ಮಾದರಿ ಆಗಬೇಕಾದವರೇ ಹೀಗಾದರೆ...?

7

ಮಾದರಿ ಆಗಬೇಕಾದವರೇ ಹೀಗಾದರೆ...?

Published:
Updated:

ಸಮ್ಮಿಶ್ರ ಸರ್ಕಾರದಲ್ಲಿ ಆಡಳಿತಾರೂಢ ಪಕ್ಷಗಳ ಎಲ್ಲ ಶಾಸಕರೂ ಮಂತ್ರಿಗಳೇ ಆಗಬೇಕೆಂದರೆ ಹೇಗೆ ಸಾಧ್ಯ? ಅಧಿಕಾರದ ಮೇಲಿನ ಆಸೆ ತಪ್ಪಲ್ಲ. ಆದರೆ, ಅದಕ್ಕೆ ಒಂದು ಮಿತಿ ಇರಬೇಕು. ಇದನ್ನು ತಿಳಿದೇ ಏನೋ, ಚುನಾಯಿತ ಸದಸ್ಯರ ಸಂಖ್ಯೆಗೆ ತಕ್ಕಂತೆ ನಿರ್ದಿಷ್ಟ ಸಂಖ್ಯೆಯ ಮಂತ್ರಿಗಳನ್ನು ಮಾತ್ರ ಮಾಡಬೇಕೆಂಬ ಕಾನೂನು ಕೆಲವು ವರ್ಷಗಳ ಹಿಂದೆ ಜಾರಿಗೆ ಬಂದಿತು. ಅದಿಲ್ಲದಿದ್ದರೆ, ಆಡಳಿತ ಸೂತ್ರ ಹಿಡಿಯುವ ಪಕ್ಷದ ಎಲ್ಲರನ್ನೂ ಮಂತ್ರಿಗಳನ್ನಾಗಿ ಸಾಕುವ ‘ಅದೃಷ್ಟ’ ನಮ್ಮದಾಗಿರುತ್ತಿತ್ತು!

ಮಂತ್ರಿಗಳಾಗದೆ ಬರೀ ವಿಧಾನಸಭೆ ಸದಸ್ಯರಾಗಿ ಏನೂ ಕೆಲಸ ಮಾಡಲು ಸಾಧ್ಯವಿಲ್ಲವೇ? ಶಾಸಕರಾಗಿ ಜನಪರ ಕಾರ್ಯ ಮಾಡಲು ಸಾಧ್ಯವಾಗದಿದ್ದರೆ ಇನ್ನು ಮಂತ್ರಿಗಳಾಗಿ ಇವರು ಏನು ತಾನೇ ಮಾಡಬಲ್ಲರು? ಶಾಸಕರಿಗೆ ತಮ್ಮ ಕ್ಷೇತ್ರದ ಕೆಲಸಗಳನ್ನು ಮಾಡುವ, ಮಾಡಿಸುವ ಅರ್ಹತೆ ಇರಬೇಕು. ಅದೇ ಇಲ್ಲವೆಂದರೆ ಇವರಿಗೆ ಅಧಿಕಾರ ದೊರೆತರೂ ಏನೂ ಮಾಡುವ ಕಿಮ್ಮತ್ತು ಇರುವುದಿಲ್ಲ. ಅಧಿಕಾರವೆಂದರೆ ತಮ್ಮ ಕೈ ಕೆಳಗಿನ ಅಧಿಕಾರಿಗಳನ್ನು ಬೆದರಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲ. ಅವರಿಂದ ಕೆಲಸ ಮಾಡಿಸುವ ತಾಕತ್ತು ಇರಬೇಕಾಗುತ್ತದೆ.

ಪಕ್ಷಾಂತರ ನಿಷೇಧ ಕಾಯ್ದೆ ಬಂದಾಗ, ಇನ್ನಾದರೂ ನಮ್ಮ ಜನಪ್ರತಿನಿಧಿಗಳ ಗೋಡೆ ಜಿಗಿಯುವಾಟಕ್ಕೆ ಕಡಿವಾಣ ಬೀಳಬಹುದು ಎಂಬ ಸಮಾಧಾನ ಜನರಲ್ಲಿ ಉಂಟಾಗಿತ್ತು. ಆದರೆ ಕಾನೂನಿನ ಚಾಪೆ ಇದ್ದರೂ ಅವರು ರಂಗೋಲಿಯ ಕೆಳಗೇ ತಮ್ಮ ಆಟ ಆಡುವ ಚಾಕಚಕ್ಯತೆ ಹೊಂದಿದ್ದಾರೆ.

ಹಲವು ವರ್ಷಗಳ ಹಿಂದೆ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ‘ರಾಜಕೀಯ ವ್ಯಂಗ್ಯಚಿತ್ರ ರಚಿಸಲು ನಮ್ಮ ದೇಶಕ್ಕಿಂತ ಚೆನ್ನಾಗಿ ಬೇರೆಲ್ಲೂ ವಸ್ತುಗಳು ದೊರೆಯುವುದಿಲ್ಲ. ಅದಿಲ್ಲದಿದ್ದರೆ ನಾನು ವ್ಯಂಗ್ಯಚಿತ್ರಕಾರನಾಗಿರಲು ಸಾಧ್ಯವಿರುತ್ತಿರಲಿಲ್ಲ’ ಎಂದು ವ್ಯಂಗ್ಯವಾಗಿ ಹೇಳಿದ್ದರು. ಆದರೆ, ಈಗಿನ ಪರಿಸ್ಥಿತಿ ಅವರ ಊಹೆಯನ್ನೂ ಮೀರಿದೆ. 

ಕೆ.ಎಸ್. ಸೋಮೇಶ್ವರ, ಬೆಂಗಳೂರು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !