ಸೋಮವಾರ, ಆಗಸ್ಟ್ 26, 2019
27 °C

ಏಕವ್ಯಕ್ತಿಯಿಂದ ಪರಿಹಾರ ಅಸಾಧ್ಯ

Published:
Updated:

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಅದಾಗಲೇ ಕೆಲ ದಿನಗಳು ಕಳೆದಿದ್ದರೂ ಸಂಪುಟ ರಚನೆ ಆಗಿಲ್ಲ. ಮೈತ್ರಿ ಸರ್ಕಾರದ ಆಡಳಿತ ಯಂತ್ರ ನೆಲಕಚ್ಚಿದೆ ಎಂಬ ಉದ್ಘೋಷದಿಂದ ಅಧಿಕಾರಕ್ಕೆ ಬಂದವರು, ಆಡಳಿತ ಯಂತ್ರವನ್ನು ದುರಸ್ತಿಗೊಳಿಸಿ ಅದಕ್ಕೆ ಸುಸ್ಥಿರ ಚಾಲನೆ ನೀಡುವ ಯೋಚನೆಯನ್ನೇ ಮರೆತಂತಿದೆ. ದಿಲ್ಲಿಗೆ ಎಡತಾಕುವುದು, ಅಧಿಕಾರಿಗಳ ವರ್ಗಾವಣೆ ಮಾಡುವುದು ಮತ್ತು ವೈಮಾನಿಕ ಸಮೀಕ್ಷೆಯಷ್ಟೇ ಪರಿಹಾರವಾಗಬಲ್ಲವೇ? ಸಾರ್ವಜನಿಕ ಕಾರ್ಯಗಳಿಗೆ ಏಕವ್ಯಕ್ತಿಯಿಂದ ಎಂದೂ ಪರಿಹಾರ ದೊರೆಯದು ಎಂಬ ಸತ್ಯ ತಿಳಿದಿಲ್ಲವೇ?

ಕಾದಿದ್ದು ಸಾಕು. ಇನ್ನಾದರೂ ಮಂತ್ರಿಮಂಡಲ ರಚಿಸಿ ಜನರ ನಿರೀಕ್ಷೆಗಳಿಗೆ ಸ್ಪಂದಿಸಲಿ. ಮಳೆಯ ಆರ್ಭಟದಿಂದ ರಾಜ್ಯ ತತ್ತರಿಸುತ್ತಿದೆ. ಗಂಜಿ ಕೇಂದ್ರ, ನಿರಾಶ್ರಿತರಿಗೆ ವಸತಿ ವ್ಯವಸ್ಥೆ, ಅವರ ಆರೋಗ್ಯದ ಕಾಳಜಿ, ಜಾನುವಾರಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಹೆಚ್ಚು ನಿಗಾ ವಹಿಸಲಿ. ಇನ್ನು ವಿರೋಧ ಪಕ್ಷಗಳಂತೂ ನಮಗೆ ಸಂಬಂಧವೇ ಇಲ್ಲವೆಂಬಂತೆ ಕುಳಿತಿವೆ. ಹೀಗಾದರೆ ಸಾಮಾನ್ಯ ಜನರ ಕುಂದುಕೊರತೆಗಳ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರು?

– ಅಶ್ವತ್ಥ, ಕಲ್ಲೇದೇವರಹಳ್ಳಿ, ಕಡೂರು

Post Comments (+)