ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಕರಾವಳಿಯ ತೈಲ ಖಜಾನೆ

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ದೇಶದ ಇಂಧನ ಭದ್ರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ. ತುರ್ತು ಸಂದರ್ಭ ಎದುರಾದರೂ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಎದುರಾಗದಂತೆ ನೋಡಿಕೊಳ್ಳಲು ದೇಶದ ನಾನಾ ಭಾಗಗಳಲ್ಲಿ ಕಚ್ಚಾ ತೈಲ ಸಂಗ್ರಹಾಗಾರಗಳ ನಿರ್ಮಾಣ ಮಾಡಲಾಗಿದೆ.

ಪಶ್ಚಿಮ ಕರಾವಳಿಗೆ ಹೊಂದಿಕೊಂಡಿರುವ ಮಂಗಳೂರು, ಜಗತ್ತಿನ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ತೈಲೋತ್ಪನ್ನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಂಗಳೂರು, ಇದೀಗ ಕಚ್ಚಾ ತೈಲ ಸಂಗ್ರಹಣೆ ಮಾಡುವ ಮೂಲಕ ದೇಶದ ತೈಲ ಬೇಡಿಕೆಯನ್ನು ಪೂರೈಸಲು ಸಿದ್ಧವಾಗಿದೆ.

ಇಂಧನ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ದೇಶದ ಮೂರು ಪ್ರದೇಶಗಳಲ್ಲಿ ಕಚ್ಚಾ ತೈಲ ಸಂಗ್ರಹಾಗಾರಗಳ ನಿರ್ಮಾಣ ಮಾಡಿದೆ. ವಿಶಾಖಪಟ್ಟಣ, ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪಾದೂರುಗಳಲ್ಲಿ ಈ ತೈಲ ಸಂಗ್ರಹಾಗಾರಗಳ ನಿರ್ಮಾಣ ಮಾಡಲಾಗಿದೆ. ಮಂಗಳೂರು ಹಾಗೂ ವಿಶಾಖಪಟ್ಟಣ ಸಂಗ್ರಹಾಗಾರಗಳು ಕಾರ್ಯಾರಂಭ ಮಾಡಿವೆ. ಪಾದೂರು ಸಂಗ್ರಹಾಗಾರದ ಕಾಮಗಾರಿ ಅಂತಿಮ ಹಂತದಲ್ಲಿದೆ.

ತೈಲ ಸಂಸ್ಕರಣಾ ಘಟಕಗಳು ಹೊಂದಿರುವ ತೈಲ ಸಂಗ್ರಹದ ಜತೆಗೆ ಈ ಸಂಗ್ರಹಾಗಾರಗಳಲ್ಲಿ ಹೆಚ್ಚುವರಿಯಾಗಿ ಕಚ್ಚಾ ತೈಲವನ್ನು ಶೇಖರಣೆ ಮಾಡುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಇದಕ್ಕಾಗಿಯೇ ‘ಇಂಡಿಯನ್‌ ಸ್ಟ್ರಾಟೆಜಿಕ್‌ ಪೆಟ್ರೋಲಿಯಂ ರಿಸರ್ವ್‌ ಲಿಮಿಟೆಡ್‌’ –(ಐಎಸ್‌ಪಿಆರ್‌ಎಲ್‌) ಆರಂಭಿಸಿದೆ. ಇದು ತೈಲ ಸಂಗ್ರಹಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಅಪಾರ ಪ್ರಮಾಣದಲ್ಲಿ ಕಚ್ಚಾ ತೈಲ ಸಂಗ್ರಹಿಸಲು ವ್ಯವಸ್ಥಿತ ಸಂಗ್ರಹಾಗಾರಗಳ ನಿರ್ಮಾಣ ಅತ್ಯವಶ್ಯಕವಾಗಿದೆ. ಈ ಉದ್ದೇಶಕ್ಕೆ ಭೂಗತ ಸಂಗ್ರಹಾಗಾರಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಬಂಡೆಗಳಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಬಂಡೆಗಳಿರುವ ಈ ಪ್ರದೇಶವು ಹೈಡ್ರೊ ಕಾರ್ಬನ್‌ಗಳ ಸುರಕ್ಷಿತ ಸಂಗ್ರಹಣೆಗೆ ಯೋಗ್ಯವಾಗಿದ್ದು, ಎರಡೂ ಕರಾವಳಿಗಳಲ್ಲಿರುವ ಇಂತಹ ಪ್ರದೇಶಗಳನ್ನು ಗುರುತಿಸಲಾಗಿದೆ. ದೇಶಕ್ಕೆ ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಬಳಕೆಗಾಗಿ ಸಂಗ್ರಹಿಸಲಾಗುವ ಪೆಟ್ರೋಲಿಯಂ ಶೇಖರಣಾ ಘಟಕದ ಕಾಮಗಾರಿ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರವು ಬಂಡೆಗಳು ಹೆಚ್ಚಿರುವ ಮಂಗಳೂರಿನ ಪೆರ್ಮುದೆ ಪ್ರದೇಶವನ್ನು ಆಯ್ಕೆ ಮಾಡಿದೆ. ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಈ ಯೋಜನೆಯನ್ನು ಅಳವಡಿಸಿ, ಕೇಂದ್ರ ಸರ್ಕಾರ ಅನುದಾನ ನೀಡಿದೆ. ಈ ಘಟಕಕ್ಕೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ತಂಡವನ್ನೂ ರಚಿಸಲಾಗಿದೆ.

