ಭಾನುವಾರ, ಆಗಸ್ಟ್ 18, 2019
25 °C

ಅಡಿಕೆ ಮಹತ್ವ: ಮನವರಿಕೆ ಅಗತ್ಯ

Published:
Updated:

ಗುಜರಾತ್ ಸಂಸದರೊಬ್ಬರು ಸಂಸತ್ತಿನಲ್ಲಿ ‘ಅಡಿಕೆ ಬೆಳೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೇ?’ ಎಂದು ಕೇಳಿದ ಪ್ರಶ್ನೆಗೆ, ಕೇಂದ್ರ ಸಚಿವ ಅಶ್ವಿನಿಕುಮಾರ್ ಚೌಬೆ ಅವರು ‘ಹೌದು’ ಎಂದು ಉತ್ತರಿಸಿದ್ದಾರೆ. ಈ ಮೂಲಕ, ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ ಲಕ್ಷಾಂತರ ಜನರ ಮೂಲಕಸುಬಾದ ಅಡಿಕೆ ಬೆಳೆಯ ಬಗ್ಗೆ ಸಚಿವರು ನಕಾರಾತ್ಮಕ ಅಭಿಪ್ರಾಯ ಹೊರಹಾಕಿದ್ದಾರೆ.

ಅಡಿಕೆಯು ಕ್ಯಾನ್ಸರ್‌ಕಾರಕ ಹೌದೋ ಅಲ್ಲವೋ ಎಂಬ ಬಗ್ಗೆ ಬಹುಸಮಯದಿಂದ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ, ಅಡಿಕೆ ಬೆಳೆಗಾರರ ಹಿತ ಕಾಯಬೇಕಾದ ಕರಾವಳಿ, ಮಲೆನಾಡು ಭಾಗದ ಸಂಸದರು ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಿಕೊಡುವಲ್ಲಿ ಎಡವಿದ್ದಾರೆ. ಇದರಿಂದ, ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಬೆನ್ನೆಲುಬಾಗಿರುವ ಅಡಿಕೆ ಬೆಳೆಯ ಮೇಲೆ ಮೊದಲಿನಿಂದಲೂ ತೂಗುಗತ್ತಿ ಇದೆ. ಸಾಂಪ್ರದಾಯಿಕ ಬೆಳೆಯಾದ ಅಡಿಕೆಯು ಭಾರತೀಯ ಧಾರ್ಮಿಕ ಆಚರಣೆಯಲ್ಲೂ ಮಹತ್ವ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕರಾವಳಿಗೆ ಭೇಟಿ ನೀಡಿದ್ದಾಗ ಅಡಿಕೆ ಬೆಳೆಯ ಬಗ್ಗೆ ಖುದ್ದು ಭರವಸೆಯ ಮಾತುಗಳನ್ನಾಡಿದ್ದರು. ಇದನ್ನು ಸಾಕಾರಗೊಳಿಸುವಲ್ಲಿ ಕರಾವಳಿ, ಮಲೆನಾಡು ಭಾಗದ ಸಂಸದರು ಒಗ್ಗಟ್ಟಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುವ ಅವಶ್ಯಕತೆ ಖಂಡಿತವಾಗಿಯೂ ಇದೆ.

- ಆದರ್ಶ್ ಶೆಟ್ಟಿ, ಉಪ್ಪಿನಂಗಡಿ

Post Comments (+)