ಸೋಮವಾರ, ಏಪ್ರಿಲ್ 12, 2021
29 °C

ಖಾಸಗಿ ಬ್ಯಾಂಕ್‌ಗಳಿಗೆ ಮನ್ನಣೆ ಸರಿಯೇ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಅಂದಿನ ಖಾಸಗಿ ಬ್ಯಾಂಕುಗಳು ಬರೀ ದೊಡ್ಡ ಉದ್ದಿಮೆದಾರರ ಹಿಡಿತದಲ್ಲಿದ್ದು ಜನಸಾಮಾನ್ಯರ ಆಶೋತ್ತರಗಳಿಗೆ ಗಗನ ಕುಸುಮವಾಗಿದ್ದವು. ಹೀಗಾಗಿ, 1969ರಲ್ಲಿ 14 ಹಾಗೂ 1980ರಲ್ಲಿ ಮತ್ತೆ 6 ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಇದರ ಫಲಶ್ರುತಿಯಾಗಿ ಕೃಷಿ ವಲಯಕ್ಕೆ, ಚಿಕ್ಕ ಪುಟ್ಟ ಉದ್ದಿಮೆಗಳಿಗೆ, ಹೈನುಗಾರಿಕೆಗೆ, ಮೀನುಗಾರಿಕೆಗೆ, ಉದ್ಯೋಗ ಸೃಷ್ಟಿಗೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಿಗೆ, ಉದ್ದೇಶಗಳಿಗೆ ನಿರಂತರವಾಗಿ ಸಾಲ ವಿತರಿಸುತ್ತಾ, ಜನರ ಜೀವನಮಟ್ಟ ಸುಧಾರಿಸಿ ರಾಷ್ಟ್ರದ ಆರ್ಥಿಕತೆಯು ನಿಧಾನವಾಗಿ ಉತ್ತಮಗೊಂಡಿತು. ಕೆಲವೇ ಸಾವಿರಗಳ ಬ್ಯಾಂಕ್ ಸಾಲದಿಂದ ಇಂದು ದೊಡ್ಡ ಮಟ್ಟಿಗಿನ ವ್ಯವಹಾರ ನಡೆಸುತ್ತಾ ಹಲವಾರು ಮಂದಿಗೆ ಉದ್ಯೋಗ ನೀಡಿದಂತಹ ಲಕ್ಷಾಂತರ ಉದಾಹರಣೆಗಳಿವೆ.

ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ಮೂಲಕ ದೇಶದಾದ್ಯಂತ ಹಳ್ಳಿ ಹಳ್ಳಿಯಲ್ಲೂ ಪ್ರತೀ ಕುಟುಂಬಕ್ಕೂ ಬ್ಯಾಂಕ್ ಸೌಕರ್ಯ ಒದಗಿಸಿದ್ದು, ಜನಧನ ಯೋಜನೆಯ ಸೌಲಭ್ಯವನ್ನು ಕಡು ಬಡವರಿಗೂ ತಲುಪಿಸಿದ್ದು, ಕಡಿಮೆ ಪ್ರೀಮಿಯಂನ ವಿಮೆಯ ಅನುಕೂಲಗಳನ್ನು ನೀಡಿದ್ದು ಇವೇ ರಾಷ್ಟ್ರೀಕೃತ ಬ್ಯಾಂಕುಗಳು. ಸರ್ಕಾರದ ಎಲ್ಲ ಸಹಾಯಧನ ಯೋಜನೆಗಳ ಅನುಷ್ಠಾನಕ್ಕೆ, ಸಕಲ ಜನೋಪಯೋಗಿ ಕಾರ್ಯಕ್ರಮಗಳಿಗೆ, ಸದ್ಯದ ಬೀದಿ ಬದಿ ವ್ಯಾಪಾರಿಗಳ ಸಾಲ ನೀಡಿಕೆಗೆ ಬೆನ್ನೆಲುಬಾಗಿ ನಿಂತು ಶ್ರಮಿಸುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೇ.

ಹಲವಾರು ಖಾಸಗಿ ಬ್ಯಾಂಕುಗಳು ದಿವಾಳಿಯಾದಾಗ ಸಾಮಾನ್ಯ ಠೇವಣಿದಾರರ ಹಿತರಕ್ಷಣೆಗಾಗಿ ಕೋಟ್ಯ೦ತರ ರೂಪಾಯಿಗಳ ನಷ್ಟದ ಹೊರೆ ಹೊತ್ತು ಲಕ್ಷಾಂತರ ಕುಟುಂಬಗಳು ಮುಳುಗದಂತೆ ರಕ್ಷಣೆ ನೀಡಿದ್ದು ರಾಷ್ಟ್ರೀಕೃತ ಬ್ಯಾಂಕುಗಳೇ. ಕಳೆದ ವರ್ಷವಷ್ಟೇ ಎರಡು ಖಾಸಗಿ ಬ್ಯಾಂಕುಗಳು ಹೀಗೆ ಮುಳುಗಡೆಯ ಸ್ಥಿತಿಯಿಂದ ಹೊರ ಬಂದುದು ಎಲ್ಲರ ನೆನಪಿಂದ ಇನ್ನೂ ಮಾಸಿಲ್ಲ. ಕೇಂದ್ರ ಬಜೆಟ್‌ನಲ್ಲಿ ಎರಡು ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪದ ಜೊತೆಗೆ ಈಗ ಸರ್ಕಾರದ ಬ್ಯಾಂಕ್‌ ವ್ಯವಹಾರಗಳನ್ನು ಖಾಸಗಿ ಬ್ಯಾಂಕುಗಳಿಗೂ ವಿಸ್ತರಿಸಿರುವುದು ಸಮಂಜಸವಲ್ಲ. ಬಡವರಿಗೆ ನೀಡುವ ಸಹಾಯಧನದ ಸರ್ಕಾರಿ ಸಾಲ ಯೋಜನೆಗಳಿಂದ ದೂರವಾಗಿ, ಲಾಭವಿರುವ ವ್ಯವಹಾರಗಳು ಮಾತ್ರ ಬೇಕೆನ್ನುವ ಖಾಸಗಿ ಬ್ಯಾಂಕುಗಳಿಗೆ ಮಣೆ ಹಾಕುವುದು ಸರಿಯೇ?

- ಬಿ.ಎನ್.ಭರತ, ಮೈಸೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.