ಬುಧವಾರ, ನವೆಂಬರ್ 13, 2019
23 °C

ನಲಿ– ಕಲಿ: ಮಾಧ್ಯಮ ಬದಲಿಸುವುದು ತರವೇ?

Published:
Updated:

‘2020- 21ನೇ ಸಾಲಿನಲ್ಲಿ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಲಿ– ಕಲಿ ಇಂಗ್ಲಿಷ್ ಆರಂಭವಾಗುವ ಕಾರಣ, ಮುಂದಿನ ವರ್ಷದ 1ನೇ ತರಗತಿಗೆ ಇಂಗ್ಲಿಷ್ ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಬಾರದು. ಅದರ ಬದಲಾಗಿ 1ನೇ ತರಗತಿಗೆ ವರ್ಕ್‌ಬುಕ್ 1 ಮತ್ತು 2ಕ್ಕೆ ಬೇಡಿಕೆ ಸಲ್ಲಿಸುವುದು. ಸರ್ಕಾರಿ ಶಾಲೆಗಳು ದಿನಚರಿ ಹಾಗೂ ಅಭ್ಯಾಸ ಪುಸ್ತಕಕ್ಕೂ ಬೇಡಿಕೆ ಸಲ್ಲಿಸಬೇಕು. ಸುತ್ತೋಲೆ ಹಾಗೂ ಸೂಚನೆಯನ್ನು ಸರಿಯಾಗಿ ಓದಿ, ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಿ ಒಂದು ಪ್ರತಿಯನ್ನು ಶಾಲೆಯಲ್ಲಿರಿಸಿ ಮತ್ತೊಂದು ಪ್ರತಿಯನ್ನು ಕ್ಲಸ್ಟರ್‌ಗೆ ನೀಡುವುದು’.

ಹೀಗೊಂದು ಸೂಚನೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಬಂದಿದೆ. ಶಿಕ್ಷಣ ಇಲಾಖೆಯೇ ಈ ರೀತಿ ಮಾಡಿದರೆ ಕನ್ನಡವನ್ನು ಉಳಿಸುವವರಾರು? ಈ ಕ್ರಮ ಕನ್ನಡ ಭಾಷೆಗೆ ಮಾರಣಾಂತಿಕ. ಸರ್ಕಾರಿ ಶಾಲೆಗಳಲ್ಲಿ ಈತನಕ ಇರುವ ‘ನಲಿ– ಕಲಿ’ ಪದ್ಧತಿ ವೈಜ್ಞಾನಿಕವಾದದ್ದು. ಅದರಲ್ಲಿ ಮಗುವಿಗೆ ಕಲಿಕೆಯ ಕಡೆಗೆ ನಿರಾಸಕ್ತಿ ಮೂಡಲು ಸಾಧ್ಯವಿಲ್ಲ. ಅದು ಭಾಷೆ ಹಾಗೂ ಅರಿವಿನ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಅಂತಹ ಉತ್ತಮ ವ್ಯವಸ್ಥೆಯನ್ನು ಸರ್ಕಾರವು ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕಿತ್ತು. ಅದರ ಬದಲು ಈಗ ಶಿಕ್ಷಣ ಇಲಾಖೆಯು ಮಾಧ್ಯಮವನ್ನೇ ಬದಲಿಸಿ ನಲಿ– ಕಲಿಯನ್ನು ಇಂಗ್ಲಿಷ್‌ನಲ್ಲಿ ಆರಂಭಿಸುತ್ತದೆಂದರೆ, ಕನ್ನಡ ಸಂಸ್ಕೃತಿಯನ್ನು ಗುಡಿಸಿಬಿಡುವ, ಅಷ್ಟೇ ಅಲ್ಲ ಒರೆಸಿಬಿಡುವ ಹುನ್ನಾರವಲ್ಲವೇ? ಇದು ನಮ್ಮ ಶಿಕ್ಷಣ ಸಚಿವರಿಗೆ ಗೊತ್ತಿದ್ದೇ ಆಗುತ್ತಿದೆಯೇ?                   

-ಚಂದ್ರಶೇಖರ ದಾಮ್ಲೆ, ಮಂಗಳೂರು

ಪ್ರತಿಕ್ರಿಯಿಸಿ (+)