ಬಳಕೆ ಹೇಗೆ: ದೇಶದ ತೈಲ ಬೇಡಿಕೆಯನ್ನು ಪೂರೈಸಲು ನಾನಾ ಕಡೆಗಳಲ್ಲಿ ಕಚ್ಚಾ ತೈಲ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಘಟಕಗಳಿಗೆ ಅಗತ್ಯವಾಗಿರುವ ಕಚ್ಚಾ ತೈಲವನ್ನು ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ತೈಲ ಆಮದಿನಲ್ಲಿ ತೊಂದರೆ ಉಂಟಾದ ಸಂದರ್ಭದಲ್ಲಿ ಈ ಸಂಗ್ರಹಾಗಾರಗಳಲ್ಲಿ ಶೇಖರಿಸಿರುವ ಕಚ್ಚಾ ತೈಲವನ್ನು, ಪೈಪ್‌ಲೈನ್‌ ಹಾಗೂ ಹಡಗುಗಳ ಮೂಲಕ ತೈಲ ಸಂಸ್ಕರಣಾ ಘಟಕಗಳಿಗೆ ಪೂರೈಕೆ ಮಾಡಲಾಗುವುದು. ಮಂಗಳೂರಿನಲ್ಲಿ ಸಂಗ್ರಹಿಸುವ ಕಚ್ಚಾ ತೈಲವನ್ನು ಮಂಗಳೂರು, ಕೊಚ್ಚಿ ಮತ್ತು ಮುಂಬೈಯಲ್ಲಿರುವ ತೈಲ ಸಂಸ್ಕರಣಾ ಘಟಕಗಳಿಗೆ ಪೂರೈಕೆ ಮಾಡಲಾಗುವುದು. ಈ ಮೂರೂ ಘಟಕಗಳಿಗೆ 13 ದಿನಗಳಿಗೆ ಸಂಸ್ಕರಿಸಲು ಬೇಕಾಗುವಷ್ಟು ಕಚ್ಚಾ ತೈಲವು ಐಎಸ್‌ಆರ್‌ಪಿಎಲ್‌ ಸಂಗ್ರಹಾಗಾರಗಳಲ್ಲಿ ಲಭ್ಯವಿರುತ್ತದೆ.


ಮಂಗಳೂರಿನ ಪೆರ್ಮುದೆಯಲ್ಲಿರುವ ಐಎಸ್‌ಪಿಆರ್‌ಎಲ್‌ ತೈಲ ಸಂಗ್ರಹಾಗಾರ
**

ಇನ್ನೂ ಎರಡು ಸಂಗ್ರಹಾಗಾರ
ದೇಶದಲ್ಲಿ ಎರಡನೇ ಹಂತದಲ್ಲಿ ಇನ್ನೆರಡು ತೈಲ ಸಂಗ್ರಹಾಗಾರಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಪಾದೂರಿನಲ್ಲಿ 25 ಲಕ್ಷ ಟನ್‌ ಸಾಮರ್ಥ್ಯದ ಮತ್ತೊಂದು ಸಂಗ್ರಹಾಗಾರ ಹಾಗೂ ಒಡಿಶಾದ ಚಾಂಡಿಕೋಲ್‌ನಲ್ಲಿ ಸುಮಾರು 40 ಲಕ್ಷ ಟನ್‌ ಸಾಮರ್ಥ್ಯದ ತೈಲ ಸಂಗ್ರಹಾಗಾರಗಳ ನಿರ್ಮಾಣ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ.

ನಾಲ್ಕು ದೇಶಗಳಲ್ಲಿ ಮಾತ್ರ ವ್ಯವಸ್ಥೆ ಭಾರತ, ಕೊರಿಯಾ, ಜಪಾನ್‌ ಮತ್ತು ಚೀನಾಗಳಲ್ಲಿ ಮಾತ್ರ ಕಚ್ಚಾ ತೈಲ ಸಂಗ್ರಹಿಸಿಡುವ ಭೂಗತ ವ್ಯವಸ್ಥೆ ಇದೆ. ಭೂಮಿಯಡಿ ಇರುವ ಬಂಡೆ ಕಲ್ಲುಗಳನ್ನು ಕೊರೆದು ಸುರಂಗ ನಿರ್ಮಾಣ ಮಾಡಲಾಗುತ್ತದೆ. ಅದರೊಳಗೆ ಪೈಪ್‌ಲೈನ್‌ ಅಳವಡಿಸಿ, ಕಚ್ಚಾ ತೈಲ ದಾಸ್ತಾನು ಇರಿಸಲಾಗುತ್ತಿದೆ.
**
ನಾಲ್ಕು ದೇಶಗಳಲ್ಲಿ ಮಾತ್ರ ವ್ಯವಸ್ಥೆ
ಭಾರತ, ಕೊರಿಯಾ, ಜಪಾನ್‌ ಮತ್ತು ಚೀನಾಗಳಲ್ಲಿ ಮಾತ್ರ ಕಚ್ಚಾ ತೈಲ ಸಂಗ್ರಹಿಸಿಡುವ ಭೂಗತ ವ್ಯವಸ್ಥೆ ಇದೆ. ಭೂಮಿಯಡಿ ಇರುವ ಬಂಡೆ ಕಲ್ಲುಗಳನ್ನು ಕೊರೆದು ಸುರಂಗ ನಿರ್ಮಾಣ ಮಾಡಲಾಗುತ್ತದೆ. ಅದರೊಳಗೆ ಪೈಪ್‌ಲೈನ್‌ ಅಳವಡಿಸಿ, ಕಚ್ಚಾ ತೈಲ ದಾಸ್ತಾನು ಇರಿಸಲಾಗುತ್ತಿದೆ.

**

ಪಾದೂರು–ಮಂಗಳೂರು ಮಧ್ಯೆ ಸಂಪರ್ಕ
ಮಂಗಳೂರು ಮತ್ತು ಪಾದೂರು ತೈಲ ಸಂಗ್ರಹಣಾಗಾರಗಳಿಗೆ ಭೂಗತ ಸುರಂಗದ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಎರಡೂ ಕಡೆಗಳಲ್ಲಿ ಪಂಪಿಂಗ್‌ ವ್ಯವಸ್ಥೆ ಇದೆ. ಮಂಗಳೂರಿನಿಂದ ಪಾದೂರು ಹಾಗೂ ಪಾದೂರಿನಿಂದ ಮಂಗಳೂರಿಗೆ ಕಚ್ಚಾ ತೈಲ ಪೂರೈಸಬಹುದು.

**
ಇರಾನ್‌, ಯುಎಇಯಿಂದ ಕಚ್ಚಾ ತೈಲ
ಮಂಗಳೂರು ತೈಲ ಸಂಗ್ರಹಣಾಗಾರಕ್ಕೆ ಮೊದಲ ಕಂತಿನಲ್ಲಿ 2016 ರಲ್ಲಿ ಇರಾನ್‌ನಿಂದ 2.60 ಲಕ್ಷ ಟನ್‌ ಮಿಕ್ಸೆಡ್‌ ಕಚ್ಚಾ ತೈಲವನ್ನು ‘ಡಿನೊ’ ನೌಕೆಯಲ್ಲಿ ಆಮದು ಮಾಡಿಕೊಳ್ಳಲಾಗಿದೆ.

ಒಟ್ಟು ₹ 650 ಕೋಟಿ ಮೌಲ್ಯದ ಈ ಕಚ್ಚಾತೈಲವನ್ನು, ಪಣಂಬೂರಿನ ಸಮುದ್ರತೀರದಿಂದ ಸುಮಾರು 1 ಕಿ.ಮೀ. ದೂರ ಅರಬ್ಬಿ ಸಮುದ್ರದಲ್ಲಿ ಲಂಗರು ಹಾಕಿದ್ದ ಹಡಗಿನಿಂದ ಪೈಪ್‌ಲೈನ್‌ ಮೂಲಕ ತಣ್ಣೀರುಬಾವಿಯಲ್ಲಿರುವ ಎಂಆರ್‌ಪಿಎಲ್‌ನ ಪಂಪಿಂಗ್‌ ಸ್ಟೇಷನ್‌ಗೆ ಪೂರೈಕೆ ಮಾಡಲಾಗಿದೆ. ಅಲ್ಲಿಂದ ಪೆರ್ಮುದೆಯಲ್ಲಿರುವ ಐಎಸ್‌ಪಿಆರ್‌ಎಲ್‌ನ ತೈಲ ಸಂಗ್ರಹಾಗಾರದಲ್ಲಿ ಶೇಖರಿಸಲಾಯಿತು. ಪ್ರತಿ ಗಂಟೆಗೆ 10ಸಾವಿರ ಲೀಟರ್‌ ಕಚ್ಚಾ ತೈಲ ಪಂಪ್‌ ಮಾಡಲಾಗುತ್ತದೆ.

ಇದೀಗ  ಅಬುಧಾಬಿ ನ್ಯಾಷನಲ್‌ ಆಯಿಲ್‌ ಕಂಪನಿಯ 20 ಲಕ್ಷ ಬಾರೆಲ್‌ ಕಚ್ಚಾ ತೈಲವನ್ನು ಪೆರ್ಮುದೆ ತೈಲ ಸಂಗ್ರಹಾಗಾರದ ಇನ್ನೊಂದು ಕೋಣೆಯಲ್ಲಿ ಶೇಖರಿಸಲಾಗಿದೆ. ತಲಾ 20 ಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಹೊತ್ತ ಎರಡು ನೌಕೆಗಳು ಮಳೆಗಾಲದ ನಂತರ ಮಂಗಳೂರು ತಲುಪಲಿವೆ.
**



ಕುತೂಹಲಕಾರಿ ಸಂಗತಿಗಳು
ಕಚ್ಚಾ ತೈಲ ಸಂಗ್ರಹಾಗಾರಗಳ ನಿರ್ಮಾಣ ಅತ್ಯಂತ ಕುತೂಹಲ ಕೆರಳಿಸುವಂಥದ್ದು. ಸಮುದ್ರ ಮಟ್ಟಕ್ಕಿಂತ ಸುಮಾರು 60–70 ಮೀಟರ್‌ ಕೆಳಭಾಗದಲ್ಲಿ ಈ ಸಂಗ್ರಹಾಗಾರಗಳ ನಿರ್ಮಾಣ ಮಾಡಲಾಗಿದೆ. ವಿಶಾಖಪಟ್ಟಣ, ಪೆರ್ಮುದೆ ಹಾಗೂ ಪಾದೂರು ಸಂಗ್ರಹಾಗಾರಗಳ ನಿರ್ಮಾಣಕ್ಕಾಗಿ ತಲಾ 30 ಕಿ.ಮೀ. ಭೂಗತ ಗುಹೆಯನ್ನು ನಿರ್ಮಾಣ ಮಾಡಲಾಗಿದೆ. ಈ ಸಂಗ್ರಹಾಗಾರಗಳು 10 ಅಂತಸ್ತಿನ ಕಟ್ಟಡಗಳಷ್ಟು ಎತ್ತರವನ್ನು ಹೊಂದಿವೆ.

ಒಟ್ಟು 2.20 ಕೋಟಿ ಟನ್‌ ಕಲ್ಲು ಬಂಡೆಗಳನ್ನು ಕೊರೆದು ತೆಗೆಯಲಾಗಿದ್ದು, ಈ ಕಲ್ಲು ಬಂಡೆಗಳನ್ನು ಬಳಸಿ 43 ಫುಟ್‌ಬಾಲ್‌ ಕ್ರೀಡಾಂಗಣಗಳನ್ನು 100 ಅಡಿಯಷ್ಟು ಎತ್ತರಕ್ಕೆ ಏರಿಸಬಹುದಾಗಿದೆ. ಅಥವಾ ಮುಂಬೈನಿಂದ ದೆಹಲಿಯವರೆಗೆ ನಾಲ್ಕುಪಥ ರಸ್ತೆಯನ್ನು ನಿರ್ಮಾಣ ಮಾಡಬಹುದಾಗಿದೆ.

3.75 ಲಕ್ಷ ಘನ ಮೀಟರ್‌ಗೂ ಹೆಚ್ಚಿನ ಕಾಂಕ್ರಿಟ್‌ ಬಳಕೆ ಮಾಡಲಾಗಿದ್ದು, ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್‌ ಖಲೀಫಾ ನಿರ್ಮಾಣದಲ್ಲಿ ಬಳಸಿದ ಕಾಂಕ್ರಿಟ್‌ಗಿಂತಲೂ ಹೆಚ್ಚಿನ ಪ್ರಮಾಣದ್ದಾಗಿದೆ. ಒಟ್ಟು 36,500 ಟನ್‌ ಕಬ್ಬಿಣವನ್ನು ಈ ನಿರ್ಮಾಣದಲ್ಲಿ ಬಳಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT