ಭವಿಷ್ಯವಾಣಿ ಮತ್ತು ತಪ್ಪುಹೆಜ್ಜೆ

7

ಭವಿಷ್ಯವಾಣಿ ಮತ್ತು ತಪ್ಪುಹೆಜ್ಜೆ

Published:
Updated:

‘ಅಯೋಗ್ಯರಿಗೆ ಅಧಿಕಾರ ಹಸ್ತಾಂತರಿಸಿ ದರೆ ಅನಾಹುತ ತಪ್ಪಿದ್ದಲ್ಲ’ ಎಂಬ ವಿನ್‍ಸ್ಟನ್ ಚರ್ಚಿಲ್‍ ಅವರ ಅಭಿಪ್ರಾಯವು (ವಾ.ವಾ., ಆ. 14) ದೇಶ–ಭಾಷೆ–ವರ್ಣ ಭೇದವಿಲ್ಲದೆ ಸಾರ್ವತ್ರಿಕವಾಗಿ  ಅನ್ವಯವಾಗುವುದಾದರೆ ಅದರಲ್ಲಿ ತಪ್ಪೇನಿಲ್ಲ. ಆದರೆ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ಭಾರತೀಯರನ್ನಷ್ಟೇ ಉದ್ದೇಶಿಸಿ ಚರ್ಚಿಲ್‌ ಈ ಮಾತನ್ನು ಹೇಳಿದ್ದರೆ, ಅದು ಅವರ ಅಜ್ಞಾನ, ಅಹಂಕಾರ ಮತ್ತು ಅಯೋಗ್ಯತನ ತೋರುತ್ತದೆ. ಯೋಗ್ಯರು ಮತ್ತು ಅಯೋಗ್ಯರು ಎಲ್ಲಾ ರಾಷ್ಟ್ರಗಳಲ್ಲೂ ಅಧಿಕಾರದಲ್ಲಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಹೊಸದರಲ್ಲಿ ಅನಕ್ಷರತೆ, ಲೋಕಜ್ಞಾನದ ಕೊರತೆ ಇದ್ದರೂ ಆಳು-ಅರಸರ ನಡುವೆ ಅಂತರ ದೊಡ್ಡದಿದ್ದರೂ ದೇಶದ ಬೆಳವಣಿಗೆಗಾಗಿ, ಬಡವರ ಏಳಿಗೆಗಾಗಿ ದುಡಿಯುವ ಮನಸ್ಸುಳ್ಳವರೇ ಅಧಿಕಾರ ನಿಭಾಯಿಸಿ ಹೋಗಿದ್ದಾರೆ. ಹಲವಾರು ಸಂಸ್ಥಾನಗಳು ಸೇರಿ ಒಂದು ಬೃಹತ್ ರಾಷ್ಟ್ರವಾದಾಗ ಉದ್ಭವವಾಗಿದ್ದ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಂದಿನ ಜನಪ್ರತಿನಿಧಿಗಳು, ಅಧಿಕಾರಿಗಳು ಜೀವನ ಮುಡಿಪಾಗಿಟ್ಟ ಉದಾಹರಣೆಗಳು ಬೇಕಾದಷ್ಟಿವೆ. ಆಗ ಹಣ ಮಾಡುವುದಕ್ಕಿಂತ ಜನಸೇವೆ, ದೇಶಸೇವೆ ಮಾಡಬೇಕೆನ್ನುವ ತುಡಿತ ಇದ್ದವರಿದ್ದರು.

ಆದರೆ ಇಂದು ಹಣ ಗಳಿಸುವುದು ಮುಖ್ಯವಾಗಿದೆ. ಅಧಿಕಾರಲಾಲಸೆ ವಿಪರೀತಕ್ಕೆ ಹೋಗಿದೆ. ಸ್ವಜನಪಕ್ಷಪಾತಿಗಳ, ಭ್ರಷ್ಟಾಚಾರಿಗಳ ಕೈ ಮೇಲಾಗಿದೆ. ಯೋಗ್ಯರನ್ನು ತುಳಿದು ಅಯೋಗ್ಯರು ಅಧಿಕಾರ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಭಾರತದಲ್ಲಿ ಯೋಗ್ಯರು ಇಲ್ಲವೆಂದಲ್ಲ. ದಕ್ಷರು, ಸುಶಿಕ್ಷಿತರು ಇದ್ದರೂ ಇಂಥ ಅಯೋಗ್ಯರನ್ನೇ ಆರಿಸುತ್ತಿದ್ದೇವೆ, ಅಂಥವರಿಗೇ ಅವಕಾಶ ಮಾಡಿಕೊಡುತ್ತಿದ್ದೇವೆ. ಅದು ನಮ್ಮಿಂದ ಆಗಿರುವ ತಪ್ಪು. ಇದಕ್ಕೆ ಚರ್ಚಿಲ್‍ರ ಭವಿಷ್ಯವಾಣಿಯನ್ನು ತಳಕು ಹಾಕುವುದರಲ್ಲಿ ಅರ್ಥವಿಲ್ಲ. ಪ್ರೊ. ಆರ್.ವಿ. ಹೊರಡಿ ಅವರಲ್ಲಿ ನನ್ನ ವಿನಂತಿ ಇಷ್ಟೇ: ‘ಚರ್ಚಿಲ್‍ ಮತ್ತು ಅವರಂಥ ವಿದೇಶಿಯರ ದೃಷ್ಟಿಕೋನದಿಂದ ಭಾರತದ ಭವಿಷ್ಯವನ್ನು ನೋಡಬೇಡಿ. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ’.
 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !