ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ಅಂಡ್‌ ಕಂಪನಿ’ಯಿಂದ ಜನ್‌ ಧನ್ ಲೂಟಿ ಯೋಜನೆ: ಸುರ್ಜೆವಾಲಾ

Last Updated 27 ಫೆಬ್ರುವರಿ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಜನ್‌ ಧನ್‌ ಲೂಟಿ ಯೋಜನೆಯಡಿ ಮೋದಿ ಅಂಡ್ ಕಂಪನಿ ₹31,691 ಕೋಟಿ ಕೊಳ್ಳೆ ಹೊಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲುದಾರಿಕೆಯನ್ನು ಈ ಹಗರಣ ಬಯಲುಗೊಳಿಸಿದೆ’ ಎಂದು ಎಐಸಿಸಿ ಮಾಧ್ಯಮ ಸಂಪರ್ಕ ವಿಭಾಗದ ಪ್ರಭಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಟೀಕಾ ಪ್ರಹಾರ ನಡೆಸಿದರು.

‘ಹಗರಣ ಮಾಡು, ಹಣ ದೋಚು, ಹಾರಿ ಹೋಗು ಎಂಬುದು ಮೋದಿ ಮಾದರಿ ಕ್ರಿಯಾ ಯೋಜನೆ. ಬಿಜೆಪಿ ಪ್ರಮುಖರ ಕಣ್ಣಳತೆಯಲ್ಲೇ ಈ ಲೂಟಿ ನಡೆದಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಅವರು ಆಪಾದಿಸಿದರು.

ಲಲಿತ್ ಮೋದಿ ಪಲಾಯನ ಮಾಡಿದ ಬಳಿಕ ಛೋಟಾ ಮೋದಿ (ನೀರವ್ ಮೋದಿ), ವಿಜಯ ಮಲ್ಯ, ಮೆಹುಲ್ ಚೋಕ್ಸಿಯಂತಹ ‘ಮೋದಿ ರಾಬ್ಸ್‌ ಇಂಡಿಯಾ ಸ್ಕ್ಯಾಮ್‌’ನಿಂದ ಬ್ಯಾಂಕಿಂಗ್ ವಲಯ ತತ್ತರಿಸಿದೆ ಎಂದರು.

ಬಂಗಾರದ ಮೂಲಕ ಹಣ ಗಳಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಮೆಹುಲ್‌ ಚೋಕ್ಸಿ ಅವರನ್ನು ಆಮಂತ್ರಿಸಿದ್ದು ಏಕೆ. ಅಂದು ಭಾಷಣ ಮಾಡಿದ್ದ ಮೋದಿ, ‘ನಮ್ಮ ಸಹೋದರ ಮೆಹುಲ್‌’ ಎಂದು ಉಲ್ಲೇಖಿಸಿರಲಿಲ್ಲವೇ ಎಂದೂ ಅವರು ಪ್ರಶ್ನಿಸಿದರು.

ಮಹಾರಾಷ್ಟ್ರ ಬಿಜೆಪಿ ವಕ್ತಾರೆ ಎನ್.ಸಿ. ಶೈನಾ ಸೊಸೆ ಅಪರ್ಣಾ ಚೌದಾಸಮ ಅವರು ನೀರವ್ ಮಾಲೀಕತ್ವದ ಕಂಪನಿಯ ವ್ಯಾವಹಾರಿಕ ಮುಖ್ಯಸ್ಥರಾಗಿದ್ದರು. ಚೋಕ್ಸಿ ಕಂಪನಿಗಳ ಕಾರ್ಯಕ್ರಮದಲ್ಲಿ ಶೈನಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪತ್ನಿ ಅಮೃತಾ ಫಡಣವೀಸ್‌, ಗುಜರಾತ್‌ನ ಹಿಂದಿನ ಮುಖ್ಯಮಂತ್ರಿ ಆನಂದಿ ಬೆನ್‌ ಪುತ್ರಿ ಅನಾರ ಪಟೇಲ್‌ ಭಾಗಿಯಾಗಿದ್ದರು. ಇವರೆಲ್ಲರ ಭಾವಚಿತ್ರ ಇದ್ದ ಜಾಹೀರಾತುಗಳನ್ನು ಚೋಕ್ಸಿ ಮಾಲೀಕತ್ವದ ಗೀತಾಂಜಲಿ ಗ್ರೂಪ್‌ ಪ್ರಕಟಿಸಿತ್ತು ಎಂದೂ ಅವರು ತಿಳಿಸಿದರು.

ಮಹದಾಯಿ:ಪ್ರಧಾನಿ ಮೌನ ಏಕೆ?

ಮಹದಾಯಿ ನದಿ ನೀರಿನಲ್ಲಿ ತಮ್ಮ ಪಾಲನ್ನು ಕರ್ನಾಟಕದ ಜನ ಕೇಳುತ್ತಿದ್ದಾರೆ. ಆದರೆ, ಪ್ರಧಾನಿ ಮೌನ ವಹಿಸಿದ್ದಾರೆ ಸುರ್ಜೆವಾಲಾ ಟೀಕಿಸಿದರು. ‘ಮೋದಿ ಇಡೀ ದೇಶಕ್ಕೆ ಪ್ರಧಾನಿಯೇ ವಿನಾ ಒಂದು ರಾಜ್ಯಕ್ಕೆ ಸೀಮಿತರಾದವರಲ್ಲ. ಮಹದಾಯಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಗೋವಾದ ಸಚಿವರು ಬೇಕಾಬಿಟ್ಟಿ ಮಾತನಾಡುತ್ತಿದ್ದರೂ ಅವರು ಮೌನ ತಾಳಿರುವುದು ಏಕೆ‌’ ಎಂದು ಅವರು ಪ್ರಶ್ನಿಸಿದರು.

* ಭ್ರಷ್ಟಾಚಾರ, ಬ್ಯಾಂಕ್ ಲೂಟಿ ಹಗರಣಗಳ ಬಗೆಗಿನ ಜನರ ಪ್ರಶ್ನೆಗಳಿಗೆ ‘ಮೌನ ಮೋದಿ’ ಉತ್ತರಿಸುವ ಮೋದಿಯಾಗುವುದು ಯಾವಾಗ?

-ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರಭಾರಿ, ಎಐಸಿಸಿ ಮಾಧ್ಯಮ ಸಂಪರ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT