ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಮೆರಿಟ್ ಇದ್ದವರಿಗೆ ತೊಂದರೆಯಿಲ್ಲ

Last Updated 25 ಏಪ್ರಿಲ್ 2019, 20:45 IST
ಅಕ್ಷರ ಗಾತ್ರ

‘ಶಿಕ್ಷಣ ಮಾಫಿಯಾಗೂ ಹೋರಾಟಕ್ಕೂ ಸಂಬಂಧವಿಲ್ಲ’ ಎಂಬ ನನ್ನ ಪತ್ರಕ್ಕೆ ಪ್ರತಿಯಾಗಿ ರಾಜಶೇಖರ ಹತಗುಂದಿ ಅವರು ಎರಡು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ (ವಾ.ವಾ., ಏ. 25). ಪ್ರತ್ಯೇಕ ಧರ್ಮದ ಮಾನ್ಯತೆಗಾಗಿನ ಹೋರಾಟ ಹೊಸ ವಿದ್ಯಮಾನ ಅಲ್ಲ ಮತ್ತು ಅದು ಲಿಂಗಾಯತರಿಗೆ ಮಾತ್ರ ಸೀಮಿತವಾಗಿಲ್ಲ. ಸಾತಂತ್ರ್ಯಪೂರ್ವದಿಂದ ಸಿಖ್ಖರು, ಜೈನರು, ಬೌದ್ಧರು ಮತ್ತು ಲಿಂಗಾಯತರು ಅದೇ ಬೇಡಿಕೆ ಮುಂದಿಟ್ಟು ಸಂವಿಧಾನ ರಚನಾ ಕಾಲದಲ್ಲಿಯೇ ಹೋರಾಡಿದ್ದನ್ನು ಸಂವಿಧಾನ ರಚನಾ ಸಭೆ ಕುರಿತ ಚರ್ಚೆಯ 5 ಮತ್ತು 7ನೇ ಸಂಪುಟಗಳಲ್ಲಿ ಓದಬಹುದು. ಭಾರತದಲ್ಲಿ ಹುಟ್ಟಿದ ಇತರ ಧರ್ಮಗಳಿಗೆ ಮಾನ್ಯತೆ ನೀಡುವ ವಿಷಯವನ್ನು ಸುದೀರ್ಘವಾಗಿ ಚರ್ಚಿಸಿದ ಸಂವಿಧಾನ ರಚನಾ ಸಭೆಯು ಧರ್ಮ ಮಾನ್ಯತೆಯ ಪ್ರಶ್ನೆಯನ್ನು ಪುರಸ್ಕರಿಸಲಿಲ್ಲ. ಆದರೆ ಪರಿಚ್ಛೇದ 25ರಿಂದ 28ರ ಮೂಲಕ ಧಾರ್ಮಿಕ ಹಕ್ಕನ್ನು ನೀಡಿತು. ಅಲ್ಲದೆ ಪರಿಚ್ಛೇದ 29 ಮತ್ತು 30ರಲ್ಲಿ, ಸಣ್ಣಪುಟ್ಟ ಧರ್ಮಗಳಿಗೆ ರಕ್ಷಣೆ ನೀಡಿತು. ಆದಾಗ್ಯೂ ಚಿಕ್ಕಪುಟ್ಟ ಧರ್ಮಗಳಿಗೆ ಸಮಾಧಾನವಾಗಿರಲಿಲ್ಲ.

1992ರಲ್ಲಿ ಸಂಸತ್ತು, ಅಲ್ಪಸಂಖ್ಯಾತ ಧರ್ಮ ಮತ್ತು ಭಾಷೆಗಳಿಗಾಗಿ ಹೊಸ ಕಾನೂನು ರಚಿಸಿತು. ಆ ಮೂಲಕ ಸಿಖ್ಖರು, ಬೌದ್ಧರು 1993ರಲ್ಲಿ ಮತ್ತು ಜೈನರು 2014ರಲ್ಲಿ ಪ್ರತ್ಯೇಕ ಧರ್ಮವೆಂದು ಪರಿಗಣಿಸಲ್ಪಟ್ಟರಲ್ಲದೆ ಧಾರ್ಮಿಕ ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನೂ ಪಡೆದರು. ಮೊದಲನೆಯ ವಿಷಯಕ್ಕೆ ಪ್ರತ್ಯೇಕ ಕಾನೂನು ಇಲ್ಲ. ಎರಡನೆಯ ವಿಷಯಕ್ಕೆ ಸಂಬಂಧಿಸಿದ 1992ರ ಕಾನೂನಿನಲ್ಲಿ ಎರಡೂ ಸಂಗತಿಗಳನ್ನು ಅಳವಡಿಸಲಾಗಿದೆ. ಆದ್ದರಿಂದಲೇ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಮಾರ್ಪಡಿಸಿ ಅಲ್ಪಸಂಖ್ಯಾತ ಧರ್ಮದ ಬೇಡಿಕೆಯಾಗಿ ಪರಿವರ್ತಿಸಲಾಯಿತು.

ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವ ಶಿಕ್ಷಣ ಸಂಸ್ಥೆಗಳು ಸಾವಿರಾರು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಗಿಟ್ಟಿಸಿಕೊಳ್ಳುವುದರಿಂದ ಮೆರಿಟ್ ಕೋಟಾದಲ್ಲಿ ಖೋತಾ ಆಗುವುದಿಲ್ಲವೇ ಎಂಬ ಪ್ರಶ್ನೆ ಎತ್ತಿದ್ದಾರೆ.ಮೆರಿಟ್‍ ನಿರ್ಧರಿಸಲಿಕ್ಕಾಗಿಯೇ ‘ನೀಟ್‌’ ಬಂದಿದೆ. ಅದರಲ್ಲಿ, ಹೆಚ್ಚು ಮೆರಿಟ್ ಪಡೆದವರು ಜನರಲ್ ಮೆರಿಟ್ ಮತ್ತು ಇತರ ಗುಂಪುಗಳಲ್ಲಿ ಕ್ರಮವಾಗಿ ಪ್ರವೇಶ ಪಡೆಯುತ್ತಾರೆ. ಕಡಿಮೆ ಮೆರಿಟ್ ಬಂದವರು ಆಡಳಿತ ಮಂಡಳಿಯ ಕೋಟಾಕ್ಕೆ ಹೋಗಬೇಕು. ಹಿಂದೆಯೂ ಹಾಗಿತ್ತು, ಈಗಲೂ ಹಾಗಿದೆ. ಆದರೆ ಕನಿಷ್ಠ ಮೆರಿಟ್ ಕೂಡ ಇಲ್ಲದವರಿಗೆ ಅವಕಾಶವಿಲ್ಲವಷ್ಟೆ! ಆದ್ದರಿಂದ ಹೆಚ್ಚಿನ ಮೆರಿಟ್ ಇದ್ದವರಿಗೆ ಯಾವುದೇ ತೊಂದರೆಯಿಲ್ಲ.

-ಎಸ್‌.ಎಂ.ಜಾಮದಾರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT