ಶುಕ್ರವಾರ, ಆಗಸ್ಟ್ 23, 2019
22 °C

ಬೇಕಾಗಿದೆ ಪಂಚಶೀಲ ಗುಣ

Published:
Updated:

ಬೇಕಾಗಿದೆ ಪಂಚಶೀಲ ಗುಣ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಶಿಸಿರುವ ‘ಆರ್ಥಿಕತೆಯ ಗುರಿ, ಜಲ ಜೀವನ ಮಿಷನ್ ಯೋಜನೆ, ಜನಸಂಖ್ಯಾ ನಿಯಂತ್ರಣ, ಭ್ರಷ್ಟಾಚಾರ ನಿರ್ಮೂಲನ’ ಮೊದಲಾದವುಗಳೆಲ್ಲ ಉತ್ತಮ ಚಿಂತನೆಗಳೇನೋ ಹೌದು. ಆದರೆ ಇವೆಲ್ಲ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದು ಸಫಲವಾಗಬೇಕೆಂದರೆ, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉದ್ಯಮಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆ, ದೇಶಪ್ರೇಮದ ಗುಣಗಳು ಇರಬೇಕಾಗುತ್ತದೆ. ಪ್ರಜೆಗಳಾದ ನಾವೆಲ್ಲ ಇಚ್ಛಾಶಕ್ತಿ ಮತ್ತು ಶ್ರಮಭಾವವನ್ನು ಹೊಂದಿರಬೇಕಾಗುತ್ತದೆ. ಇವಿಲ್ಲದೆ, ಮೋದಿಯೆಂಬ ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ಈ ಪಂಚಶೀಲ ಗುಣಗಳು ಜಾಗೃತಗೊಳ್ಳಬೇಕಾಗಿದೆ.

ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

***

ಸ್ವಾತಂತ್ರ್ಯದ ಸದ್ಬಳಕೆ ಆಗಲಿ

ನಮ್ಮ ಹಿರಿಯರು ತಮ್ಮ ರಕ್ತ ಬಸಿದು, ನಮಗೆಲ್ಲ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಆದರೆ ಇಂದು ನಮ್ಮಲ್ಲಿನ ದೇಶಭಕ್ತಿ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದನ್ನು ನೆನೆದರೆ ವಿಷಾದವಾಗುತ್ತದೆ. ರಾಷ್ಟ್ರಗೀತೆ ಕೇಳಿಬರುತ್ತಿದ್ದರೂ ತಲೆಕೆಡಿಸಿಕೊಳ್ಳದೆ ಮುಂದೆ ಸಾಗುತ್ತೇವೆ. ನಾನು ಗಾಂಧಿಯಂತೆ ಆಗುತ್ತೇನೆ, ಸ್ವಾಮಿ ವಿವೇಕಾನಂದರಂತೆ ಆಗುತ್ತೇನೆ, ನಿಷ್ಠೆಯುಳ್ಳ ಭಾರತೀಯನಾಗುತ್ತೇನೆ, ಪ್ರಜಾಪಾಲಕನಾಗುತ್ತೇನೆ ಎಂದೆಲ್ಲ ಸಾರಿ ಸಾರಿ ಹೇಳುತ್ತಿದ್ದ ವಿದ್ಯಾರ್ಥಿಗಳು ಎಲ್ಲಿ ಕಣ್ಮರೆಯಾಗಿದ್ದಾರೆ? ನಮಗೆ ದಕ್ಕಿದ ಸ್ವಾತಂತ್ರ್ಯದ ಸದ್ಬಳಕೆಗೆ ನಾವು ಮುಂದಾಗುತ್ತಿಲ್ಲ ಎಂದರೆ, ನಮ್ಮಲ್ಲಿರುವ ಆಲಸ್ಯ, ಸತ್ಪ್ರಜೆಯ ಆಶಯದ ಕೊರತೆಯೇ ಕಾರಣ.‌

ಪ್ರೀತಿ ಟಿ.ಎಸ್., ದಾವಣಗೆರೆ

Post Comments (+)