ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಗೆಯಲು ಹೊರಟವರ ‘ಕೈ’ಯಲ್ಲೇ ಇದೆ ಕೋಲು

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನೈಸ್ ರಸ್ತೆಯನ್ನು ಅಗೆದೇ ಹಾಕುತ್ತೇನೆ. ಯೋಜನೆಯ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಯೇ ನಡೆಯಬೇಕು’ ಎಂದು ನೂರಾರು ಸಲ ಗುಡುಗಿದ್ದ ಜೆಡಿಎಸ್‌ ದಂಡನಾಯಕರ ‘ಕೈ’ಗೆ ಈಗ ಕೋಲು ಬಂದಿದೆ. ಅಕ್ರಮ ಎಸಗಿದವರ ಮೇಲೆ ಅವರು ಈ ಕೋಲಿನಿಂದ ರಪರಪನೆ ಬಾರಿಸುತ್ತಾರಾ ಅಥವಾ ಐದು ವರ್ಷಗಳು ‘ತೆನೆ’ಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇನೆ ಎಂದು ವಾಗ್ದಾನ ಮಾಡಿರುವ ಹಿರಿಯ ಮಿತ್ರನ ಹಾದಿಯಲ್ಲೇ ಸಾಗುತ್ತಾರಾ?

ರಾಜ್ಯ ರಾಜಕೀಯದಲ್ಲಿ ಜೋರು ಸದ್ದು ಮಾಡಿದ್ದ ‘ನಂದಿ ಇನ್ಫಾಸ್ಟ್ರಕ್ಚರ್‌ ಕಾರಿಡಾರ್ ಎಂಟರ್ ಪ್ರೈಸಸ್’ (ನೈಸ್) ಕಂಪನಿಯ ಬೆಂಗಳೂರು -ಮೈಸೂರು ಇನ್ಫಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬುದು ದಶಕಗಳಿಂದ ಕೇಳಿ ಬರುತ್ತಿರುವ ದೂರು. ಯೋಜನೆಯ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನಿರಂತರ ಸಮರ ಸಾರಿದ್ದಾರೆ. ಕನಿಷ್ಠ 100 ಪತ್ರಿಕಾಗೋಷ್ಠಿಗಳನ್ನು ನಡೆಸಿ ನೈಸ್‌ ಅಕ್ರಮಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಈಗ ಅಧಿಕಾರದ ಚುಕ್ಕಾಣಿ ಅವರ ಮಗನ ಕೈಗೆ ಬಂದಿದೆ. ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಯೋಜನೆಯನ್ನು ರದ್ದುಪಡಿಸುವ ಇಚ್ಛಾಶಕ್ತಿ ತೋರಿದ್ದರು. ಮತ್ತೊಮ್ಮೆ ಅಂತಹ ಧೈರ್ಯ ತೋರುವರೇ ಎಂಬುದು ಈಗಿನ ಪ್ರಶ್ನೆ.

ನೈಸ್‌ ಅಕ್ರಮ ಆರೋಪಗಳ ವಿಚಾರಣೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಅಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ಸಮಿತಿ ರಚಿಸಿತ್ತು. ಎರಡು ವರ್ಷಗಳ ಹಿಂದೆಯೇ ಸಮಿತಿಯ ವರದಿ ಸಿದ್ಧವಾಗಿತ್ತು. ಸರ್ಕಾರದ ಒಳಗಿರುವ ಪ್ರಭಾವಿ ಶಕ್ತಿಗಳು ನೈಸ್‌ ಕಂಪನಿ ವಿರುದ್ಧ ಕ್ರಮಕ್ಕೆ ಅಡ್ಡಗಾಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. 2016ರ ಬೆಳಗಾವಿ ಅಧಿವೇಶನದಲ್ಲೇ ವರದಿ ಮಂಡಿಸಬೇಕು ಎಂದು ಜೆಡಿಎಸ್‌ ಶಾಸಕರು ಪ್ರತಿಭಟನೆ ನಡೆಸಿ ಪಟ್ಟು ಹಿಡಿದ್ದರು. ಸಮಿತಿ ಕೊನೆಗೆ ಅಳೆದು ತೂಗಿ 2016ರ ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡಿಸಿತ್ತು. ಸಮಿತಿಯ ವರದಿ ಪರಾಮರ್ಶೆಗೆ ಅಧಿಕಾರಿಗಳನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ರಚಿಸಿ ಸರ್ಕಾರ ಕೈತೊಳೆದುಕೊಂಡಿತ್ತು. ಈ ವರದಿ ಲೋಕೋಪಯೋಗಿ ಇಲಾಖೆಯಲ್ಲಿ ದೂಳು ತಿನ್ನುತ್ತಿದೆ.

ಈ ನಡುವೆ, ಯೋಜನೆಯ ಪ್ರವರ್ತಕ, 14ನೇ ವಿಧಾನಸಭೆಯಲ್ಲಿ ಕರ್ನಾಟಕ ಮಕ್ಕಳ ಪಕ್ಷದ ಶಾಸಕರೂ ಆಗಿದ್ದ ಅಶೋಕ ಖೇಣಿ ಅವರು ‘ಹಸ್ತ’ ಪಕ್ಷದ ಹೆಗಲೇರಿ ಕೂತಿದ್ದಾರೆ. ಚುನಾವಣಾ ಸಮಯದಲ್ಲಿ ದಶ ದಿಕ್ಕುಗಳಿಂದ ಎದುರಾದ ಟೀಕೆ ಟಿಪ್ಪಣಿಗಳಿಗೆ ಜಗ್ಗದೆ ಕಾಂಗ್ರೆಸ್‌ ಪಕ್ಷವು ಖೇಣಿ ಅವರಿಗೆ ಮಣೆ ಹಾಕಿತ್ತು. ‘ನೈಸ್‌ ಅಕ್ರಮ ಕೂಪ. ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು 20 ವರ್ಷಗಳಿಂದ ಉಗ್ರ ಪ್ರತಾಪ ತೋರುತ್ತಲ್ಲೇ ಬಂದಿದ್ದ ಸಿದ್ದರಾಮಯ್ಯ ಅವರು ಚುನಾವಣಾ ಹೊತ್ತಲ್ಲಿ ಮೆತ್ತಗಾಗಿದ್ದರು. ಖೇಣಿ ಸೇರ್ಪಡೆಗೆ ಸದ್ದಿಲ್ಲದೆ ಸಮ್ಮತಿ ಸೂಚಿಸಿದ್ದರು. ಆಗ ಸಿಕ್ಕ ಸಹಾಯ‘ಹಸ್ತ’ ಮರೆತು  ಹೊಸ ಗೆಳೆಯ ಉಮೇದಿನಿಂದ ಕ್ರಮ ಕೈಗೊಳ್ಳಲು ಕಾಂಗ್ರೆಸ್‌ ಪಕ್ಷ ಬಿಡುವುದೇ ಎಂಬುದು ಸದ್ಯದ ಕುತೂಹಲ.

ಡಿ.ಕೆ.ಶಿವಕುಮಾರ್‌ ವಿರುದ್ಧವೂ ಆರೋಪ: ಈ ಹಗರಣದಲ್ಲಿ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ನೇರ ಭಾಗಿಯಾಗಿದ್ದಾರೆ ಎಂದು ದೇವೇಗೌಡರು 2014ರಲ್ಲಿ ಗಂಭೀರ ಆರೋಪ ಮಾಡಿದ್ದರು.

‘ಯೋಜನೆಗೆ ಓಡಿಪಿ ನಕ್ಷೆಯ ಕರಡಿಗೆ 2003ರ ಏಪ್ರಿಲ್‌ 25ರಂದು ನಗರಾಭಿವೃದ್ಧಿ ಸಚಿವರು(ಶಿವಕುಮಾರ್) ಅನುಮೋದನೆ ನೀಡಿದ್ದರು. ಕ್ರಿಯಾ ಒಪ್ಪಂದದಲ್ಲಿ ನಮೂದಿಸಲಾದ 20,193 ಎಕರೆಗಳ ಬದಲಾಗಿ 1.75 ಲಕ್ಷ ಎಕರೆ ವಿಸ್ತೀರ್ಣ ಪ್ರದೇಶವನ್ನು ಬಿಎಂಐಸಿಎಪಿಎ ಕಾರ್ಯವ್ಯಾಪ್ತಿಗೆ ಸೇರ್ಪಡೆ ಮಾಡಿರುವುದು ಅಕ್ಷಮ್ಯ’ ಎಂದು ಸದನ ಸಮಿತಿಯೂ ಆಕ್ಷೇಪ ವ್ಯಕ್ತಪಡಿಸಿತ್ತು.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ಶಾಸಕರು ಕಮಲ ಪಕ್ಷಕ್ಕೆ ಜಿಗಿಯದಂತೆ ಹಗಲು ರಾತ್ರಿ ಕಾದವರು ಶಿವಕುಮಾರ್‌. ದಶಕಗಳಿಂದ ಹಾವು ಮುಂಗುಸಿಗಳಂತೆ ಹಾದಿ ಬೀದಿಗಳಲ್ಲಿ ಕಾದಾಡಿದ್ದ ಕುಮಾರಸ್ವಾಮಿ–ಶಿವಕುಮಾರ್ ಈಗ ‘ಆಪ್ತಮಿತ್ರ’ರಂತೆ ಇದ್ದಾರೆ. 2003ರಲ್ಲಿ ಬಿಎಂಐಸಿಪಿಎಯ ಅಧ್ಯಕ್ಷರಾಗಿದ್ದ, ಯೋಜನೆ ವಿಸ್ತರಣೆಗೆ ಅನುಮತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ  ಕೆ.ಎಂ. ಹನುಮಂತರಾಯಪ್ಪ ಅವರನ್ನು ಚುನಾವಣೆ ಹೊತ್ತಿನಲ್ಲಿ ದೇವೇಗೌಡರೇ ಮುಂದೆ ನಿಂತು, ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಕರೆ ತಂದಿದ್ದಾರೆ. ಇವರಿಬ್ಬರಿಗಾಗಿ ಗೌಡರು ಬಿಗಿಪಟ್ಟು ಸಡಿಲಗೊಳಿಸುವರೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿದೆ. ನೈಸ್‌ ಜೊತೆಗಿನ ಒಪ್ಪಂದದ ಅವಧಿ 2026ಕ್ಕೆ ಮುಕ್ತಾಯಗೊಳ್ಳಲಿದೆ.

ಕುಮಾರಸ್ವಾಮಿ ವರಸೆ ಬದಲಾಯಿತೇ?

* ನೈಸ್ ಯೋಜನೆ ರದ್ದು ಮಾಡಲು ಚಿಂತಿಸಿದ್ದೆ. ಆದರೆ, ಆಗ ನನ್ನ ಸಂಪುಟದಲ್ಲಿ ಸಚಿವರಾಗಿದ್ದ ಬಿಜೆಪಿ ನಾಯಕರು ಸಹಕಾರ ಕೊಡಲಿಲ್ಲ. ಸಚಿವ ಸಂಪುಟಕ್ಕೆ ಈ ಯೋಜನೆ ರದ್ದುಪಡಿಸುವ ಪ್ರಸ್ತಾಪ ಬಂದಿತ್ತು. ಸರ್ಕಾರದಲ್ಲಿ ಭಾಗಿಯಾಗಿದ್ದ ಬಿಜೆಪಿ ಸದಸ್ಯರು ಸಂಪುಟದಿಂದ ಹೊರಗೆ ಉಳಿದರು. ಇದರಿಂದಾಗಿ ಸುಮಾರು ₹40 ಸಾವಿರ ಕೋಟಿ ಮೌಲ್ಯದ ಭೂಮಿ ನೈಸ್ ಪಾಲಾಗಿದೆ. ನಮಗೆ ಅಂದು ಬೆಂಬಲ ಕೊಟ್ಟಿದ್ದರೆ ಭೂಮಿ ವಾಪಸ್ ಪಡೆದು ರೈತರಿಗೆ ದೊಡ್ಡ ಮೊತ್ತದ ಪರಿಹಾರ ಕೊಡಬಹುದಿತ್ತು. ಸಾಲ ಮನ್ನಾ ಮಾಡಬಹುದಿತ್ತು. ಬೆಂಗಳೂರು ಅಭಿವೃದ್ಧಿಗೆ ₹15 ಸಾವಿರ ಕೋಟಿ ವಿನಿಯೋಗ ಮಾಡಬಹುದಿತ್ತು.

– 2016ರ ಬೆಳಗಾವಿ ಅಧಿವೇಶನದಲ್ಲಿ ಹೇಳಿಕೆ

* ಅಕ್ರಮ ನಡೆಸಿರುವ ನೈಸ್ ಕಂಪನಿಯಿಂದ ₹ 1,200 ಕೋಟಿಯನ್ನು ವಸೂಲಿ ಮಾಡಬೇಕು ಎಂದು ಸದನ ಸಮಿತಿ ಶಿಫಾರಸು ಮಾಡಿದೆ. ಆ ಹಣವನ್ನು ಖಜಾನೆಗೆ ತುಂಬಿಸಿಲ್ಲ. ಚುನಾವಣೆ ಖರ್ಚಿಗಾಗಿ ಕಾಂಗ್ರೆಸ್ ಇಲ್ಲವೇ ಸಿದ್ದರಾಮಯ್ಯ ಖಾತೆಗೆ ಜಮೆ ಆಗಿರಬಹುದು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಆರೋಪಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು.

– 2018ರ ಮಾರ್ಚ್‌ 7ರಂದು ಹಾಸನದಲ್ಲಿ ಹೇಳಿಕೆ

* ನೈಸ್‌ ಅಕ್ರಮದ ಕುರಿತ ಸದನ ಸಮಿತಿ ವರದಿ ಇದೆ. ವರದಿಯಲ್ಲಿ ಏನಿದೆ ಎಂಬುದು ಕಾಂಗ್ರೆಸ್‌ನವರಿಗೂ ಗೊತ್ತಿದೆ. ಈ ವಿಷಯದಲ್ಲಿ ಯಾವ ರಾಜಿಗೂ ಒಳಗಾಗುವುದಿಲ್ಲ. ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳು ಸರ್ಕಾರದ ಆಸ್ತಿಯನ್ನು ಉಳಿಸುವ ವಿಷಯದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿವೆ. ಕಟ್ಟುನಿಟ್ಟಿನ ತೀರ್ಮಾನ ಕೈಗೊಳ್ಳುತ್ತೇವೆ.

– 2018ರ ಮೇ 27ರಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಹೇಳಿಕೆ

ಹುತ್ತವ ಬಡಿದರೆ ಹಾವು ಸಾಯಬಲ್ಲುದೇ?

ನೈಸ್‌ ಅಕ್ರಮ ದೊಡ್ಡ ಹುತ್ತದಂತೆ ಬೆಳೆದಿದೆ. ಕಾಂಗ್ರೆಸ್‌ ಸರ್ಕಾರ ನೆಪ ಮಾತ್ರಕ್ಕೆ ಹುತ್ತಕ್ಕೆ ಹೊಡೆಯುವ ಕೆಲಸ ಮಾಡಿದೆ.

ಯೋಜನೆಗಾಗಿ ನೀಡಿದ ಸರ್ಕಾರಿ ಭೂಮಿ ಹಾಗೂ ಅತೀ ಕಡಿಮೆ ದರದಲ್ಲಿ ಪರಿಹಾರ ಕೊಟ್ಟು ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನುಂಗಿದ ಹುತ್ತದೊಳಗಿನ ಹಾವುಗಳು ಈಗಲೂ ಸ್ವಚ್ಛಂದವಾಗಿ ಸಂಚರಿಸುತ್ತಿವೆ. ಕೊಬ್ಬಿರುವ ಇವುಗಳ ವಿರುದ್ಧ ಕುಮಾರಸ್ವಾಮಿ ಕ್ರಮ ಕೈಗೊಳ್ಳುವರೇ ಎಂಬ ಚರ್ಚೆ ಆರಂಭವಾಗಿದೆ. ಸದನ ಸಮಿತಿಯ ಸದಸ್ಯರಾಗಿ ನೈಸ್‌ ಅಕ್ರಮ ಬಯಲು ಮಾಡಿದ್ದ ಶಾಸಕರು ಕೂಡ ಈ ಪ್ರಶ್ನೆಗಳನ್ನು ಎತ್ತಲು ಅಣಿಯಾಗಿದ್ದಾರೆ.

ಈ ಯೋಜನೆಯ ಒಪ್ಪಂದವನ್ನೇ ರದ್ದುಪಡಿಸಬೇಕು ಎಂಬುದು ಜೆಡಿಎಸ್‌ ಆರಂಭದಿಂದಲೂ ಮುಂದಿಟ್ಟಿರುವ ಬೇಡಿಕೆ. ಒಂದು ವೇಳೆ ರದ್ದುಪಡಿಸಿದರೆ ಖೇಣಿ ಅವರು ಕೋರ್ಟ್‌ ಮೊರೆ ಹೋಗಲಿದ್ದಾರೆ. ಅಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸರ್ಕಾರದ ಬಳಿ ಯೋಜನೆಗೆ ಸಂಬಂಧಿಸಿದ ಮೂಲ ದಾಖಲೆಗಳೇ ಇಲ್ಲ ಎನ್ನುತ್ತವೆ ಮೂಲಗಳು.

ಈ ಅಕ್ರಮದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಎಂಜಿನಿಯರ್‌ಗಳು ಭಾಗಿಯಾಗಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಾದ ಸವಾಲು ಮೈತ್ರಿ ಸರ್ಕಾರದ ಮುಂದಿದೆ.

ಸದನ ಸಮಿತಿಯ ಪ್ರಮುಖ ಶಿಫಾರಸುಗಳು...

* ನೈಸ್‌ ಅಕ್ರಮಗಳ ಕುರಿತಂತೆ ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಬೇಕು.

* ನೈಸ್‌ ಕಂಪನಿ ವಶದಲ್ಲಿರುವ 11,660 ಎಕರೆ ಹೆಚ್ಚುವರಿ ಭೂಮಿ ವಾಪಸ್‌ ಪಡೆಯಬೇಕು.

* ಯೋಜನೆ ಪೂರ್ಣಗೊಳ್ಳದೆ ಸಂಪರ್ಕ ರಸ್ತೆಗಳಲ್ಲಿ (ಬೆಂಗಳೂರು ಸುತ್ತಮುತ್ತಲ ನೈಸ್‌ ರಸ್ತೆ) ಟೋಲ್‌ ಸಂಗ್ರಹ ಮಾಡುತ್ತಿರುವುದೂ ಅಕ್ರಮ. ಒಪ್ಪಂದದಂತೆ ಕಾಂಕ್ರಿಟ್‌ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲದ ತಾಂತ್ರಿಕ ಲೋಪವನ್ನೂ ಬಳಸಿಕೊಂಡು ಕಂಪನಿ ಈವರೆಗೆ ಅಕ್ರಮವಾಗಿ ವಸೂಲು ಮಾಡಿರುವ ₹ 1,350 ಕೋಟಿ ಟೋಲ್‌ ಮೊತ್ತ ಮರು ವಸೂಲಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT