ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನಾಡಿಮಿಡಿತ ಬಲ್ಲವನಿಗೆ ಟಿಕೆಟ್ ಸಿಗಲಿ

ಅಕ್ಷರ ಗಾತ್ರ

ಚುನಾವಣಾ ವ್ಯವಸ್ಥೆ ಕುರಿತು ವಿಧಾನಸಭೆಯಲ್ಲಿ ಇತ್ತೀಚೆಗೆ ಗಂಭೀರ ಚರ್ಚೆ ನಡೆದಿದೆ. ಚರ್ಚೆಯಲ್ಲಿ ಭಾಗವಹಿಸಿದ್ದ ಎಲ್ಲರೂ ನಮ್ಮ ಚುನಾವಣಾ ವ್ಯವಸ್ಥೆ ತೀರಾ ಹದಗೆಟ್ಟಿದೆ, ದುರಸ್ತಿ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ ಈ ದುರಸ್ತಿ ಕಾರ್ಯ ಎಲ್ಲಿಂದ ಪ್ರಾರಂಭವಾಗಬೇಕು? ಯಾರು ಮಾಡಬೇಕು ಎಂಬುದೇ ಚರ್ಚೆಯಾಗಲಿಲ್ಲ. ನಮ್ಮಲ್ಲಿ ಚುನಾವಣಾ ಕಾನೂನು ಮತ್ತು ನಿಯಮಗಳು ಸರಿಯಾಗಿಯೇ ಇವೆ. ಆದರೆ ಆ ಕಾನೂನುಗಳನ್ನು ಮಾಡಿದವರೇ ಪಾಲಿಸದಿರುವುದರಿಂದ ಚುನಾವಣಾ ವ್ಯವಸ್ಥೆಯೇ ಹದಗೆಟ್ಟಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಂದಿನ ಯಾವುದೇ ಪಕ್ಷದಿಂದ ಅಭ್ಯರ್ಥಿಯಾಗಬೇಕಾದ ಮಾನದಂಡಗಳನ್ನು ನೋಡಿದರೆ ಭಯ ಹುಟ್ಟಿಸುವಂತಿವೆ. ನೂರಾರು ಕೋಟಿ ರೂಪಾಯಿಯ ಒಡೆಯರು, ದಂಡು ದಾಳಿಗೆ ಸಿದ್ಧರಿರುವ ಪಡೆ ಹೊಂದಿರುವ ಅಭ್ಯರ್ಥಿಗಳೇ ಎಲ್ಲ ಪಕ್ಷಗಳಿಗೂ ಅಚ್ಚುಮೆಚ್ಚು. ಏಕೆಂದರೆ ಗೆಲ್ಲುವ ಕುದುರೆಗೇ ಹೆಚ್ಚಿನ ಬೆಲೆ.

ಚುನಾವಣಾ ವ್ಯವಸ್ಥೆಯಲ್ಲಿ ಎಲ್ಲ ಪಕ್ಷಗಳಿಗೂ ಬಹುಮತದ ಗೆರೆ ದಾಟುವುದೇ ಗುರಿಯಾಗಿರುತ್ತದೆ. ಹೀಗಾಗಿ ಅಭ್ಯರ್ಥಿಗಳ ಹಣಬಲ, ತೋಳ್ಬಲವನ್ನೇ ಮಾನದಂಡವನ್ನಾಗಿ ಪರಿಗಣಿಸಿ, ಅಭ್ಯರ್ಥಿಗಳನ್ನಾಗಿ ಮಾಡಲಾಗುತ್ತದೆ. ಮತದಾರರಿಗೂ ಇಲ್ಲಿ ಆಯ್ಕೆ ಇಲ್ಲವಾದ್ದರಿಂದ ಕುರುಡುಗಣ್ಣಿಗಿಂತ ಮೆಳ್ಳೆಗಣ್ಣು ವಾಸಿ ಎಂದು ಇದ್ದವರಲ್ಲೇ ಒಬ್ಬರನ್ನು ಆಯ್ಕೆ ಮಾಡುವ ಪರಿಸ್ಥಿತಿ ಇದೆ. ಖಂಡಿತವಾಗಿಯೂ ಇವರಲ್ಲಿ ಯಾರೊಬ್ಬರೂ ಜನರನ್ನು ಪ್ರತಿನಿಧಿಸುವುದಿಲ್ಲ. ಎಲ್ಲರೂ ತಮ್ಮ ತಮ್ಮ ಪಕ್ಷದ ನಾಯಕರ ಹಿತಾಸಕ್ತಿಗಾಗಿಯೇ ಕೆಲಸ ಮಾಡುವವರಾಗಿರುತ್ತಾರೆ. ಹಾಗಾದರೆ ಚುನಾವಣೆ ವ್ಯವಸ್ಥೆ ಸರಿ ಇಲ್ಲವೋ ಪಕ್ಷದಲ್ಲಿರುವ ನೀತಿ ನಿಯಮಗಳು ಸರಿ ಇಲ್ಲವೋ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಸದನದಲ್ಲಿ ಚುನಾವಣಾ ವ್ಯವಸ್ಥೆ ಕುರಿತು ಮಾತನಾಡಿದವರೆಲ್ಲರೂ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗುರುತಿಸುವ ಹಂತದಲ್ಲಿರುವವರೇ. ಹೀಗಾಗಿ ಅವರೆಲ್ಲರೂ ಸದನದಲ್ಲಿ ಚರ್ಚಿಸಿ, ಸದನದ ಸಮಯ ವ್ಯರ್ಥ ಮಾಡುವುದಕ್ಕಿಂತ ತಮ್ಮ ಪಕ್ಷದಲ್ಲೇ ಸಾಮಾನ್ಯ ಕಾರ್ಯಕರ್ತನಿಗೆ, ಜನರ ನಾಡಿಮಿಡಿತ ಬಲ್ಲವನಿಗೆ ಟಿಕೆಟ್ ಕೊಡುವ ಪದ್ಧತಿ ಜಾರಿಗೆ ತರುವುದು ಒಳ್ಳೆಯದು. ಆಗ ಚುನಾವಣೆ ವ್ಯವಸ್ಥೆಯೂ ಸರಿ ಹೋಗುತ್ತದೆ, ಪ್ರಾಮಾಣಿಕ ರಾಜಕಾರಣಿಗಳೂ ಅಧಿಕಾರದ ಗದ್ದುಗೆ ಏರುತ್ತಾರೆ.

- ಬೇ.ನ.ಶ್ರೀನಿವಾಸಮೂರ್ತಿ,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT