ಶುಕ್ರವಾರ, ನವೆಂಬರ್ 22, 2019
27 °C

ವಾಹನ ಖರೀದಿಗೆ ಮನಸ್ಸು ಮಾಡುತ್ತೇನೆ, ಆದರೆ...

Published:
Updated:

ಕುಸಿಯುತ್ತಿರುವ ಆಟೊಮೊಬೈಲ್ ಕ್ಷೇತ್ರಕ್ಕೆ ಸರ್ಕಾರ ಸೂಕ್ತ ಚೇತರಿಕೆ ನೀಡಬೇಕು ಎಂದು ‘ಪ್ರಜಾವಾಣಿ’ ಸಂಪಾದಕೀಯದಲ್ಲಿ (ಸೆ. 12) ಹೇಳಿದ್ದು ಸರಿಯಾಗಿಯೇ ಇದೆ. ಆದರೆ ಎಷ್ಟೇ ತೆರಿಗೆ ಇಳಿತ ಮಾಡಿದರೂ ಹೊಸ ವಾಹನಗಳಿಗೆ ಓಡಾಡಲು ಜಾಗ ಬೇಕಲ್ಲ? ರಸ್ತೆ ಅಗಲ ಮಾಡಬೇಕು, ಪಾರ್ಕಿಂಗಿಗೆ ಜಾಗ ಸೃಷ್ಟಿ ಮಾಡಬೇಕು, ಸಾಧ್ಯವಿದ್ದರೆ ಆಟೊಗಳ ಯದ್ವಾತದ್ವ ಓಡಾಟಕ್ಕೆ ತಡೆ ಹಾಕಬೇಕು.

ಎಲ್ಲಕ್ಕಿಂತ ಮುಖ್ಯ ಎಂದರೆ ರಸ್ತೆಯಲ್ಲಿ ಹೊಂಡಗುಂಡಿ ನಿವಾರಣೆ, ಅಡ್ಡಾದಿಡ್ಡಿ ಓಡುವ ಪಾದಚಾರಿಗಳ ಮೇಲೆ ನಿಗಾ- ಇವೆಲ್ಲ ಆದರೆ ಕಾರು, ಬೈಕು ಖರೀದಿಗೆ ಹೊಸಬರು ಮುಂದೆ ಬಂದಾರು.

ಅರ್ಥಾತ್ ಹೊಸ ನಗರಗಳನ್ನೇ ನಿರ್ಮಿಸಬೇಕು. ಅಲ್ಲಿ ಮಧ್ಯೆ ಮಧ್ಯೆ ರಸ್ತೆ ಅಗೆತ, ಹೊಸ ಸೇತುವೆ ನಿರ್ಮಾಣ, ಸುರಂಗ ಗುಂಡಿ, ಚರಂಡಿ ರಿಪೇರಿ, ಕೇಬಲ್ ಎಳೆತ ಇತ್ಯಾದಿಗಳಿಗೆ ಎಂದೂ ಅವಕಾಶ ಇಲ್ಲದಂತೆ ಮೊದಲೇ ಪ್ಲಾನ್ ಮಾಡಬೇಕು. ಅಲ್ಲಿ ಪ್ರತಿಭಟನಾ ಮೆರವಣಿಗೆ, ಗಣಪನ ವಿಸರ್ಜನೆ, ಗಣ್ಯರ ರೊಯ್ ಎಂಬ ಓಡಾಟ, ಪೆಟ್ರೋಲಿಗೆ ಕ್ಯೂ ಇವೆಲ್ಲ ಇರಕೂಡದು. ಆಗ ನಾನು ಹೊಸ ವಾಹನ ಖರೀದಿ ಮಾಡಲು ಮನಸ್ಸು ಮಾಡುತ್ತೇನೆ. ಮುಂದಿನ ಚುನಾವಣೆಯ ಒಳಗೆ ಅವೆಲ್ಲ ಸಾಧ್ಯವೇ?

–ಕೆ.ಪುಂಡಲೀಕ, ರಾಮನಗರ

ಪ್ರತಿಕ್ರಿಯಿಸಿ (+)