ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಶುದ್ಧಿಯ ಪ್ರತೀಕ ‘ರಂಜಾನ್‌’

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಮುಸ್ಲಿಮರು ರಂಜಾನ್ ತಿಂಗಳ ಉಪವಾಸ ವ್ರತಾಚರಣೆಯಲ್ಲಿದ್ದಾರೆ. ರಂಜಾನ್ ಉಪವಾಸ ವ್ರತವು ಇಸ್ಲಾಂ ಧರ್ಮದ ಕಡ್ಡಾಯ ಕರ್ಮಗಳಲ್ಲೊಂದು.

ಮುಸ್ಲಿಮರ ಪವಿತ್ರ ಗ್ರಂಥ ‘ಕುರಾನ್‌’ ರಂಜಾನ್‌ ತಿಂಗಳಲ್ಲಿ ರಚನೆಗೊಳ್ಳಲು ಪ್ರಾರಂಭವಾಯಿತು. ಆದ್ದರಿಂದ ರಂಜಾನ್‌ ಮುಸ್ಲಿಮರ ಪವಿತ್ರ ತಿಂಗಳು ಮತ್ತು ಈ ಮಾಸವನ್ನು ‘ಕುರಾನಿನ ಮಾಸ’ವೆಂದು ಕರೆಯುವರು. ಕುರಾನ್‌ ನಂಬುವವರ ಪಾಲಿಗೆ ಈ ತಿಂಗಳನ್ನು ಕೃತಜ್ಞತೆಯ ತಿಂಗಳಾಗಿ ಮಾಡಲಾಗಿದೆ. ಇಡೀ ತಿಂಗಳಲ್ಲಿ ಉಪವಾಸ ವ್ರತವನ್ನಾಚರಿಸಲು ಆದೇಶಿಸಲಾಗಿದೆ.

ಉಪವಾಸ ವ್ರತವು ಒಂದು ಆರಾಧನೆಯಾಗಿದೆ, ಅದೊಂದು ತರಬೇತಿಯೂ ಹೌದು. ಇಸ್ಲಾಮಿನಲ್ಲಿ ಉಪವಾಸ ವ್ರತ ಎಂದರೆ, ಅಲ್ಲಾಹನ ಪ್ರೀತಿಯನ್ನು ಗಳಿಸುವ ಇಚ್ಛೆಯೊಂದಿಗೆ ಆಹಾರ ಪಾನೀಯ ಸೇವನೆ ತ್ಯಜಿಸುವುದು ಮತ್ತು ಕಾಮಾಸಕ್ತಿಯಿಂದ ದೂರವಿರುವುದು ಎಂದು ಅರ್ಥ. ಉಪವಾಸ ಮಾಡುವವರು ಎಲ್ಲ ಕೆಟ್ಟ ಚಟಗಳನ್ನು ಬಿಟ್ಟುಬಿಡಬೇಕು.

ಉಪವಾಸ ಆಚರಿಸುವವರು ಬೆಳಿಗ್ಗೆ 4.30 ರಿಂದ ಸಂಜೆ 6.45ರ ವರೆಗೆ ನೀರು ಒಳಗೊಂಡಂತೆ ಯಾವುದೇ ಪಾನೀಯ ಮತ್ತು ಆಹಾರ ಸೇವಿಸುವಂತಿಲ್ಲ. ಬೆಳಿಗ್ಗೆ 4.30 ಕ್ಕಿಂತ ಮುನ್ನ ಸೇವಿಸುವ ಆಹಾರಕ್ಕೆ ‘ಸಹ್ರಿ’ ಎನ್ನುವರು. ಉಪವಾಸ ಕೊನೆಗೊಳಿಸುವ ಸಮಯದ ಆಹಾರಕ್ಕೆ ‘ಇಫ್ತಾರ್‌’ ಎಂದು ಕರೆಯುವರು. ಖರ್ಜೂರ, ಹಣ್ಣುಗಳು ಮತ್ತು ಹಣ್ಣಿನ ರಸಗಳನ್ನು ಮುಖ್ಯವಾಗಿ ಇಫ್ತಾರ್‌ ವೇಳೆ ತಿನ್ನುವರು. ಈ ತಿಂಗಳಲ್ಲಿ ಅಲ್ಲಲ್ಲಿ ಸೌಹಾರ್ದ ಇಫ್ತಾರ್‌ ಕೂಟಗಳು ಆಯೋಜನೆಯಾಗುತ್ತದೆ.

ಉಪವಾಸ ಆಚರಣೆಯ ಮತ್ತೊಂದು ಉದ್ದೇಶ ಬಡವರ ಹಸಿವನ್ನು ಅರಿಯುವುದು. ನಿತ್ಯ ಮೂರು ಹೊತ್ತು ತಿಂದರೆ ಹಸಿವಿನ ತಾಪ ತಟ್ಟುವುದಿಲ್ಲ, ಉಪವಾಸ ಆಚರಣೆ ಮಾಡಿದರೆ ಹಸಿದವನ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಆಚರಣೆಯ ಸಾರ.

ವಿಶೇಷ ನಮಾಜ್‌: ರಂಜಾನ್‌ ತಿಂಗಳ ರಾತ್ರಿಗಳಲ್ಲಿ ವಿಶೇಷ ನಮಾಜ್‌ ನಿರ್ವಹಿಸಲಾಗುತ್ತದೆ. ಅದಕ್ಕೆ ‘ತರಾವೀಹ್‌’ ಎನ್ನಲಾಗುತ್ತದೆ. ವಿಶೇಷ ನಮಾಜ್‌ಗಳಲ್ಲಿ ಪವಿತ್ರ ಕುರಾನ್‌ನನ್ನು ಸಂಪೂರ್ಣವಾಗಿ ಪಠಿಸಲಾಗುತ್ತದೆ. ಕುರಾನ್‌ನನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡಿರುವವರು ಈ ನಮಾಜ್‌ಗೆ ನೇತೃತ್ವ ವಹಿಸುವರು. ವೈಷಮ್ಯ, ಹಗೆತನ ತೊಡೆದು ಹಾಕಿ ಪ್ರೀತಿಯಿಂದ ಒಂದಾಗುವುದು ರಂಜಾನ್ ಮಾಸಾಚರಣೆ ಮುಖ್ಯ ಉದ್ದೇಶ. ಸಾಮೂಹಿಕ ನಮಾಜ್, ಉಪವಾಸದಷ್ಟೇ ನಿಷ್ಠೆಯಿಂದ ಸ್ನೇಹಿತರನ್ನು ಮತ್ತು ಬಂಧುಗಳನ್ನು ಸತ್ಕರಿಸಬೇಕು ಎಂಬುವುದು ರಂಜಾನ್ ಆಚರಣೆಯ ಮುಖ್ಯ ನಿಯಮ.

‘ಆಸ್ತಿ ಸಂಗ್ರಹ ಅಪರಾಧ’ ಎಂಬುದು ಇಸ್ಲಾಂನ ನಂಬಿಕೆಗಳಲ್ಲಿ ಒಂದು. ಅವಶ್ಯಕತೆಗಿಂತ ಹೆಚ್ಚಾಗಿ ಸಂಪತ್ತನ್ನು ಇಟ್ಟುಕೊಳ್ಳಬಾರದು. ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಬೇಕು ಎಂಬುದು ಇದರ ಆಶಯ. ಶ್ರೀಮಂತರು ತಮ್ಮ ಸಂಪತ್ತಿನ ಶೇ 2.5 ಪಾಲನ್ನು ಝಕಾತ್‌ (ದಾನ) ರೂಪದಲ್ಲಿ ನೀಡಬೇಕು ಎಂದು ಇಸ್ಲಾಂ ಆದೇಶಿಸಿದೆ. ರಂಜಾನ್‌ ತಿಂಗಳಲ್ಲಿ ದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಗಂಭೀರ ಕಾಯಿಲೆ, ಅನಾರೋಗ್ಯದಿಂದ ಬಳಲುತ್ತಿರುವವರು, ದೂರದ ಊರಿಗೆ ಪ್ರಯಾಣಿಸುವವರಿಗೆ ಉಪವಾಸದಿಂದ ವಿನಾಯಿತಿ ಇದೆ.

ಈ ಮಾಸದಲ್ಲಿ ದೇವರ ಸ್ಮರಣೆ ಮಾಡುವುದು, ತಪ್ಪುಗಳಿಗೆ ಕ್ಷಮೆ ಬೇಡುವುದು, ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಶ್ರೇಯಸ್ಕರ ಸಂಗತಿ. ಅಧ್ಯಾತ್ಮಿಕ ಹಾಗೂ ಧಾರ್ಮಿಕ ಚಿಂತನೆಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ರಂಜಾನ್ ಸಾರುತ್ತದೆ. 

‘ಈದ್‌ ಉಲ್‌ ಫಿತ್ರ್‌’
ರಂಜಾನ್‌ ತಿಂಗಳ ಸಮಾಪ್ತಿಯೊಂದಿಗೆ ಬರುವ ಹಬ್ಬವೇ ‘ಈದ್‌ ಉಲ್‌ ಫಿತ್ರ್‌’. ರಂಜಾನ್‌ ಮಾಸದ ಚಂದ್ರದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶವ್ವಾಲ್‌ ತಿಂಗಳ ಚಂದ್ರ ದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಶವ್ವಾಲ್‌ ತಿಂಗಳ ಮೊದಲ ದಿನ ಈದ್‌ ಉಲ್‌ ಫಿತ್ರ್‌ ಹಬ್ಬದ ಸಂಭ್ರಮ.

ರಂಜಾನ್‌ ತಿಂಗಳ 30 ದಿನಗಳನ್ನು ಉಪವಾಸ, ಪ್ರಾರ್ಥನೆ, ಅಧ್ಯಾತ್ಮದಲ್ಲೇ ಕಳೆದು ಕೊನೆಯಲ್ಲಿ ಮುಸ್ಲಿಮರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವರು. ಹಬ್ಬದ ದಿನ ಬೆಳಿಗ್ಗೆ ಮಸೀದಿ ಅಥವಾ ಈದ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಈದ್‌ ನಮಾಜ್‌ನ ಬಳಿಕ ‘ಖುತ್ಬಾ’ ಪ್ರವಚನ ಇರಲಿದೆ. ಹಬ್ಬದ ದಿನ ಪಾಲಿಸಬೇಕಾದ ಶಿಷ್ಟಾಚಾರಗಳನ್ನು ನೆನಪಿಸಲಾಗುತ್ತದೆ.

ಅದರ ನಂತರ ಪರಸ್ಪರ ಹಸ್ತಲಾಘವ ಮಾಡಿಕೊಂಡು, ತಬ್ಬಿಕೊಂಡು ಈದ್‌ ಶುಭಾಶಯಗಳನ್ನು ವಿನಿಮಯ ಮಾಡುತ್ತಾರೆ. ಈದ್ ಹಬ್ಬ ಪರಸ್ಪರ ಸಂಬಂಧ, ಬಾಂಧವ್ಯವನ್ನು ಬಲಪಡಿಸುವ ದಿನವಾಗಿದೆ. ಆದ್ದರಿಂದ ಪ್ರಾರ್ಥನೆಯ ಬಳಿಕ ಸಂಬಂಧಿಕರ, ಗೆಳೆಯರ ಮನೆಗೆ ಭೇಟಿ ನೀಡುವರು. ಹಬ್ಬದ ದಿನ ಮನೆಯಲ್ಲಿ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸುವರು.

ಫಿತ್ರ್‌ ಝಕಾತ್‌ (ಕಡ್ಡಾಯ ದಾನ): ಈದ್‌ ಪ್ರಾರ್ಥನೆಗೆ ಮಸೀದಿಗೆ ಹೋಗುವ ಮುನ್ನ ಕಡ್ಡಾಯ ದಾನವನ್ನು ಮಾಡಲೇಬೇಕು. ಅದನ್ನು ‘ಫಿತ್ರ್‌ ಝಕಾತ್‌’ ಎನ್ನುವರು. ಫಿತ್ರ್‌ ಝಕಾತ್‌ನ ಪ್ರಮಾಣ ಸುಮಾರು ಎರಡೂವರೆ ಕೆ.ಜಿ.ಆಗಿದೆ. ಆಯಾ ಪ್ರದೇಶದ ಜನರು ಸಾಮಾನ್ಯವಾಗಿ ತಿನ್ನುವ ಆಹಾರವನ್ನು (ಅಕ್ಕಿ, ಗೋಧಿ, ಜೋಳ, ಬೇಳೆ) ದಾನದ ರೂಪದಲ್ಲಿ ನೀಡಬೇಕು. ಪ್ರತಿ ಮನೆಯ ಹಿರಿಯರು ಆ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯನ ಪರವಾಗಿ ತಲಾ ಎರಡೂವರೆ ಕೆ.ಜಿ (ಉದಾ: ಒಂದು ಮನೆಯಲ್ಲಿ 4 ಮಂದಿಯಿದ್ದರೆ 10 ಕೆ.ಜಿ) ಆಹಾರ ವಸ್ತುವನ್ನು ಕಡ್ಡಾಯವಾಗಿ ಬಡವನ ಮನೆಗೆ ತಲುಪಿಸಬೇಕು. ಆ ಬಳಿಕವೇ ಹಬ್ಬದ ಪ್ರಾರ್ಥನೆಗೆ ಮಸೀದಿಗೆ ತೆರಳಬೇಕು.

ತನ್ನ ಮತ್ತು ತನ್ನ ಕುಟುಂಬ ಸದಸ್ಯರ ಆಹಾರ, ಬಟ್ಟೆ ಮತ್ತು ಮೂಲ ಅಗತ್ಯಗಳಿಗಿಂತ ಹೆಚ್ಚು ಸಂಪತ್ತು ಇರುವ ಪ್ರತಿಯೊಬ್ಬ ಮುಸ್ಲಿಮನಿಗೆ ಇದು ಕಡ್ಡಾಯ. ಬಡವರು, ನಿರ್ಗತಿಕನಿಗೂ ಹಬ್ಬದ ಸಂಭ್ರಮ ಆಚರಿಸಲು ಸಾಧ್ಯವಾಗಬೇಕು ಎಂಬುದು ಇದರ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT