ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಡಂಬರ, ಒಣಪ್ರತಿಷ್ಠೆ ಸಲ್ಲ

Last Updated 9 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರಕಟವಾದ ಸಂಪಾದಕೀಯದಲ್ಲಿ (ಪ್ರ.ವಾ., ಮಾರ್ಚ್‌ 8), ಸ್ತ್ರೀಗೆ ಸಿಗಬೇಕಾದ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯಕ್ಕೆ ಗಂಡೂ ಸಂಪೂರ್ಣ ಸಹಕಾರ ನೀಡಬೇಕು; ಸಮಾನತೆಗಾಗಿ ಧ್ವನಿಯೆತ್ತುವುದು ಮನೆಗಳಿಂದ, ಕಚೇರಿಗಳಿಂದ ಮನಃಪೂರ್ವಕವಾಗಿ ಪ್ರಾರಂಭವಾಗಲಿ ಎನ್ನುವ ಸಲಹೆ ಅರ್ಥಪೂರ್ಣವಾದುದು.

‘ಹೆಣ್ಣು ಗಂಡು ಇಬ್ಬರೂ ಪಕ್ಷಿಯ ಎರಡು ರೆಕ್ಕೆಗಳಿದ್ದಂತೆ. ಪಕ್ಷಿಗೆ ಎರಡೂ ರೆಕ್ಕೆಗಳು ಹೇಗೆ ಅನಿವಾರ್ಯವೋ ಹಾಗೇ ನಮ್ಮ ಬಾಳಿಗೆ ಗಂಡು ಹೆಣ್ಣು ಇಬ್ಬರೂ ಅನಿವಾರ್ಯ, ಅತ್ಯಗತ್ಯ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಗಾಂಧೀಜಿ ‘ಹೆಣ್ಣು ಶಾಂತಿಯ ಪ್ರತೀಕ, ಪ್ರಕೃತಿಯ ಸ್ವರೂಪ. ಸರ್ವಜೀವಿ ಪೋಷಕಳು. ಆಕೆ ಮುಂಚೂಣಿಯಲ್ಲಿದ್ದರೆ ಸತ್ಯಾಗ್ರಹ, ವೈಯಕ್ತಿಕ ಬದುಕೂ ಯಶಸ್ಸು ಪಡೆಯುತ್ತದೆ ಎಂದಿದ್ದರು’.

ಈ ಎರಡೂ ವಾಸ್ತವ ಸಂಗತಿಗಳನ್ನು ಎಲ್ಲರೂ ಗಮನದಲ್ಲಿ ಇಡುವುದು ಒಳಿತು. ಆದರೆ ಆಧುನಿಕ ಮಹಿಳೆಯು ಬಾಹ್ಯ ಸೌಂದರ್ಯ ಕಾಯ್ದುಕೊಳ್ಳುವುದಕ್ಕಾಗಿ ಮಗುವಿಗೆ ಅಮೃತಪಾನವಾದ ಮೊಲೆಯುಣಿಸದಿರುವುದು, ಅತೀ ಸೌಂದರ್ಯ ಆಕಾಂಕ್ಷೆಯಿಂದ ಸೌಂದರ್ಯ ಪ್ರಸಾಧನವು ಕೋಟ್ಯಂತರ ಡಾಲರ್ ಮೌಲ್ಯದ ಉದ್ದಿಮೆಯಾಗುವುದಕ್ಕೆ ಕಾರಣಳಾಗಿರುವುದು ಆರೋಗ್ಯಕ್ಕೆ ಹಾಗೂ ಪರಿಸರಕ್ಕೆ ಬಹುಮಾರಕ. ಪ್ರಕೃತಿಯ ಮೂಲಭೂತ ಪೋಷಕಗಳಾದ ಗಾಳಿ, ನೀರು, ಆಹಾರ, ಬೆಳಕಿಗೆ ಬೆಲೆ ಕೊಡದೆ ಪುರುಷನ ಅಹಂಕಾರದ ಅಭಿವೃದ್ಧಿಗೆ ನೆರವು ನೀಡಿ, ಆಂತರಿಕ ಆನಂದಕ್ಕಿಂತ ಬಾಹ್ಯಾಡಂಬರ, ಒಣಪ್ರತಿಷ್ಠೆ, ಗುರುತಿಸುವಿಕೆಯೇ ಮುಖ್ಯವೆಂದು ಕೆಲವು ಮಹಿಳೆಯರು ಭಾವಿಸಿರುವುದು ಅಪಾಯಕಾರಿ. ಪರಿಸರಕ್ಕೆ ಮಾರಕವಾದ ಅದ್ಧೂರಿ ಬಂಗಲೆ, ಕಾರಿನಂತಹವುಗಳನ್ನು ಒಳಗೊಂಡ ಪರಿಸರ ಮಾರಕ ಜೀವನಶೈಲಿಗೆ ಅಜ್ಞಾನದಿಂದ ಪ್ರಚೋದಿಸುತ್ತಿರುವುದು ವಿಷಾದನೀಯ.

ಇನ್ನಾದರೂ ತಾಯಂದಿರಲ್ಲಿ ಭೂಮಿ ತೂಕದ, ತಾಯ್ತನದ ಹೆಣ್ಣಿನ ಮೂಲಭೂತ ಪೋಷಕಹೃದಯ ಬಲಗೊಳ್ಳಲಿ. ತನ್ಮೂಲಕ ಸರ್ವೇ ಜನಾ, ಸರ್ವೇ ಜೀವಿ ಸುಖಿನೋಭವಂತು ಎನ್ನುವ ಕಡೆ ಕಾಳಜಿ ಹೆಚ್ಚಾಗಲಿ.

ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT