ್ರಹಿಸುತ್ತಾರೆ ಎಂಬುದನ್ನು ಗಮನಿಸಿದಾಗ ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಗುಣಮಟ್ಟ ಇಲ್ಲದಿರುವ ಕಡೆ ವಿವಿಧ ಸಮೀಕ್ಷೆಗಳು ಗಮನ ಸೆಳೆಯುತ್ತವೆ.

ಕಳಪೆ ಗುಣಮಟ್ಟಕ್ಕೆ ನಮ್ಮಲ್ಲಿ ಯಾರನ್ನೂ ಹೊಣೆಗಾರರನ್ನಾಗಿ ಮಾಡುವ ಕ್ರಮ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಸತತವಾಗಿ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂಥ ಮಕ್ಕಳಿಗೆ ಹತ್ತನೆಯ ತರಗತಿಯ ಪರೀಕ್ಷೆಗಳಲ್ಲಿ ಗ್ರೇಸ್ ಅಂಕ ನೀಡುವುದು ಮತ್ತೊಂದು ರೀತಿಯ ವಂಚನೆ. ನಿಗದಿತ ಪಾಠಗಳನ್ನು ಸಮರ್ಪಕವಾಗಿ ಬೋಧನೆ ಮಾಡುವುದು ಅಷ್ಟೇ ಮುಖ್ಯ. ಇಲ್ಲಿ ಶಿಕ್ಷಕನ ಪಾತ್ರ ಬಹಳ ಮುಖ್ಯ. ಆದ್ದರಿಂದ ಪಠ್ಯ ಬದಲಾವಣೆ, ಸೇರ್ಪಡೆ, ಮಾರ್ಪಾಡು ಇತ್ಯಾದಿ ಅಂಶಗಳೊಂದಿಗೆ ಗುಣಮಟ್ಟದ ಕಲಿಯುವಿಕೆ, ಕಲಿಸುವಿಕೆ ಬಗೆಗಿನ ಚರ್ಚೆಗಳು ಕೂಡ ಮುನ್ನೆಲೆಗೆ ಬರಬೇಕು. ಅದನ್ನು ಖಾತರಿಪಡಿಸುವ ಕ್ರಮ ಆಗಬೇಕು. ಇಲ್ಲದಿದ್ದರೆ ಪಠ್ಯ ಕುರಿತು ವಿವಾದ ಕೇವಲ ಎಡ– ಬಲ ಎಂಬ ವಿವಾದವಾಗಿ, ನೈಜ ಶೈಕ್ಷಣಿಕ ಸಮಸ್ಯೆ ಹಾಗೆಯೇ ಉಳಿಯುತ್ತದೆ.
–ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು